ಅಪರಾಧ ಸುದ್ದಿ

ದೈಹಿಕ ಸಂಪರ್ಕವಿಲ್ಲದೆ ಗರ್ಭಧಾರಣೆ ಹೇಗೆ? ಯೋಧನ ಮನವಿಗೆ ಸ್ಪಂದಿಸಿದ ಹೈಕೋರ್ಟ್‌: ಡಿಎನ್‌ಎ ಪರೀಕ್ಷೆಗೆ ಸೂಚನೆ

Share It

ಇಂದೋರ್ :ಪತ್ನಿಯೊಂದಿಗೆ ದೈಹಿಕ ಸಂಪರ್ಕವೇ ಇಲ್ಲದ ಅವಧಿಯಲ್ಲಿ ಗರ್ಭಧಾರಣೆ ಸಂಭವಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಯೋಧನೊಬ್ಬ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಮಗುವಿನ ಡಿಎನ್‌ಎ ಪರೀಕ್ಷೆ ನಡೆಸುವಂತೆ ಆದೇಶಿಸಿದೆ.

ಪತ್ನಿ ತನಗೆ ನಿಷ್ಠೆ ಕಳೆದುಕೊಂಡಿದ್ದಾಳೆ ಎಂದು ಆರೋಪಿಸಿರುವ ಯೋಧ, ವಿಚ್ಛೇದನಕ್ಕೂ ಮನವಿ ಮಾಡಿದ್ದಾನೆ. ಈ ಪ್ರಕರಣ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಯೋಧನ ಪತ್ನಿ ಡಿಎನ್‌ಎ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಘಟನೆ ಹಿನ್ನೆಲೆ ಏನು?: ಯೋಧ ಮದುವೆ ಬಳಿಕ ಕೆಲಕಾಲ ಪತ್ನಿಯೊಂದಿಗೆ ವಾಸವಿದ್ದು, ಕರ್ತವ್ಯ ನಿಮಿತ್ತ ಸೇವೆಗೆ ತೆರಳಿದ್ದ. ಆರು ತಿಂಗಳಿಗೆ ಒಮ್ಮೆ ರಜೆ ಪಡೆದು ಮನೆಗೆ ಬರುತ್ತಿದ್ದ. ಆದರೆ ಸುಮಾರು ಎಂಟು ತಿಂಗಳ ನಂತರ ರಜೆಗೆ ಬಂದಾಗ, ಪತ್ನಿ ತಾನು ಮೂರು ತಿಂಗಳ ಗರ್ಭಿಣಿ ಎಂದು ತಿಳಿಸಿದ್ದರಿಂದ ಯೋಧನಿಗೆ ಆಘಾತವಾಗಿದೆ.

8 ತಿಂಗಳಲ್ಲಿ ತಾನು ಮನೆಗೆ ಬಂದಿಲ್ಲ, ಪತ್ನಿಯೊಂದಿಗೆ ದೈಹಿಕ ಸಂಪರ್ಕ ಇರಲಿಲ್ಲ ಎಂದು ಯೋಧ ಕೋರ್ಟ್ ಮುಂದೆ ವಾದಿಸಿದ್ದಾನೆ. 8 ತಿಂಗಳ ಹಿಂದಿನ ಭೇಟಿಯಲ್ಲೇ ಗರ್ಭಧಾರಣೆ ಆಗಿದ್ದರೆ, ಗರ್ಭಾವಧಿ ಹೆಚ್ಚು ಇರಬೇಕಿತ್ತು. ಹೀಗಾಗಿ, ಪತ್ನಿ ನಡೆ ಅನುಮಾನಾಸ್ಪದ ಎಂದು ಆತ ಆರೋಪಿಸಿದ್ದಾನೆ. ಈ ಹಿನ್ನೆಲೆ ಯೋಧ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದು, ಪತ್ನಿ ಮೋಸ ಮಾಡಿದ್ದಾಳೆ ಎಂದು ಹೇಳಿ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾನೆ.

ಕೋರ್ಟ್ ಮುಂದೆ ಯೋಧನ ವಾದ: ಯೋಧನು ಕೋರ್ಟ್‌ನಲ್ಲಿ, “ಮಗು ನನ್ನದೇ ಆಗಿದ್ದರೆ ಅದರ ಸಂಪೂರ್ಣ ಜವಾಬ್ದಾರಿ ವಹಿಸಲು ನಾನು ಸಿದ್ಧನಿದ್ದೇನೆ. ಜೀವನಾಂಶ ನೀಡುವುದರಿಂದ ನಾನು ಹಿಂದೆ ಸರಿಯುತ್ತಿಲ್ಲ. ಆದರೆ ಮಗು ನನ್ನದೇ ಎಂಬುದು ಕಾನೂನಾತ್ಮಕವಾಗಿ ಸಾಬೀತಾಗಬೇಕು” ಎಂದು ಹೇಳಿದ್ದಾನೆ. ತಾನು ಒಬ್ಬ ಯೋಧನಾಗಿ ಜವಾಬ್ದಾರಿಯಿಂದ ಈ ವಿಚಾರವನ್ನು ಮುಂದಿಟ್ಟಿದ್ದೇನೆ ಎಂದು ಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾನೆ.

ಡಿಎನ್‌ಎ ಪರೀಕ್ಷೆಗೆ ಪತ್ನಿಯ ವಿರೋಧ: ಇತ್ತ ಪತ್ನಿ ಡಿಎನ್‌ಎ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿ, ಮಗುವಿನ ಖಾಸಗೀತನ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ವಾದಿಸಿದ್ದರು. ಇಂತಹ ಪರೀಕ್ಷೆಗಳು ಮಗುವಿನ ಮಾನಸಿಕ ಸ್ಥಿತಿಗೆ ಆಘಾತ ನೀಡಬಹುದು. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಪತ್ನಿ ಕೋರ್ಟ್‌ಗೆ ತಿಳಿಸಿದ್ದರು.

ಹೈಕೋರ್ಟ್ ತೀರ್ಪು ಏನು?: ವಾದ ಆಲಿಸಿದ ಹೈಕೋರ್ಟ್, ಯೋಧ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿಲ್ಲ. ಮಗುವಿನ ತಂದೆ ಯಾರು ಮತ್ತು ಮಗುವಿನ ಹೊಣೆ ಯಾರು ವಹಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಅಗತ್ಯವಾಗಿದೆ. ಈ ಸ್ಪಷ್ಟತೆಗಾಗಿ ಡಿಎನ್‌ಎ ಪರೀಕ್ಷೆ ಅನಿವಾರ್ಯ ಎಂದು ಕೋರ್ಟ್ ತಿಳಿಸಿದೆ. ಹೀಗಾಗಿ ಮಗುವಿನ ಡಿಎನ್‌ಎ ಪರೀಕ್ಷೆ ನಡೆಸುವಂತೆ ಆದೇಶ ನೀಡಿದ್ದು, ಪತ್ನಿಯ ಆಕ್ಷೇಪಣೆ ತಳ್ಳಿ ಹಾಕಿದೆ.


Share It

You cannot copy content of this page