ಕಲಬುರಗಿ:ಅಫಜಲಪುರ ಮತಕ್ಷೇತ್ರದ ಪವಿತ್ರ ತಾಣ, ಶ್ರೀ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಅಧೀನದಲ್ಲಿರುವ ಶ್ರೀ ತಂತುಕೇಶ್ವರ ದೇವಸ್ಥಾನದ ‘ಅನ್ನದಾಸೋಹ ಭವನ’ಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಇದೆ.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿ ಹಾಗೂ ತಂತುಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವರು ನಾಡಿನ ಸಮಸ್ತ ಜನರ ಸುಖ-ಸಂತೋಷಕ್ಕಾಗಿ ಪ್ರಾರ್ಥಿಸಿದರು. ಅನಂತೆ ಗಾಣಗಾಪುರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸಿದ್ಧಪಡಿಸಲಾದ ‘ಮಾಸ್ಟರ್ ಪ್ಲಾನ್’ ಅನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿ, ಸ್ಥಳೀಯ ಮುಖಂಡರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಬಜೆಟ್ನಲ್ಲಿ ವಿಶೇಷ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ ಅವರು ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತರಿಗೆ ಇನ್ನಷ್ಟು ಸುಸಜ್ಜಿತ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.

ಅನ್ನದಾಸೋಹ ಭವನ ನಿರ್ಮಾಣಕ್ಕೆ ಉದಾರವಾಗಿ ಸಹಕರಿಸಿದ ದಾನಿಗಳಾದ ಶ್ರೀನಿವಾಸ ಕೋಣೆರ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಫಜಲಪುರದ ಶಾಸಕ ಎಂ.ವೈ. ಪಾಟೀಲ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್, ಜಗದೇವ ಗುತ್ತೇದಾರ, ಕಲಬುರಗಿ ಜಿಲ್ಲಾಧಿಕಾರಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

