ಉಪಯುಕ್ತ ಸುದ್ದಿ

ಕೇಂದ್ರ ನಗರ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸದ ಒಟ್ಟು  40 ಸ್ವತ್ತುಗಳ ಹರಾಜು ಪ್ರಕ್ರಿಯೆಗೆ ಕ್ರಮ: 40 ಆಸ್ತಿಗಳಿಂದ ರೂ. 1.16 ಕೋಟಿ ಆಸ್ತಿ ತೆರಿಗೆ ಬಾಕಿ

Share It

ಬೆಂಗಳೂರು: ಕೇಂದ್ರ ನಗರ ಪಾಲಿಕೆಯ ವಲಯ-1 ಹಾಗೂ ವಲಯ 2ರ ವ್ಯಾಪ್ತಿಯಲ್ಲಿ 40 ಆಸ್ತಿಗಳಿಂದ ರೂ. 1.16 ಕೋಟಿ ಕಂದಾಯ ಬಾಕಿ ಇರುವುದರಿಂದ, ಫೆಬ್ರವರಿ 21 ರಂದು ಅಂತಹ ಸ್ವತ್ತುಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಆಯುಕ್ತ  ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳಿಂದ ಸ್ವೀಕರಿಸಲಾಗುವ ಆಸ್ತಿ ತೆರಿಗೆಯನ್ನು ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಅಥವಾ ನಿರ್ವಹಿಸಲು ಉಪಯೋಗಿಸಲಾಗುತ್ತದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025 ರ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಸ್ವತ್ತುಗಳು ಪ್ರತಿಯೊಂದು ಆರ್ಥಿಕ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಬೇಕಾಗಿರುತ್ತದೆ. ಆಸ್ತಿ ತೆರಿಗೆ ಪಾವತಿಸದ ಪ್ರಕರಣಗಳಲ್ಲಿ ಆಸ್ತಿತೆರಿಗೆ ವಸೂಲಿ ಮಾಡುವ ಕಾರ್ಯವಿಧಾನವನ್ನು ಆಸ್ತಿತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು 2024 ರಡಿಯಲ್ಲಿ ಅಧಿಸೂಚಿಸಲಾಗಿರುತ್ತದೆ.

ಸದರಿ ಕಾಯ್ದೆ ಹಾಗೂ ನಿಯಮಗಳಲ್ಲಿ ತಿಳಿಸಿರುವಂತೆ ಆಸ್ತಿತೆರಿಗೆ ಸುಸ್ತಿದಾರರಿಗೆ ಕಾರಣ ಕೇಳಿ ಪತ್ರ, ಆಸ್ತಿತೆರಿಗೆ ಬೇಡಿಕೆ ಪತ್ರ ಜಾರಿ ಮಾಡಲಾಗಿದ್ದು, ಸಾಕಷ್ಟು ಕಾಲಾವಕಾಶವನ್ನು ನೀಡಲಾದ ನಂತರದಲ್ಲೂ ಬೇ-ಬಾಕಿ ಉಳಿಸಿಕೊಂಡ ಪ್ರಕರಣಗಳ ಮಾಲೀಕರಿಗೆ ನಿಯತಕಾಲಿಕವಾಗಿ ಮೊಬೈಲ್ ಸಂದೇಶಗಳ ಮೂಲಕ ತಮ್ಮ ಸ್ವತ್ತಿನ ಆಸ್ತಿತೆರಿಗೆಯನ್ನು ಪಾವತಿಸಲು ತಿಳಿಸಲಾಗಿರುತ್ತದೆ.

ಮುಂದುವರೆದು, ಸಾಕಷ್ಟು ಅವಕಾಶಗಳನ್ನು ನೀಡಿದ ನಂತರ ಗುರುತಿಸಲಾಗಿರುವ ಆಸ್ತಿ ತೆರಿಗೆಯನ್ನು ಪಾವತಿಸದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸಿ.ವಿ.ರಾಮನ್ ನಗರ ವಲಯ-1 ಮತ್ತು ಗಾಂಧಿನಗರ ವಲಯ-2 ವ್ಯಾಪ್ತಿಯಲ್ಲಿನ 17 ವಸತಿ ಆಸ್ತಿಗಳು, 16 ವಸತಿಯೇತರ ಆಸ್ತಿಗಳು ಹಾಗೂ 7 ವಸತಿ ಹಾಗೂ ವಸತಿಯೇತರ ಆಸ್ತಿಗಳು ಒಟ್ಟು 40 ಸ್ವತ್ತುಗಳನ್ನು* ಕಾಯ್ದೆ ಹಾಗೂ ನಿಯಮಗಳನ್ವಯ ಹರಾಜು ಪ್ರಕ್ರಿಯೆಗೆ (Distress Sale) ಒಳಪಡಿಸಲು ತೀರ್ಮಾನಿಸಲಾಗಿರುತ್ತದೆ.

ಮುಂದುವರೆದು, ದಿನಾಂಕ: 21-02-2026 ರಂದು ಜಂಟಿ ಆಯುಕ್ತರು (ಸಿ.ವಿ.ರಾಮನ್ ನಗರ ವಲಯ-1) ಮತ್ತು (ಗಾಂಧಿನಗರ ವಲಯ-2) ರವರ ಅಧ್ಯಕ್ಷತೆಯಲ್ಲಿ ಆಸ್ತಿ ತೆರಿಗೆ ಸುಸ್ತಿದಾರರೆಂದು ಗುರುತಿಸಲಾಗಿರುವ ಸ್ವತ್ತುಗಳಿಂದ ಹರಾಜಿನ ಮೂಲಕ ಬೇಬಾಕಿ ಆಸ್ತಿತೆರಿಗೆ ವಸೂಲಾತಿ ಮಾಡಲಾಗುವುದು. ಮಾನ್ಯ ಆಯುಕ್ತರು ರವರ ಕಛೇರಿ, ಪಿ.ಯು.ಕಟ್ಟಡ, ಎಂ.ಜಿ. ರಸ್ತೆ, ಬೆಂಗಳೂರು-560001 ಇಲ್ಲಿನ ಸಭಾಂಗಣದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ಅಂತಹ ಸ್ವತ್ತುಗಳ ಮಾಹಿತಿಯನ್ನು ಜಂಟಿ ಆಯುಕ್ತರು (ಸಿ.ವಿ.ರಾಮನ್ ನಗರ ವಲಯ-1), ಮೇಯೋಹಾಲ್ ಕಟ್ಟಡ, ರೆಸಿಡೆನ್ಸಿ ರಸ್ತೆ, ಬೆಂಗಳೂರು-560001 ಇಲ್ಲಿ ಮತ್ತು ಜಂಟಿ ಆಯುಕ್ತರು (ಗಾಂಧಿನಗರ ವಲಯ-2) ಕಛೇರಿ, ಜಿ.ಬಿ.ಎ. ಕೇಂದ್ರ ಕಛೇರಿ ಆವರಣ, ಅನೆಕ್ಸ್ ಕಟ್ಟಡ-3 5ನೇ ಮಹಡಿ, ಎನ್.ಆ‌ರ್.ಚೌಕ ಕಟ್ಟಡದಲ್ಲಿನ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ.

ಹರಾಜು ಪ್ರಕ್ರಿಯೆ ಮುನ್ನ ಪಟ್ಟಿಯಲ್ಲಿನ ಸ್ವತ್ತಿಗೆ ಸಂಪೂರ್ಣ ಆಸ್ತಿತೆರಿಗೆ ಪಾವತಿಸಿದಲ್ಲಿ ಹರಾಜಿನಿಂದ ಕೈಬಿಡಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದೆ.


Share It

You cannot copy content of this page