ಬೆಂಗಳೂರು: ವಿವಿಧ ನಿಗಮ, ಮಂಡಳಿಗಳಿಗೆ ನೇಮಕಗೊಂಡಿದ್ದ ಅಧ್ಯಕ್ಷರ ಅಧಿಕಾರವಧಿಯನ್ನು ಮುಂದುವರೆಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆ ಮೂಲಕ ನಿಗಮ, ಮಂಡಳಿಗಳ ಕನಸು ಕಂಡಿದ್ದ ಕೈ ನಾಯಕರಿಗೆ ನಿರಾಸೆಯಾಗಿದೆ. 29.01.2024 ರ ಅನ್ವಯ ವಿಧಾನಸಭಾ ಸದಸ್ಯರುಗಳಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ 36 ನಿಗಮ, ಮಂಡಳಿಗಳಿಗೆ ನೇಮಿಸಲಾಗಿತ್ತು.
ಈಗಾಗಲೇ ಎರಡು ವರ್ಷಗಳ ಅವಧಿ ಮುಗಿದಿದೆ. ಹೀಗಾಗಿ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 25 ನಿಗಮ, ಮಂಡಳಿಗಳಿಗೆ ನೇಮಕಗೊಂಡಿರುವ ಶಾಸಕರನ್ನು ಮತ್ತೆ ಸಚಿವ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ 26.01.2026ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಂದುವರೆಸಲು ಆದೇಶಿಸಲಾಗಿದೆ.
ಇತ್ತ ಎರಡು ವರ್ಷದ ಬಳಿಕ ನಿಗಮ, ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕರು ತಮ್ಮ ಸ್ಥಾನವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದರು.
ಅತ್ತ ತಮಗೂ ನಿಗಮ, ಮಂಡಳಿ ಸ್ಥಾನ ಬೇಕೆಂದು ಪಟ್ಟು ಹಿಡಿದವರಿಗೆ ಇನ್ನುಳಿದ ಅವಧಿಗೆ ಮಾಡೋಣ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭರವಸೆ ನೀಡುತ್ತಿದ್ದರು. ಆದರೆ, ಇದೀಗ ಹಿಂದೆ ನೇಮಕವಾದವರನ್ನೇ ಮುಂದುವರೆಸಿ ಆದೇಶ ಹೊರಡಿಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

