ಕನ್ನಡ ಕಿರುತೆರೆಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿ ಕೇವಲ ಒಂದು ಸೀರಿಯಲ್ ಮಾತ್ರವಾಗಿರಲಿಲ್ಲ. ಅದೊಂದು ಕನಸುಗಳ ವೇದಿಕೆಯಾಗಿತ್ತು. ಆ ಧಾರಾವಾಹಿಯೊಂದಿಗೆ ಸಂಬಂಧ ಹೊಂದಿದ್ದ ನಟಿ–ನಿರ್ಮಾಪಕಿ ಶ್ರುತಿ ನಾಯ್ಡು, ನಟ ಯಶ್ ಹಾಗೂ ಅಚ್ಯುತ್ ಕುಮಾರ್ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಕಂಡ ಕನಸುಗಳು ಇಂದು ನಿಜವಾಗಿವೆ ಎಂಬುದನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ.
‘ಪ್ರೀತಿ ಇಲ್ಲದ ಮೇಲೆ’ ದಿನಗಳಲ್ಲಿ ಸೆಟ್ ಸಮೀಪದ ಕಟ್ಟೆಯ ಮೇಲೆ ಕೂತು ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದ ಕ್ಷಣಗಳನ್ನು ನೆನಪಿಸಿಕೊಂಡ ಶ್ರುತಿ ನಾಯ್ಡು, “ಅಂದು ನಾವು ಕಂಡ ಕನಸುಗಳು ಹಗಲುಗನಸೋ ಅಥವಾ ಮ್ಯಾನಿಫೆಸ್ಟೇಷನ್‌ನ ಫಲವೋ ಗೊತ್ತಿಲ್ಲ. ಆದರೆ ನಂಬಿಕೆ ಮತ್ತು ಶ್ರಮ ಇದ್ದರೆ ಕನಸು ಸಾಕಾರವಾಗುತ್ತದೆ ಎಂಬುದಕ್ಕೆ ನಮ್ಮ ಜೀವನವೇ ಉದಾಹರಣೆ” ಎಂದು ಹೇಳಿದ್ದಾರೆ.
ಕನ್ನಡ ಧಾರಾವಾಹಿ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುವ ‘ಪ್ರೀತಿ ಇಲ್ಲದ ಮೇಲೆ’ನಲ್ಲಿ ಅನಂತ್ ನಾಗ್, ಯಶ್, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದರು. ಈ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿತ್ತು ಎಂಬುದು ಹಲವರ ಅಭಿಪ್ರಾಯ.
ಆ ದಿನಗಳಲ್ಲಿ ಯಶ್ ಕಿರುತೆರೆಯಲ್ಲಷ್ಟೇ ಪರಿಚಿತ ಮುಖ. ಆದರೆ ಅವರ ಕನಸು ಬಹಳ ದೊಡ್ಡದಾಗಿತ್ತಂತೆ. “ನನ್ನ ಕಟೌಟ್‌ಗಳು ದೇಶದಾದ್ಯಂತ ನಿಲ್ಲಬೇಕು” ಎಂದು ಯಶ್ ಹೇಳುತ್ತಿದ್ದರೆಂದು ಶ್ರುತಿ ನೆನಪಿಸಿಕೊಂಡಿದ್ದಾರೆ. ಆ ಕನಸಿಗೆ ತಕ್ಕಂತೆ ಯಶ್ ತಮ್ಮನ್ನು ತಾವು ತಯಾರಿಸಿಕೊಂಡ ರೀತಿ ಕೂಡ ಅಚ್ಚರಿಯದಾಗಿತ್ತೆಂದು ಅವರು ಹೇಳಿದ್ದಾರೆ. ನಟನೆ, ನೃತ್ಯ, ಕುದುರೆ ಸವಾರಿ ಸೇರಿದಂತೆ ದೊಡ್ಡ ನಟನಿಗೆ ಬೇಕಾದ ಎಲ್ಲ ಕೌಶಲ್ಯಗಳನ್ನು ಸಮಯ ವ್ಯರ್ಥ ಮಾಡದೆ ಕಲಿತವರೇ ಯಶ್ ಎಂಬುದು ಅವರ ಮಾತು.
ಅಚ್ಯುತ್ ಕುಮಾರ್ ತಮ್ಮ ಕನಸನ್ನು ಸ್ವಲ್ಪ ಹಾಸ್ಯಮಿಶ್ರಿತವಾಗಿ ಹೇಳುತ್ತಿದ್ದರಂತೆ. “ಮನೆಯ ಅಟ್ಟ ತುಂಬಾ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಇಡಬೇಕು” ಎಂದು ಅವರು ಹೇಳುತ್ತಿದ್ದರಂತೆ. ಶ್ರುತಿ ನಾಯ್ಡು ಅವರಿಗೆ ಐಷಾರಾಮಿ ಕಾರುಗಳನ್ನು ಖರೀದಿಸುವ ಕನಸು ಇದ್ದಿತ್ತಂತೆ.
ಇಂದು ಹಿಂದಿರುಗಿ ನೋಡಿದಾಗ, ಮೂವರೂ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಂಡಿದ್ದಾರೆ ಎಂದು ಶ್ರುತಿ ಹೆಮ್ಮೆಯಿಂದ ಹೇಳಿದ್ದಾರೆ. ಯಶ್ ಪ್ಯಾನ್–ಇಂಡಿಯಾ ಮಟ್ಟದ ತಾರೆಯಾಗಿದ್ದಾರೆ. ಅಚ್ಯುತ್ ಕುಮಾರ್ ಪ್ರಶಸ್ತಿಗಳ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ತಾವು ಕನಸಿಟ್ಟಂತೆ ಐಷಾರಾಮಿ ಜೀವನಶೈಲಿಯನ್ನು ಸಾಧಿಸಿದ್ದೇನೆ ಎಂದೂ ಶ್ರುತಿ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಯಶ್ ತಮ್ಮ ಆರಂಭದ ದಿನಗಳಲ್ಲಿ ರೊಮ್ಯಾನ್ಸ್ ದೃಶ್ಯಗಳಿಗೆ ಸ್ವಲ್ಪ ಸಂಕೋಚ ಪಡುತ್ತಿದ್ದ ವಿಷಯವನ್ನೂ ಶ್ರುತಿ ಬಹಿರಂಗಪಡಿಸಿದ್ದಾರೆ. ಜೊತೆಗೆ, ಸೀರಿಯಲ್‌ಗಳು ಸಮಾಜದ ಮೇಲೆ ಬೀರುವ ಪರಿಣಾಮ, ಕಿರುತೆರೆಯ ಪಾವತಿ ಸಮಸ್ಯೆಗಳು, ಕಥೆಗಳಲ್ಲಿ ಬರುವ ಒತ್ತಡಗಳು ಹಾಗೂ ಸಾಂಸ್ಕೃತಿಕ ಬದಲಾವಣೆಗಳ ಬಗ್ಗೆ ಸಹ ಅವರು ಮುಕ್ತವಾಗಿ ಮಾತನಾಡಿದ್ದಾರೆ.

