ಬೆಂಗಳೂರು ಎಂದರೆ ಐಟಿ ಹಬ್, ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂಬ ಹೆಸರಿನ ಜೊತೆಗೆ ಇತ್ತೀಚಿನ ದಿನಗಳಲ್ಲಿ ಅನಿವಾರ್ಯವಾಗಿ ನೆನಪಾಗುವುದು ಟ್ರಾಫಿಕ್ ಸಮಸ್ಯೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಅಸಮರ್ಪಕ ರಸ್ತೆ ವ್ಯವಸ್ಥೆ ಬೆಂಗಳೂರು ಸಂಚಾರವನ್ನು ಮತ್ತಷ್ಟು ದುಸ್ತರವಾಗಿಸಿದೆ. ಇದೀಗ ಈ ಸಮಸ್ಯೆ ಜಾಗತಿಕ ಮಟ್ಟದಲ್ಲಿಯೂ ಗುರುತಿಸಲ್ಪಟ್ಟಿದ್ದು, ವಿಶ್ವದ ಅತೀ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ.
ನೆದರ್ಲೆಂಡ್ ಮೂಲದ ಟಾಮ್ ಟಾಮ್ ಸಂಸ್ಥೆ ಬಿಡುಗಡೆ ಮಾಡಿರುವ 2025ರ ಟ್ರಾಫಿಕ್ ಇಂಡೆಕ್ಸ್ ವರದಿ ಪ್ರಕಾರ, ವಿಶ್ವದ ವಿವಿಧ ಮಹಾನಗರಗಳ ಸಂಚಾರ ಸ್ಥಿತಿಯನ್ನು ವಿಶ್ಲೇಷಿಸಿ ಶ್ರೇಯಾಂಕ ನೀಡಲಾಗಿದೆ. ಈ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ನಗರಕ್ಕೂ ಸ್ಥಾನ ದೊರೆತಿದೆ.
ಬೆಂಗಳೂರು ಪಡೆದ ಸ್ಥಾನ ಎಷ್ಟು?: ಈ ವರದಿಯ ಪ್ರಕಾರ, ಮೆಕ್ಸಿಕೋ ಸಿಟಿ ಶೇಕಡಾ 75.9ರಷ್ಟು ಸಂಚಾರ ದಟ್ಟಣೆಯೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಅದಕ್ಕೆ ಸಮೀಪದಲ್ಲೇ ಬೆಂಗಳೂರು ನಗರವು 74.4ರಷ್ಟು ಸಂಚಾರ ದಟ್ಟಣೆಯೊಂದಿಗೆ ಎರಡನೇ ಸ್ಥಾನ ಪಡೆದಿದ್ದು, ಇದು ನಗರಕ್ಕೆ ಕಳವಳಕಾರಿ ಸಂಗತಿಯಾಗಿದೆ.
ಮೂರನೇ ಸ್ಥಾನವನ್ನು ಐರ್ಲೆಂಡ್ನ ಡಬ್ಲಿನ್ ನಗರ (72.9%) ಪಡೆದುಕೊಂಡಿದ್ದು, ನಾಲ್ಕನೇ ಸ್ಥಾನದಲ್ಲಿ ಪೋಲ್ಯಾಂಡ್ನ ಲೋಡ್ಜ್ ನಗರ (72.8%) ಇದೆ.
ಸಂಚಾರ ದಟ್ಟಣೆಯಲ್ಲಿ ಏರಿಕೆ: 2024ರಲ್ಲಿ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಶೇಕಡಾ 72.7 ಇತ್ತಾದರೂ, 2025ರಲ್ಲಿ ಇದು 74.4ಕ್ಕೆ ಏರಿಕೆಯಾಗಿದೆ. ಅಂದರೆ ಒಂದೇ ವರ್ಷದಲ್ಲಿ ಸುಮಾರು 1.7 ಶೇಕಡಾ ಹೆಚ್ಚಳ ಕಂಡಿದೆ. ಇದು ಸಮಸ್ಯೆ ಗಂಭೀರವಾಗುತ್ತಿರುವುದಕ್ಕೆ ಸ್ಪಷ್ಟ ಸೂಚನೆ ನೀಡುತ್ತದೆ.
ಬೆಂಗಳೂರಿನ ಸರಾಸರಿ ವಾಹನ ವೇಗ: ವರದಿಗಳ ಪ್ರಕಾರ, ಬೆಂಗಳೂರು ನಗರದಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ ಕೇವಲ 16.6 ಕಿಲೋಮೀಟರ್ ಆಗಿದೆ. 2024ರಲ್ಲಿ ಇದು 17.6 ಕಿಮೀ ಇತ್ತು.
ಇಲ್ಲಿ 15 ನಿಮಿಷಗಳಲ್ಲಿ ಸರಾಸರಿ 4.2 ಕಿಮೀ ಮಾತ್ರ ಸಂಚರಿಸಲು ಸಾಧ್ಯವಾಗುತ್ತಿದ್ದು, 10 ಕಿಮೀ ದೂರ ತಲುಪಲು ಸುಮಾರು 36 ನಿಮಿಷಕ್ಕಿಂತ ಹೆಚ್ಚು ಸಮಯ ಬೇಕಾಗುತ್ತಿದೆ.
ವರ್ಷಕ್ಕೆ ಎಷ್ಟು ಸಮಯ ಟ್ರಾಫಿಕ್ನಲ್ಲಿ?: ಟ್ರಾಫಿಕ್ ದಟ್ಟಣೆಯಿಂದಾಗಿ ಬೆಂಗಳೂರಿನ ನಾಗರಿಕರು ವರ್ಷಕ್ಕೆ ಸರಾಸರಿ 168 ಗಂಟೆಗಳನ್ನು ರಸ್ತೆಗಳಲ್ಲಿ ಕಳೆಯುತ್ತಿದ್ದಾರೆ. ಇದರಿಂದ ಸಮಯದ ನಷ್ಟದ ಜೊತೆಗೆ ಇಂಧನ ವ್ಯಯ, ಮಾನಸಿಕ ಒತ್ತಡ ಮತ್ತು ಕೆಲಸದ ಪರಿಣಾಮಕಾರಿತ್ವದಲ್ಲೂ ಇಳಿಕೆ ಕಾಣುತ್ತಿದೆ.
ಭಾರತದಲ್ಲಿನ ಇತರೆ ನಗರಗಳ ಸ್ಥಿತಿ: ಭಾರತದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚು ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ನಂತರ ಪುಣೆ, ಮುಂಬೈ, ದೆಹಲಿ ಹಾಗೂ ಕೋಲ್ಕತ್ತಾ ನಗರಗಳು ಬರುತ್ತವೆ. ಜಿಪಿಎಸ್ ಆಧಾರಿತ ರಿಯಲ್ಟೈಮ್ ಸಂಚಾರ ಮಾಹಿತಿ ಮತ್ತು ವಾಹನಗಳ ಚಲನವಲನದ ಡೇಟಾವನ್ನು ಬಳಸಿ ಈ ಅಧ್ಯಯನ ನಡೆಸಲಾಗಿದೆ ಎಂದು ಟಾಮ್ ಟಾಮ್ ಸಂಸ್ಥೆ ತಿಳಿಸಿದೆ.
ಸಂಚಾರ ಸಮಸ್ಯೆಗೆ ಕಾರಣಗಳೇನು?: ತೀವ್ರ ನಗರೀಕರಣ, ವಾಹನಗಳ ಅತಿಯಾದ ಸಂಖ್ಯೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆ, ರಸ್ತೆ ವಿಸ್ತರಣೆ ವಿಳಂಬ, ಐಟಿ ಉದ್ಯೋಗಿಗಳ ಹೆಚ್ಚಳ ಮುಂತಾದ ಅಂಶಗಳು ಟ್ರಾಫಿಕ್ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ಜೊತೆಗೆ, ಸಮಯಕ್ಕೆ ಸರಿಯಾಗಿ ಕಾಮಗಾರಿಗಳು ಪೂರ್ಣಗೊಳ್ಳದಿರುವುದೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿದೆ.
ಪರಿಹಾರ ಮಾರ್ಗಗಳು: ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಮೆಟ್ರೋ ವಿಸ್ತರಣೆ, ಸ್ಮಾರ್ಟ್ ಟ್ರಾಫಿಕ್ ವ್ಯವಸ್ಥೆ, ಬಸ್ ಸೇವೆಗಳ ಸುಧಾರಣೆ, ವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ ಮತ್ತು ರಸ್ತೆ ಅಗಲೀಕರಣಕ್ಕೆ ಆದ್ಯತೆ ನೀಡಬೇಕೆಂದು ವರದಿಯಲ್ಲಿ ಸಲಹೆ ನೀಡಲಾಗಿದೆ. ಕಾಮಗಾರಿಗಳನ್ನು ರಾತ್ರಿ ವೇಳೆ ಅಥವಾ ಕಡಿಮೆ ಸಂಚಾರದ ಸಮಯದಲ್ಲಿ ಪೂರ್ಣಗೊಳಿಸಿದರೆ ಸಮಸ್ಯೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನಲಾಗಿದೆ.
ವಾಹನ ಸವಾರರ ಅಭಿಪ್ರಾಯ: ನಗರದ ಅನೇಕ ವಾಹನ ಸವಾರರು ಪ್ರತಿದಿನ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿದ್ದಾರೆ. “ರಸ್ತೆಗಳ ಅಸಮರ್ಪಕ ವಿನ್ಯಾಸ ಮತ್ತು ಪಾರ್ಕಿಂಗ್ ಸಮಸ್ಯೆಯೇ ಪ್ರಮುಖ ಕಾರಣ” ಎಂದು ಕೆಲವರು ಹೇಳಿದರೆ, “ಮೆಟ್ರೋ ಮತ್ತು ಬಸ್ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿದರೆ ಖಾಸಗಿ ವಾಹನ ಬಳಕೆ ಕಡಿಮೆಯಾಗುತ್ತದೆ” ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಈ ವರದಿ ಬೆಂಗಳೂರು ನಗರ ಎದುರಿಸುತ್ತಿರುವ ಸಂಚಾರ ಸಂಕಷ್ಟದ ತೀವ್ರತೆಯನ್ನು ಸ್ಪಷ್ಟವಾಗಿ ಬಿಂಬಿಸಿದೆ. ತ್ವರಿತ ಹಾಗೂ ದೀರ್ಘಕಾಲೀನ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.

