ಚಾಮರಾಜನಗರ: ಪಾದಯಾತ್ರಿಕನ ಬಲಿ ಪಡೆದಿದ್ದ ಚಿರತೆಯನ್ನು ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಸೆರೆಹಿಡಿಯಲಾಗಿದೆ. ರಂಗಸ್ವಾಮಿ ಒಡ್ಡಿನ ಸಮೀಪ ಕಾಣಿಸಿಕೊಳ್ಳುತ್ತಿದ್ದ ಚಿರತೆ ಸೆರೆ ಹಿಡಿಯಲು ಎರಡು ಬೋನು ಇಡಲಾಗಿತ್ತು, ಬೋನಿನಲ್ಲಿ ಎರಡು ನಾಯಿಗಳನ್ನು ಸಹ ಕಟ್ಟಿ ಹಾಕಲಾಗಿತ್ತು. ಹಾಗೆಯೇ, ಚಿರತೆ ಕಾರ್ಯಪಡೆ, ಕೂಂಬಿAಗ್, ಡ್ರೋನ್ ತಂಡ ಸ್ಥಳದಲ್ಲಿಯೇ ಇದ್ದು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಗುರುವಾರ ರಾತ್ರಿ ೯.೩೦ರ ಸುಮಾರಿಗೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಹಾಗೂ ತಂಡ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಪಶು ವೈದ್ಯಾಧಿಕಾರಿ ಡಾ.ಆದರ್ಶ್ ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಅರಿವಳಿಕೆ ಮೇಲಾಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಮಂಡ್ಯ ತಾಲೂಕಿನ ಚಿರನಹಳ್ಳಿ ಗ್ರಾಮದ ಪ್ರವೀಣ್ ಹಾಗೂ ಸ್ನೇಹಿತರು ಪಾದಯಾತ್ರೆಯ ಮೂಲಕ ಜ.೨೧ರ ಬೆಳಗ್ಗೆ ತಾಳಬೆಟ್ಟದಿಂದ ಹೊರಟಿದ್ದರು. ರಂಗಸ್ವಾಮಿ ಒಡ್ಡಿನ ಸಮೀಪ ಪಾದಯಾತ್ರೆ ತೆರಳುತ್ತಿದ್ದ ಪ್ರವೀಣನ ಮೇಲೆ ಚಿರತೆ ದಾಳಿ ನಡೆಸಿ ಅರಣ್ಯಕ್ಕೆ ಎಳೆದೊಯ್ದು ಕೊಂದಿತ್ತು.

