ಕ್ರೀಡೆ ಸುದ್ದಿ

ಪದ್ಮ ಪ್ರಶಸ್ತಿಗಳ ಘೋಷಣೆ: ರೋಹಿತ್ ಶರ್ಮಾ, ಹರ್ಮನ್‌ಪ್ರೀತ್ ಕೌರ್ ಸೇರಿ 9 ಕ್ರೀಡಾ ಸಾಧಕರಿಗೆ ರಾಷ್ಟ್ರ ಗೌರವ

Share It

ನವದೆಹಲಿ: 2026ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದ ಗಣ್ಯರ ಪಟ್ಟಿಯನ್ನು ಗಣರಾಜ್ಯೋತ್ಸವದ ಮುನ್ನಾದಿನ ಭಾರತ ಸರ್ಕಾರ ಪ್ರಕಟಿಸಿದೆ.

ಒಟ್ಟು 131 ಮಂದಿ ವಿವಿಧ ಕ್ಷೇತ್ರಗಳಿಂದ ಗೌರವಕ್ಕೆ ಪಾತ್ರರಾಗಿದ್ದು, ಇದರಲ್ಲಿ ಕ್ರೀಡಾ ವಲಯದ 9 ಸಾಧಕರು ಸ್ಥಾನ ಪಡೆದಿದ್ದಾರೆ. ಕ್ರಿಕೆಟ್ ಲೋಕದ ಪ್ರಮುಖ ನಾಯಕರುಗಳಾದ ರೋಹಿತ್ ಶರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ ನಾಯಕತ್ವಕ್ಕಾಗಿ ರೋಹಿತ್ ಶರ್ಮಾ ಅವರನ್ನು ಗೌರವಿಸಲಾಗಿದೆ. ಅವರ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಇದಕ್ಕೂ ಮುನ್ನ 2023ರ ಏಕದಿನ ವಿಶ್ವಕಪ್ ಫೈನಲ್ ತಲುಪಿದ ಸಾಧನೆಯೂ ಅವರ ನಾಯಕತ್ವದ ಮಹತ್ವವನ್ನು ತೋರಿಸುತ್ತದೆ.

ಇನ್ನೊಂದೆಡೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಜಯಿಸುವ ಮಟ್ಟಕ್ಕೆ ಕರೆದೊಯ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 2025ರ ಮಹಿಳಾ ವಿಶ್ವಕಪ್ ಗೆಲುವು ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಕ್ರೀಡಾ ಸಾಧಕರ ಪಟ್ಟಿಯಲ್ಲಿ ಮಾಜಿ ಟೆನಿಸ್ ತಾರೆ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಜೊತೆಗೆ ಪ್ಯಾರಾ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರವೀಣ್ ಕುಮಾರ್, ಹಾಕಿ ಆಟಗಾರರಾದ ಬಲದೇವ್ ಸಿಂಗ್ ಹಾಗೂ ಸವಿತಾ ಪುನಿಯಾ, ಸಾಂಪ್ರದಾಯಿಕ ಸಮರ ಕಲೆಗಳಲ್ಲಿ ಭಗವಾನ್‌ದಾಸ್ ರಾಯ್ಕ್ವಾರ್ ಮತ್ತು ಸಿಲಂಬಂ ಕಲೆಗಾಗಿ ಕೆ. ಪಂಜನಿವೇಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಮಾಜಿ ಭಾರತೀಯ ಕುಸ್ತಿ ತರಬೇತುದಾರ ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಭಾರತೀಯ ಕುಸ್ತಿಪಟುಗಳ ತರಬೇತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಪದ್ಮ ಪ್ರಶಸ್ತಿ ಪಡೆದ ಕ್ರೀಡಾ ಸಾಧಕರ ಸಂಪೂರ್ಣ ಪಟ್ಟಿ – 2026

  1. ರೋಹಿತ್ ಶರ್ಮಾ (ಕ್ರಿಕೆಟ್) – ಪದ್ಮಶ್ರೀ
  2. ಹರ್ಮನ್‌ಪ್ರೀತ್ ಕೌರ್ (ಕ್ರಿಕೆಟ್) – ಪದ್ಮಶ್ರೀ
  3. ವಿಜಯ್ ಅಮೃತರಾಜ್ (ಟೆನಿಸ್) – ಪದ್ಮಭೂಷಣ
  4. ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್) – ಪದ್ಮಶ್ರೀ
  5. ಬಲದೇವ್ ಸಿಂಗ್ (ಹಾಕಿ) – ಪದ್ಮಶ್ರೀ
  6. ಭಗವಾನ್‌ದಾಸ್ ರಾಯ್ಕ್ವಾರ್ (ಸಾಂಪ್ರದಾಯಿಕ ಸಮರ ಕಲೆಗಳು) – ಪದ್ಮಶ್ರೀ
  7. ಕೆ. ಪಂಜನಿವೇಲ್ (ಸಿಲಂಬಂ) – ಪದ್ಮಶ್ರೀ
  8. ಸವಿತಾ ಪುನಿಯಾ (ಹಾಕಿ) – ಪದ್ಮಶ್ರೀ
  9. ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ (ಕುಸ್ತಿ ತರಬೇತುದಾರ – ಮರಣೋತ್ತರ) – ಪದ್ಮಶ್ರೀ

Share It

You cannot copy content of this page