ಚಾಮರಾಜನಗರ: ಹೆಣ್ಣು ಮಗುವನ್ನು ಸಾಕಲು ಇಷ್ಟವಿಲ್ಲದೇ 50 ಸಾವಿರ ರೂ.ಗೆ ಮಾರಾಟ ಮಾಡಿದ್ದ, ಪೋಷಕರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರದ ರಾಮಸಮುದ್ರ ಟೌನ್‌ನಲ್ಲಿ ವಾಸವಿದ್ದ ಸಿಂಧು ಮತ್ತು ಮಂಜುನಾಯಕ ಬಂಧಿತರು. ಜೊತೆಗೆ, ಮಧ್ಯವರ್ತಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ಶಾಂತಾ, ಮಗು ಖರೀದಿ ಮಾಡಿದ್ದ ಹಾಸನದ ಅರಕಲಗೂಡು ತಾಲೂಕು ಕೋಣನೂರಿನ ಜವರಯ್ಯ ಮತ್ತು ನೇತ್ರಾ ದಂಪತಿ ಜೈಲು ಸೇರಿದ್ದಾರೆ.
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ 2025 ರ ಜುಲೈ 26ರಂದು ಸಿಂಧು ಮತ್ತು ಮಂಜುನಾಯಕಗೆ ಹೆಣ್ಣು ಮಗು ಜನಿಸಿತ್ತು. ಆದರೆ ಮಗು ಪಾಲಕರ ವಶದಲ್ಲಿ ಇರಲಿಲ್ಲ. ವಿಷಯ ತಿಳಿದ ಮೇಲೆ ಸೆ.8ರಂದು ಸ್ಥಳಕ್ಕೆ ಪಟ್ಟಣ ಪೊಲೀಸ್ ಠಾಣೆ ಸಿಬ್ಬಂದಿ, ಮಕ್ಕಳ ಸಹಾಯವಾಣಿ, ಆಶಾ ಕಾರ್ಯಕರ್ತೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಭೇಟಿ ಮಾಡಿ ವಿಚಾರಿಸಿದಾಗ ಮಗು ಸತ್ತು ಹೋಯ್ತು. ಅಂತ್ಯಕ್ರಿಯೆ ಮಾಡಲಾಯಿತು ಎಂದು ಹೇಳಿಕೆ ನೀಡಿದ್ದರು.
ಆದರೆ, ಪಾಲಕರ ಹೇಳಿಕೆಯಲ್ಲಿ ಗೊಂದಲ ಮತ್ತು ಅನುಮಾನ ಮೂಡಿದೆ ಎಂದು 2025ರ ಸೆಪ್ಟಂಬರ್ 15ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಕಳೆದ 6 ತಿಂಗಳಿನಿAದ ತಲೆಮರೆಸಿಕೊಂಡಿದ್ದ ಸಿಂಧು ಮತ್ತು ಮಂಜುನಾಯಕ ಅವರನ್ನು ತಾಂತ್ರಿಕ ಮತ್ತು ವೈಜ್ಞಾನಿಕ ತನಿಖಾ ವಿಧಾನದಿಂದ ಪತ್ತೆ ಹಚ್ಚಿದಾಗ ಮಗು ಮಾರಾಟ ಬೆಳಕಿಗೆ ಬಂದಿದೆ.
ಮಗು ಸತ್ತು ಹೋಯಿತು ಎಂದು ಮಂಜುನಾಯಕ ಸುಳ್ಳು ಹೇಳಿದ್ದ. ಬಸ್‌ನಲ್ಲಿ ಬರುವಾಗ ಮಗು ಮರಣ ಹೊಂದಿತು. ಅದನ್ನು ಗೊತ್ತಿದ್ದವರಿಗೆ ಕೊಟ್ಟು ಅಂತ್ಯಕ್ರಿಯೆ ಮಾಡಲು ಹೇಳಿದೆ. ಅವರು ಮಗುವಿನ ಶವವನ್ನು ಎಲ್ಲಿ ಹೂತು ಹಾಕಿದ್ದಾರೆ ಅಂತ ಗೊತ್ತಿಲ್ಲ ಎಂದು ವಾದ ಮಾಡಿದ್ದ. ಆದರೆ ಕೊನೆಗೇ ತಾಯಿ ಸಿಂಧು ಮಗು ಮಾರಾಟವಾಗಿರುವುದನ್ನು ಒಪ್ಪಿಕೊಂಡಿದ್ದಳು.
ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಡಿ.ಗ್ರೂಪ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಶಾಂತಾ ಮೂಲಕ ಹಾಸನದ ಕೊಣನೂರು ಗ್ರಾಮದ ಮಕ್ಕಳಿಲ್ಲದ ಜವರಯ್ಯ ಮತ್ತು ನೇತ್ರಾ ದಂಪತಿಗೆ 50 ಸಾವಿರ ರೂ.ಗೆ ಮಾರಾಟ ಮಾಡಿರುವುದಾಗಿ ತಿಳಿದುಬಂತು.
ಬಳಿಕ ಸಿಂಧು ಮತ್ತು ಮಂಜುನಾಯಕ, ಶಾಂತ, ಜವರಯ್ಯ ಮತ್ತು ನೇತ್ರಾ ಅವರನ್ನು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜವರಯ್ಯ ಮತ್ತು ನೇತ್ರಾ ದಂಪತಿ ಬಳಿ ಇದ್ದ 6 ತಿಂಗಳ ಹೆಣ್ಣು ಮಗುವನ್ನು ರಕ್ಷಿಸಿರುವ ಪೊಲೀಸರು, ಅದನ್ನು ಶಿಶು ಅಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿದ್ದಾರೆ.

