ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ 2.0’ ತಂತ್ರಾಂಶದ ಪರಿಷ್ಕೃತ ಆವೃತ್ತಿಯನ್ನು ಜಾರಿಗೆ ತಂದು, ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣ ಕಾಗದರಹಿತ ಮತ್ತು ವೇಗವಾಗಿ ನಡೆಸುವ ವ್ಯವಸ್ಥೆಯನ್ನು ಪರಿಚಯಿಸಿದೆ. ಇನ್ನುಮುಂದೆ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ದಿನಗಟ್ಟಲೆ ಕಾಯುವ ಅವಶ್ಯಕತೆ ಇಲ್ಲ. ಸರಿಯಾದ ಪ್ರಕ್ರಿಯೆ ಅನುಸರಿಸಿದರೆ, ನೋಂದಣಿ ಕೇವಲ 10 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.
ಈ ಹೊಸ ವ್ಯವಸ್ಥೆಯ ಮೂಲಕ ಆಸ್ತಿ ವ್ಯವಹಾರಗಳಿಗೆ ಪಾರದರ್ಶಕತೆ ಹೆಚ್ಚಲಿದೆ. ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಲಿದ್ದು, ದಾಖಲೆಗಳು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತವೆ.
ಕಾವೇರಿ 2.0 ಎಂದರೇನು?
ಕಾವೇರಿ 2.0 ಕರ್ನಾಟಕ ಸರ್ಕಾರದ ಅತ್ಯಾಧುನಿಕ ಆನ್‌ಲೈನ್ ಆಸ್ತಿ ನೋಂದಣಿ ವೇದಿಕೆಯಾಗಿದೆ. ಇದು ಹಳೆಯ ಕಾವೇರಿ ತಂತ್ರಾಂಶದ ಸುಧಾರಿತ ಆವೃತ್ತಿಯಾಗಿದ್ದು, ಭೂಮಿ ದಾಖಲೆ, ಇ-ಸ್ವತ್ತು, ಖಜಾನೆ-2 ಹಾಗೂ ಸಾಕಲಾ ಮುಂತಾದ ವ್ಯವಸ್ಥೆಗಳೊಂದಿಗೆ ಸಂಯೋಜಿತವಾಗಿದೆ. ಇದರ ಉದ್ದೇಶ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವುದು ಹಾಗೂ ಜನರಿಗೆ ವೇಗದ ಸೇವೆ ಒದಗಿಸುವುದಾಗಿದೆ.
ಪ್ರಮುಖ ಬದಲಾವಣೆಗಳು
ಈಗಾಗಲೇ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆ ಚಾಲ್ತಿಯಲ್ಲಿದ್ದು, ಇದೀಗ ನೋಂದಣಿಯ ಸಂಪೂರ್ಣ ಪ್ರಕ್ರಿಯೆಯೂ ಡಿಜಿಟಲ್ ಆಗುತ್ತಿದೆ. ನೋಂದಣಿ ಪೂರ್ಣಗೊಂಡ ನಂತರ ಭೌತಿಕ ದಾಖಲೆಯ ಬದಲಿಗೆ ನಾಗರಿಕರಿಗೆ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಲಾಗುತ್ತದೆ. ಎಲ್ಲಾ ದಾಖಲೆಗಳು ಸುರಕ್ಷಿತ ಡಿಜಿಟಲ್ ಸಂಗ್ರಹದಲ್ಲಿ ಉಳಿಯಲಿವೆ.
ಲಭ್ಯವಿರುವ ಸೇವೆಗಳು
- ಆಸ್ತಿ ನೋಂದಣಿ: ಆನ್‌ಲೈನ್ ಮೂಲಕ ಅಪಾಯಿಂಟ್‌ಮೆಂಟ್ ಪಡೆದು ಪ್ರಕ್ರಿಯೆ ಪೂರ್ಣಗೊಳಿಸಬಹುದು.
- ಋಣಭಾರ ಪ್ರಮಾಣಪತ್ರ (Encumbrance Certificate): ಆಸ್ತಿಗೆ ಸಂಬಂಧಿಸಿದ ಹಣಕಾಸು ಅಥವಾ ಕಾನೂನು ಭಾಂದವ್ಯಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು.
- ದಾಖಲೆ ಪರಿಶೀಲನೆ: ಭೂ ದಾಖಲೆಗಳ ನಿಖರತೆ ಪರಿಶೀಲಿಸಲು ಡಿಜಿಟಲ್ ಸೌಲಭ್ಯ.
- ಶುಲ್ಕ ಲೆಕ್ಕಾಚಾರ: ಮುದ್ರಾಂಕ ಹಾಗೂ ನೋಂದಣಿ ಶುಲ್ಕದ ಅಂದಾಜಿಗೆ ಆನ್‌ಲೈನ್ ಕ್ಯಾಲ್ಕುಲೇಟರ್.
- ವಿವಾಹ ನೋಂದಣಿ: ಡಿಜಿಟಲ್ ವೇದಿಕೆಯ ಮೂಲಕ ನೋಂದಣಿ ಹಾಗೂ ಸಮಯ ನಿಗದಿ.
- ಇ-ಮುದ್ರಾಂಕ ಸೇವೆ: ಆನ್‌ಲೈನ್ ಮೂಲಕ ಮುದ್ರಾಂಕ ಶುಲ್ಕ ಪಾವತಿ.
- ಆಸ್ತಿ ಮೌಲ್ಯಮಾಪನ: ಮಾರ್ಗದರ್ಶಿ ಮೌಲ್ಯವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವ ಅವಕಾಶ.
ನೋಂದಣಿ ಪ್ರಕ್ರಿಯೆ ಹೇಗೆ?
ಮೊದಲು ‘ಕಾವೇರಿ 2.0’ ಪೋರ್ಟಲ್‌ನಲ್ಲಿ ನಾಗರಿಕರ ಲಾಗಿನ್ ಮೂಲಕ ಆಸ್ತಿ, ಖರೀದಿದಾರ, ಮಾರಾಟಗಾರ ಮತ್ತು ಸಾಕ್ಷಿಗಳ ವಿವರಗಳನ್ನು ನಮೂದಿಸಬೇಕು. ಅಗತ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಅಪ್‌ಲೋಡ್ ಮಾಡಬೇಕು.
ಸಬ್‌ರಿಜಿಸ್ಟ್ರಾರ್ ಕಚೇರಿ ಆನ್‌ಲೈನ್‌ನಲ್ಲಿ ಪರಿಶೀಲನೆ ನಡೆಸಿ ಅನುಮೋದನೆ ನೀಡುತ್ತದೆ. ಬಳಿಕ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಪಾವತಿಸಬಹುದು. ಆಧಾರ್ ಆಧಾರಿತ ಇ-ಸೈನ್ ಅಥವಾ ಡಿಜಿಟಲ್ ಸಹಿಯ ಮೂಲಕ ಉಭಯಪಕ್ಷಗಳು ಸಹಿ ಮಾಡಬೇಕು.
ನಿಗದಿತ ಸಮಯದಲ್ಲಿ ಕಚೇರಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮತ್ತು ಫೋಟೋ ನೀಡಿದರೆ ಸಾಕು. ಅಂತಿಮವಾಗಿ ಸಬ್‌ರಿಜಿಸ್ಟ್ರಾರ್ ಡಿಜಿಟಲ್ ಸಹಿ ಮಾಡಿದ ಬಳಿಕ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಹೊಸ ವ್ಯವಸ್ಥೆಯ ಪ್ರಯೋಜನಗಳು
- ಕಚೇರಿಯಲ್ಲಿ ಕಾಯುವ ಸಮಯ 10 ನಿಮಿಷಕ್ಕೆ ಸೀಮಿತ.
- ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ತೊಂದರೆ ಕಡಿಮೆ.
- ದಾಖಲೆ ಕಳೆದುಹೋಗುವ ಭಯವಿಲ್ಲ; ಡಿಜಿಟಲ್ ರೂಪದಲ್ಲಿ ಸುರಕ್ಷಿತ ಸಂಗ್ರಹ.
- ವಿಶಿಷ್ಟ ದಾಖಲೆ ಸಂಖ್ಯೆಯ ಮೂಲಕ ಯಾವಾಗ ಬೇಕಾದರೂ ಡೌನ್‌ಲೋಡ್ ಸೌಲಭ್ಯ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080 68265316 ಸಂಪರ್ಕಿಸಬಹುದು.

