ಕ್ರೀಡೆ ಸುದ್ದಿ

ಟಿ20 ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾಗೆ ಆತಂಕ: ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

Share It

ಐಸಿಸಿ ಟಿ20 ವಿಶ್ವಕಪ್ 2026ರ ಅಂಗವಾಗಿ ನಡೆಯಲಿರುವ ಭಾರತ–ನಮೀಬಿಯಾ ಪಂದ್ಯದ ಮೊದಲು ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ ಉಂಟಾಗಿದೆ. ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಮುಂದಿನ ಪಂದ್ಯದಲ್ಲಿ ಅವರ ಭಾಗವಹಿಸುವಿಕೆ ಅನುಮಾನಾಸ್ಪದವಾಗಿದೆ.

ಮೂಲಗಳ ಪ್ರಕಾರ, ಅಭಿಷೇಕ್ ಶರ್ಮಾ ಹೊಟ್ಟೆ ಸೋಂಕಿನಿಂದ ಬಳಲುತ್ತಿದ್ದಾರೆ. ಫೆಬ್ರವರಿ 7ರಂದು ನಡೆದ ಆರಂಭಿಕ ಪಂದ್ಯ ಬಳಿಕ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ಹೊಟ್ಟೆ ನೋವು ತೀವ್ರಗೊಂಡ ಹಿನ್ನೆಲೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂಡದ ನಿರ್ವಹಣಾ ವಲಯವು ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದೆ.

ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅನುಮಾನ

ನಮೀಬಿಯಾ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಅಭಿಷೇಕ್ ಅವರ ಫಿಟ್‌ನೆಸ್ ವರದಿ ನಿರ್ಣಾಯಕವಾಗಲಿದೆ. ಅವರು ಆಡಲು ಅಸಾಧ್ಯವಾದಲ್ಲಿ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದಲ್ಲದೆ, ಭಾನುವಾರ ನಡೆಯಲಿರುವ ಭಾರತ–ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಅಭಿಷೇಕ್ ಸಂಪೂರ್ಣ ಚೇತರಿಸಿಕೊಳ್ಳುವರೇ ಎಂಬ ಪ್ರಶ್ನೆ ಉದ್ಭವಿಸಿದೆ.

ಭೋಜನ ಕೂಟದ ಬಳಿಕ ಉದ್ಭವಿಸಿದ ಚರ್ಚೆ

ಇದೀಗ ಮತ್ತೊಂದು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಭಾನುವಾರ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಅಭಿಷೇಕ್ ಭಾಗವಹಿಸಿದ್ದರು. ಆದರೆ ಅದಕ್ಕೂ ಮುನ್ನವೇ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ವಿಶ್ವಕಪ್‌ನಂತಹ ಮಹತ್ವದ ಟೂರ್ನಿಯ ಮಧ್ಯೆ ಆಟಗಾರರನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಲು ಅವಕಾಶ ನೀಡುವುದು ಸೂಕ್ತವೇ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಎತ್ತುತ್ತಿದ್ದಾರೆ. ಆಟಗಾರರ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಬಳಗ

ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್) ಮತ್ತು ರಿಂಕು ಸಿಂಗ್ ಸೇರಿದ್ದಾರೆ.

ಅಭಿಷೇಕ್ ಅವರ ಆರೋಗ್ಯ ಸ್ಥಿತಿ ಕುರಿತು ಅಧಿಕೃತ ಪ್ರಕಟಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅವರ ಚೇತರಿಕೆಯನ್ನು ಅವಲಂಬಿಸಿಕೊಂಡೇ ಮುಂದಿನ ಪಂದ್ಯಗಳ ತಂತ್ರ ರೂಪುಗೊಳ್ಳಲಿದೆ.


Share It

You cannot copy content of this page