ಸುದ್ದಿ

KLE ಸಂಸ್ಥೆಯಿಂದ ಪ್ರಭಾಕರ್ ಕೋರೆ ದಿಢೀರ್ ನಿರ್ಗಮನ:ಕೋರೆ ಪುತ್ರಿ ಸೇರಿ 12 ನಿರ್ದೇಶಕರ ಆಯ್ಕೆ

Share It

ಬೆಳಗಾವಿ: ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸೈಟಿಯ (ಕೆಎಲ್‌ಇ) ಮುಂದಿನ ಅವಧಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೊಸೈಟಿಯ ಚುನಾವಣಾಧಿಕಾರಿಗಳು ಬುಧವಾರ ಅಧಿಕೃತ ಪ್ರಕಟಣೆ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ.

ಮಹತ್ವದ ಬೆಳವಣಿಗೆಯಲ್ಲಿ ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದ ಡಾ.ಪ್ರಭಾಕರ ಕೋರೆ ಅವರು ನಿರ್ದೇಶಕ ಸ್ಥಾನಕ್ಕೆ ಸಲ್ಲಿಸಿದ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಕಳೆದ 40 ವರ್ಷಗಳಿಂದ ಅಲಂಕರಿಸಿದ್ದ ಈ ಪ್ರತಿಷ್ಠಿತ ಹುದ್ದೆಯನ್ನು ಈಗ ಬಿಟ್ಟುಕೊಟ್ಟಿದ್ದಾರೆ‌

ಪ್ರಕಟಣೆಯ ಪ್ರಕಾರ, ಕೌಜಲಗಿ ಮಹಾಂತೇಶ ಶಿವಾನಂದ ಅವರು ಅಧ್ಯಕ್ಷರಾಗಿ, ತಟವಟಿ ಬಸವರಾಜ ಶಿವಲಿಂಗಪ್ಪ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಬೆಳಗಾವಿ ಆಡಳಿತ ಮಂಡಳಿಯ ಸದಸ್ಯರಾಗಿ ಕೋರೆ ಅಮಿತ ಪ್ರಭಾಕರ, ಬಾಗೇವಾಡಿ ಪ್ರವೀಣ ಅಶೋಕ, ದೊಡವಾಡ ಪ್ರೀತಿ ಕರಣ, ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ, ಕೊಳ್ಳಿ ಮಲ್ಲಿಕಾರ್ಜುನ ಚನಬಸಪ್ಪ, ಮೆಟಗುಡ್ ವಿಜಯ ಶ್ರೀಶೈಲಪ್ಪ, ಮುನವಳ್ಳಿ ಜಯಾನಂದ (ರಾಜು) ಮಹಾದೇವಪ್ಪ, ಮುನವಳ್ಳಿ ಮಂಜುನಾಥ ಶಂಕರಪ್ಪ, ಪಾಟೀಲ ಬಸವರಾಜ ರುದ್ರಗೌಡ, ಪಾಟೀಲ ವಿಶ್ವನಾಥ ಈರನಗೌಡ, ಪಾಟೀಲ ಯಲ್ಲನಗೌಡ ಶಿವಮೊಗ್ಗೆಪ್ಪ ಹಾಗೂ ಪಟ್ಟೇದ ಅನೀಲ ವಿಜಯಬಸಪ್ಪ ಆಯ್ಕೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಶನಿವಾರ ಫೆಬ್ರುವರಿ 7, 2026ರಂದು ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಮತ್ತು ರವಿವಾರ ಫೆಬ್ರುವರಿ 8, 2026ರಂದು ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಬೇಕಾಗಿದ್ದ ಸೊಸೈಟಿಯ ಪದಾಧಿಕಾರಿಗಳ ಆಯ್ಕೆಗಾಗಿ ನಿಗದಿಪಡಿಸಿದ್ದ ಮತದಾನವನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.


Share It

You cannot copy content of this page