ಪೆಸಿಫಿಕ್ ಮಹಾಸಾಗರದಲ್ಲಿರುವ ಪುಟ್ಟ ದ್ವೀಪ ರಾಷ್ಟ್ರ ಟೊಂಗಾ ವಿಶ್ವದ ಅನೇಕ ದೇಶಗಳಿಂದ ಭಿನ್ನವಾದ ವಿಶಿಷ್ಟ ಕಾನೂನನ್ನು ಹೊಂದಿದೆ. ಇಲ್ಲಿ ಭಾನುವಾರ ಕೆಲಸ ಮಾಡುವುದು ಕೇವಲ ಸಾಮಾಜಿಕ ತಪ್ಪಲ್ಲ, ನೇರವಾಗಿ ಕಾನೂನು ಉಲ್ಲಂಘನೆಯಾಗುತ್ತದೆ. ಸಂವಿಧಾನದಲ್ಲೇ ಈ ನಿಯಮವನ್ನು ಸ್ಪಷ್ಟವಾಗಿ ದಾಖಲಿಸಿರುವುದರಿಂದ, ಅದನ್ನು ಮೀರಿ ದುಡಿದರೆ ದಂಡ ಅಥವಾ ಜೈಲು ಶಿಕ್ಷೆಯ ಭೀತಿ ಎದುರಾಗುತ್ತದೆ.
ಸಂವಿಧಾನದಲ್ಲೇ ‘ಸಂಡೇ ಲಾ’ಗೆ ಮಾನ್ಯತೆ
ಟೊಂಗಾದ ಸಂವಿಧಾನದ 6ನೇ ವಿಧಿಯಲ್ಲಿ ಭಾನುವಾರವನ್ನು ‘ಪವಿತ್ರ ಸಬ್ಬತ್’ ಎಂದು ಘೋಷಿಸಲಾಗಿದೆ. ಈ ದಿನವನ್ನು ದೇವಾರಾಧನೆ ಮತ್ತು ವಿಶ್ರಾಂತಿಗೆ ಮಾತ್ರ ಮೀಸಲು ಮಾಡಬೇಕೆಂಬುದು ಅಲ್ಲಿನ ಕಾನೂನಿನ ಆಶಯ. ಜಗತ್ತಿನ ಬೇರೆ ಯಾವುದೇ ರಾಷ್ಟ್ರಗಳಲ್ಲಿ ವಾರಾಂತ್ಯದ ರಜೆಗೆ ಇಷ್ಟೊಂದು ಕಟ್ಟುನಿಟ್ಟಾದ ಸಂವಿಧಾನಿಕ ರಕ್ಷಣೆ ಇಲ್ಲವೆಂದರೆ ಅತಿಶಯೋಕ್ತಿ ಅಲ್ಲ.
ಭಾನುವಾರ ಬಂದರೆ ದೇಶವೇ ನಿಶ್ಶಬ್ದ
ಟೊಂಗಾದಲ್ಲಿ ಭಾನುವಾರ ಆರಂಭವಾದರೆ ಇಡೀ ದೇಶವೇ ಸ್ಥಬ್ಧವಾಗುತ್ತದೆ. ಅಂಗಡಿ-ಮುಂಗಟ್ಟುಗಳು ಮಾತ್ರವಲ್ಲ, ಬಂದರುಗಳು ಮತ್ತು ವಿಮಾನ ನಿಲ್ದಾಣಗಳೂ ಸಹ ಕಾರ್ಯನಿರ್ವಹಿಸುವುದಿಲ್ಲ. ವಿಮಾನ ಸಂಚಾರ, ಹಡಗು ಓಡಾಟ ಎಲ್ಲವೂ ಸಂಪೂರ್ಣವಾಗಿ ನಿಲ್ಲುತ್ತದೆ. ರಸ್ತೆ ಬದಿಯ ಸಣ್ಣ ವ್ಯಾಪಾರಿಯೂ ತನ್ನ ಗಾಡಿಯನ್ನು ತೆಗೆಯಲು ಅವಕಾಶವಿಲ್ಲ. ಒಂದು ದಿನದ ಮಟ್ಟಿಗೆ ದೇಶವೇ ‘ಪೂರ್ಣ ವಿರಾಮ’ದ ಸ್ಥಿತಿಗೆ ಹೋಗುತ್ತದೆ.
ಕಾನೂನು ಭಂಗ ಮಾಡಿದರೆ ಕಠಿಣ ಕ್ರಮ
ಭಾನುವಾರ ಸಾರ್ವಜನಿಕವಾಗಿ ಕೆಲಸ ಮಾಡುತ್ತಿರುವುದು ಕಂಡುಬಂದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ದಂಡ ವಿಧಿಸುವುದು ಅಥವಾ ಜೈಲು ಶಿಕ್ಷೆ ನೀಡುವುದು ಇಲ್ಲಿನ ನಿಯಮ. ಇದಕ್ಕಿಂತ ವಿಶೇಷವೆಂದರೆ, ಆ ದಿನ ನಡೆದ ಯಾವುದೇ ವ್ಯಾಪಾರ ಒಪ್ಪಂದಗಳಿಗೆ ಕಾನೂನು ಮಾನ್ಯತೆ ಇರುವುದಿಲ್ಲ. ಅಂದರೆ, ಭಾನುವಾರ ಮಾಡಿದ ವ್ಯವಹಾರ ಕಾಗದದ ಮೇಲಷ್ಟೇ ಉಳಿದು, ಕಾನೂನಿನ ದೃಷ್ಟಿಯಲ್ಲಿ ಶೂನ್ಯವಾಗುತ್ತದೆ.
ತುರ್ತು ಸೇವೆಗಳಿಗೆ ಮಾತ್ರ ವಿನಾಯಿತಿ
ಇಷ್ಟೊಂದು ಕಠಿಣ ನಿಯಮಗಳ ನಡುವೆಯೂ ಮಾನವೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಆಸ್ಪತ್ರೆಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದಂತಹ ತುರ್ತು ಸೇವೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ. ಪ್ರವಾಸಿಗರ ಸೌಲಭ್ಯಕ್ಕಾಗಿ ಸರ್ಕಾರದ ವಿಶೇಷ ಅನುಮತಿ ಪಡೆದ ಕೆಲವು ಹೋಟೆಲ್ಗಳಿಗೆ ಮಾತ್ರ ಭಾನುವಾರ ಕೆಲಸ ಮಾಡಲು ಅವಕಾಶವಿದೆ. ಆದರೆ ಸ್ಥಳೀಯ ನಿವಾಸಿಗಳಿಗೆ ಈ ದಿನ ದುಡಿಮೆ ಮಾಡುವ ಅವಕಾಶವೇ ಇಲ್ಲವೆನ್ನಬಹುದು.
ಒಟ್ಟಾರೆ, ಟೊಂಗಾದ ‘ಸಂಡೇ ಲಾ’ ವಿಶ್ವದ ಅಪರೂಪದ ಕಾನೂನುಗಳಲ್ಲಿ ಒಂದಾಗಿದ್ದು, ಭಾನುವಾರವನ್ನು ಸಂಪೂರ್ಣವಾಗಿ ವಿಶ್ರಾಂತಿ ಮತ್ತು ಧಾರ್ಮಿಕ ಆಚರಣೆಗೆ ಮೀಸಲು ಮಾಡುವುದರಲ್ಲಿ ಈ ದೇಶ ಅತೀವ ಕಟ್ಟುನಿಟ್ಟನ್ನು ಪಾಲಿಸುತ್ತಿದೆ.

