ರಾಯಚೂರು:”ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಸುಮ್ಮನೆ ಇರಲ್ಲ. ಅಧಿಕಾರದ ಭ್ರಮೆಯಲ್ಲಿದ್ದು, ಖಾಕಿ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು” ಎಂದು ಬಳ್ಳಾರಿ ಐಜಿಪಿ ಡಾ.ಪಿ.ಎಸ್.ಹರ್ಷ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪೊಲೀಸರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಇಲಾಖೆಯಿಂದ ಸಂಪೂರ್ಣ ಬೆಂಬಲವಿದೆ. ಹಾಗೊಂದು ವೇಳೆ, ನಿರ್ಲಕ್ಷ್ಯತನ ವಹಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ.
ಹಲ್ಲೆ ಮಾಡುವುದು, ಒತ್ತಡ ಹೇರುವ ಮೂಲಕ ತೊಂದರೆ ನೀಡುವುದು ತಿಳಿದುಬಂದರೆ, ರಾಜಕೀಯ ನಾಯಕರಾಗಲಿ, ಅಧಿಕಾರಿಗಳಾಗಿರಲಿ, ಸಾರ್ವಜನಿಕರು ಇಲ್ಲವೇ, ಯಾರೇ ಆಗಿದ್ದರೂ ಸಹ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದರು.

