ಸುದ್ದಿ

ವೈರಲ್ ಹಾಡಿನಿಂದ ಬೆಳ್ಳಿಪರದೆವರೆಗೆ: ‘ಹೂವಿನ ಬಾಣದಂತೆ’ ಹುಡುಗಿ ನಿತ್ಯಾಶ್ರೀಗೆ ಸ್ಯಾಂಡಲ್ವುಡ್‌ ಅವಕಾಶ !

Share It

ಮೈಸೂರಿನ ಯುವತಿ ನಿತ್ಯಶ್ರೀ ಸೋಷಿಯಲ್ ಮೀಡಿಯಾದಲ್ಲಿ ಅನಿರೀಕ್ಷಿತವಾಗಿ ವೈರಲ್ ಆದ ನಂತರ ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಸುದ್ದಿಯಾಗಿದೆ. ಅಪಶ್ರುತಿಯಲ್ಲಿ ಹಾಡಿದ ಒಂದು ಹಾಡು ಅವರನ್ನು ಜನಪ್ರಿಯಳನ್ನಾಗಿಸಿದರೂ, ಅದರ ಜೊತೆಗೆ ಟೀಕೆ ಮತ್ತು ಟ್ರೋಲ್‌ಗಳನ್ನೂ ಎದುರಿಸಬೇಕಾಯಿತು. ಈ ಎಲ್ಲದ ನಡುವೆಯೇ ಇದೀಗ ನಿತ್ಯಶ್ರೀಗೆ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ದೊರೆತಿದೆ.

ಗಾಯಕಿ ಶ್ರೇಯಾ ಘೋಷಲ್ ಹಾಡಿರುವ ‘ಹೂವಿನ ಬಾಣದಂತೆ’ ಹಾಡನ್ನು ಸ್ನೇಹಿತರಿಗಾಗಿ ಸರಳವಾಗಿ ಹಾಡಿದ ವಿಡಿಯೋ ಒಂದು ರಾತ್ರೋರಾತ್ರಿ ವೈರಲ್ ಆಗಿತ್ತು. ವೈರಲ್ ಆಗಬೇಕೆಂಬ ಉದ್ದೇಶವೇ ಇಲ್ಲದೆ ಹಾಡಿದ್ದ ನಿತ್ಯಶ್ರೀ, ಅದೃಷ್ಟದ ತಿರುವಿನಿಂದಲೇ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿಬಿಟ್ಟರು. ನಂತರ ಹಲವು ಕಾರ್ಯಕ್ರಮಗಳು, ವೇದಿಕೆಗಳು ಅವರನ್ನು ಆಹ್ವಾನಿಸಿತು. ಜನರೇ ಅವರನ್ನು ಸೆಲೆಬ್ರಿಟಿಯನ್ನಾಗಿಸಿದಂತೆ ಆಯಿತು.

ಸ್ಯಾಂಡಲ್ವುಡ್‌ಗೆ ಅಧಿಕೃತ ಎಂಟ್ರಿ

ಈ ಕುರಿತು ಸ್ವತಃ ನಿತ್ಯಶ್ರೀ ಮಾತನಾಡಿದ್ದು, ತಾವು ಸಿನಿಮಾ ಅವಕಾಶ ಪಡೆದಿರುವುದು ನಿಜ ಎಂದು ದೃಢಪಡಿಸಿದ್ದಾರೆ. ಆದರೆ ಯಾವ ಸಿನಿಮಾ, ಯಾವ ಪಾತ್ರ ಎಂಬ ಮಾಹಿತಿಯನ್ನು ಈಗಲೇ ಬಹಿರಂಗಪಡಿಸಲು ಅವರು ಇಚ್ಛಿಸಲಿಲ್ಲ. ಎಲ್ಲವನ್ನೂ ಸೀಕ್ರೆಟ್ ಆಗಿಯೇ ಇಡಲು ಬಯಸಿದ್ದಾರೆ. ಆದರೂ, ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿರುವುದು ಅವರ ಜೀವನದ ಮಹತ್ವದ ಹೆಜ್ಜೆ ಎಂಬುದು ಸ್ಪಷ್ಟವಾಗಿದೆ.

ಆದರೆ ಜನಪ್ರಿಯತೆ ಹೆಚ್ಚಾದಂತೆ ಟೀಕೆಗಳೂ ಹೆಚ್ಚಾಗಿವೆ. ಒಂದು ಕಾಲದಲ್ಲಿ ಮೆಚ್ಚಿದವರೇ ಇಂದು ನಿತ್ಯಶ್ರೀ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಟುವಾಗಿ ಟ್ರೋಲ್ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಿದ ಬಳಿಕ ಈ ಟೀಕೆ ಇನ್ನಷ್ಟು ಹೆಚ್ಚಾಗಿದೆ.

ದೊಡ್ಡ ವೇದಿಕೆ, ದೊಡ್ಡ ಚರ್ಚೆ

ಇತ್ತೀಚಿನ ದಿನಗಳಲ್ಲಿ ದೊಡ್ಡ ಸಾಧನೆ ಮಾಡಿದವರನ್ನೇ ಪ್ರಶ್ನಿಸುವ ಮನಸ್ಥಿತಿ ಹೆಚ್ಚಾಗಿದೆ. ಇದಕ್ಕೂ ಮೊದಲು ಡಾ. ಬ್ರೋ (ಗಗನ್) ಅವರನ್ನು ವೇದಿಕೆಗೆ ಕರೆಸಿದಾಗಲೂ ಇದೇ ರೀತಿಯ ಟೀಕೆಗಳು ಕೇಳಿಬಂದಿದ್ದವು. ಅದೇ ರೀತಿಯಲ್ಲಿ, ಯಾವುದೇ ತಪ್ಪು ಮಾಡದ ನಿತ್ಯಶ್ರೀಗೂ ಇದೀಗ ಟೀಕೆಗಳ ಹೊರೆ ಬಿದ್ದಿದೆ.

ನೋವಿನಿಂದ ಕಣ್ಣೀರು

ಈ ಎಲ್ಲದರಿಂದ ಮನನೊಂದು ನಿತ್ಯಶ್ರೀ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಮ್ಮ ನೋವನ್ನು ಹಂಚಿಕೊಂಡಿದ್ದರು. ಅಪಶ್ರುತಿಯಲ್ಲಿ ಹಾಡಿದ್ದು ತಪ್ಪೇ ಎಂದು ಒಪ್ಪಿಕೊಂಡು ಈಗಾಗಲೇ ಕ್ಷಮೆ ಕೇಳಿದ್ದೇನೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೂ ನೆಗೆಟಿವ್ ಕಮೆಂಟ್ಸ್ ನಿಲ್ಲುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ನನಗೆ ಟ್ಯಾಲೆಂಟ್ ಇಲ್ಲ ಎಂದು ಕೇಳುತ್ತಾರೆ. ನಾನು ಸುಮ್ಮನೆ ಆಯ್ಕೆ ಆಗಿಲ್ಲ. ಅನೇಕ ಜಡ್ಜ್‌ಗಳ ಮುಂದೆ ಆಡಿಷನ್ ನೀಡಿ ಆಯ್ಕೆಯಾದೆ. ನಟನೆಗೆ ಇದು ನನ್ನ ಮೊದಲ ಅನುಭವವಾದರೂ, ಅರ್ಹತೆ ಇದ್ದದ್ದರಿಂದಲೇ ಅವಕಾಶ ಸಿಕ್ಕಿದೆ’ ಎಂದು ನಿತ್ಯಶ್ರೀ ಭಾವುಕರಾಗಿ ಹೇಳಿದರು. ಇದೇ ಅವಕಾಶ ನಿಮ್ಮ ಮನೆಯ ಹುಡುಗಿಗೋ, ತಂಗಿಗೋ ಸಿಕ್ಕಿದ್ದರೆ ಇದೇ ರೀತಿಯ ವರ್ತನೆ ಮಾಡ್ತಿದ್ರಾ ಎಂದು ಪ್ರಶ್ನಿಸಿ ತಮ್ಮ ಮನಸ್ಸಿನ ನೋವನ್ನು ಹೊರಹಾಕಿದರು.

ಒಟ್ಟಿನಲ್ಲಿ, ವೈರಲ್ ಆದ ಒಂದು ಕ್ಷಣದಿಂದ ಆರಂಭವಾದ ನಿತ್ಯಶ್ರೀ ಅವರ ಪಯಣ ಇದೀಗ ಸ್ಯಾಂಡಲ್ವುಡ್‌ನ ಹೊಸ ಅಧ್ಯಾಯದತ್ತ ಸಾಗುತ್ತಿರುವುದು ಕುತೂಹಲ ಮೂಡಿಸಿದೆ.


Share It

You cannot copy content of this page