ರಾಜಕೀಯ ಸುದ್ದಿ

ಟ್ರಂಪ್ ತೆರಿಗೆ ಹುಟ್ಟಾಟಕ್ಕೆ ಬ್ರೇಕ್ ಹಾಕಿದ ಸುಪ್ರೀಂ ಕೋರ್ಟ್: ಏಕಪಕ್ಷೀಯ ಸುಂಕ ಏರಿಕೆ ರದ್ದುಗೊಳಿಸಿ ಆದೇಶ

Share It

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ನೀತಿಗೆ ದೊಡ್ಡ ಹೊಡೆತ ಬಿದ್ದಿದೆ. ಅವರು ಜಾರಿಗೆ ತಂದಿದ್ದ ಸುಂಕದ ಕ್ರಮಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ಅಮಾನ್ಯಗೊಳಿಸಿದೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ವರದಿ ಪ್ರಕಾರ, ಅಮೆರಿಕದ ಬಹುತೇಕ ಎಲ್ಲಾ ವ್ಯಾಪಾರ ಪಾಲುದಾರರಿಂದ ಸರಕುಗಳ ಮೇಲೆ ವ್ಯಾಪಕ ಆಮದು ಸುಂಕಗಳನ್ನು ವಿಧಿಸಲು 1977 ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ -IEEPA ಅಡಿ ಅಮೆರಿಕ ಅಧ್ಯಕ್ಷರು ಅಧಿಕಾರ ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ತೀರ್ಪು ಜಾಗತಿಕ ವ್ಯಾಪಾರ, ವ್ಯವಹಾರಗಳು, ಗ್ರಾಹಕರು, ಹಣದುಬ್ಬರ ಪ್ರವೃತ್ತಿಗಳು ಮತ್ತು ದೇಶಾದ್ಯಂತದ ಗೃಹ ಹಣಕಾಸುಗಳ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ತೀರ್ಪಿನಿಂದ ದೇಶದಲ್ಲಿ ಭಾರಿ ಆರ್ಥಿಕ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ. ಇದು ಟ್ರಿಲಿಯನ್ ಗಟ್ಟಲೇ ವ್ಯವಹಾರವಾಗಿದ್ದು, ಇದು ದೊಡ್ಡ ಪೆಟ್ಟು ನೀಡುವ ಸಾಧ್ಯತೆಗಳಿವೆ. ಡಿಸೆಂಬರ್ 14ರವರೆಗೆ ಅಮೆರಿಕ ಸರ್ಕಾರ ವಿವಾದಿತ ಪ್ರಾಧಿಕಾರದ ಅಡಿ ಸುಮಾರು 134 ಶತಕೋಟಿ ಡಾಲರ್‌ಗಳಷ್ಟು ಮೊತ್ತದ ಸುಂಕ ಸಂಗ್ರಹಿಸಿದೆ ಎಂದು ಹೇಳಲಾಗಿದೆ.

ಟ್ಯಾಕ್ಸ್ ಫೌಂಡೇಶನ್‌ನ ಅಂದಾಜಿನ ಪ್ರಕಾರ, ಟ್ರಂಪ್‌ರ ವ್ಯಾಪಾರ ಯುದ್ಧವು 2025ರಲ್ಲಿ ಅಮೆರಿಕನ್ ಕುಟುಂಬಗಳಿಗೆ ತಲಾ ಸುಮಾರು 1,100 ಡಾಲರ್‌ಗಳಷ್ಟು ನಷ್ಟವನ್ನುಂಟು ಮಾಡುತ್ತದೆ ಎಂದು ದಿ ಪೋಸ್ಟ್ ತನ್ನ ವರದಿಯಲ್ಲಿ ಹೇಳಿದೆ. ಪರಸ್ಪರ ಪ್ರಯೋಜನಕಾರಿ ವ್ಯಾಪಾರಕ್ಕೆ ಸಂಬಂಧಿಸಿ ಮಧ್ಯಂತರ ಒಪ್ಪಂದಕ್ಕಾಗಿ ಒಂದು ಚೌಕಟ್ಟನ್ನು ರೂಪಿಸಿದ್ದೇವೆ ಎಂದು ಅಮೆರಿಕ ಮತ್ತು ಭಾರತ ಘೋಷಿಸಿದ ಕೆಲವು ದಿನಗಳ ನಂತರ ಈ ಮಹತ್ವದ ತೀರ್ಪು ಬಂದಿದೆ.

ಫೆಬ್ರವರಿ 13, 2025 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಭಾರತ -ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಮಾತುಕತೆಗಳಿಗೆ ದೇಶಗಳ ಬದ್ಧತೆಯನ್ನು ಈ ಮಧ್ಯಂತರ ಒಪ್ಪಂದ ಚೌಕಟ್ಟಿನಲ್ಲಿ ಪುನರುಚ್ಚರಿಸಲಾಗಿತ್ತು.


Share It

You cannot copy content of this page