ರಾಯಚೂರು: ನಗರದ ಮಾವಿನಕೆರೆ ಏರಿ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಯುವಕನೊಬ್ಬನನ್ನು ಆತನದೇ ಸ್ನೇಹಿತರು ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಜನ್ಮದಿನದ ಆಚರಣೆಗೆ ಕರೆಯುವ ನೆಪದಲ್ಲಿ ನಡೆದ ಸಣ್ಣ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿದೆ.
ಜಹೀರಾಬಾದ್ ಬಡಾವಣೆಯ ನಿವಾಸಿ ವಿಶಾಲ (22) ಎಂಬ ಯುವಕ ಈ ಹತ್ಯೆಗೆ ಬಲಿಯಾಗಿದ್ದಾನೆ. ಆರೋಪಿ ಬಸವರಾಜ, ಜನ್ಮದಿನದ ಪಾರ್ಟಿ ನೀಡುವುದಾಗಿ ಹೇಳಿ ವಿಶಾಲನನ್ನು ಕೆರೆ ದಂಡೆಗೆ ಕರೆಸಿಕೊಂಡಿದ್ದ ಎನ್ನಲಾಗಿದೆ. ಅಲ್ಲಿ ಕ್ಷುಲ್ಲಕ ವಿಷಯಕ್ಕೆ ಮಾತಿನ ಚಕಮಕಿ ಆರಂಭವಾಗಿ ಗಂಭೀರ ಘರ್ಷಣೆಗೆ ತಿರುಗಿದೆ.
ಈ ಪ್ರಕರಣದಲ್ಲಿ ಜಹೀರಾಬಾದ್ ಬಡಾವಣೆಯ ರಾಜು ಅಲಿಯಾಸ್ ಯೇಸು (19) ಹಾಗೂ ಬಸವರಾಜ (19) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ನಡೆಸಿದ ನಂತರ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಡಿವೈಎಸ್‌ಪಿ ಶಾಂತವೀರ ಅವರು ಹಿಡಿದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಲು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣವನ್ನು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

