ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ನೌಕರರ ಮತ್ತು ಅವರ ಕುಟುಂಬದ ಆರ್ಥಿಕ ಭದ್ರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮೃತ ನೌಕರರ ಅವಲಂಬಿತರಿಗೆ ಅನುಕಂಪ ಆಧಾರಿತ ನೇಮಕಾತಿ ಆದೇಶ ಪತ್ರ ಹಾಗೂ ವಿಮಾ ಪರಿಹಾರದ ಚೆಕ್ಗಳನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಂಪು ವಿಮಾ ಯೋಜನೆಯ ಪರಿಷ್ಕರಣೆ: ನಾವು ಅಧಿಕಾರಕ್ಕೆ ಬಂದ ನಂತರ ನೌಕರರ ಹಿತದೃಷ್ಟಿಯಿಂದ ವಿಮಾ ಯೋಜನೆಯನ್ನು ಪರಿಷ್ಕರಿಸಿದ್ದೇವೆ. ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತದಿಂದ ನೌಕರರು ಮೃತಪಟ್ಟಲ್ಲಿ ₹50.00 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದು ವಿವರಣೆ ನೀಡಿದರು.
ಸ್ವಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಲ್ಲಿ ನೀಡಲಾಗುತ್ತಿದ್ದ ವಿಮಾ ಮೊತ್ತವನ್ನು ಅಕ್ಟೋಬರ್ 1, 2025 ರಿಂದ ಜಾರಿಗೆ ಬರುವಂತೆ ₹12.00 ಲಕ್ಷಕ್ಕೆ ಏರಿಸಲಾಗಿದೆ. ಸ್ವಾಭಾವಿಕ/ಇನ್ನಿತರೆ ಕಾರಣಗಳಿಂದ ಮೃತಪಟ್ಟ 120 ನೌಕರರ ಕುಟುಂಬಗಳಿಗೆ ₹12 ಕೋಟಿ ಗುಂಪು ವಿಮಾ ಪರಿಹಾರ ನೀಡಲಾಗುತ್ತದೆ ಎಂದರು.

ಅಪಘಾತದಿಂದ ಮೃತಪಟ್ಟ 12 ನೌಕರರ ಕುಟುಂಬಗಳಿಗೆ ₹6 ಕೋಟಿ ಅಪಘಾತ ವಿಮಾ ಪರಿಹಾರವನ್ನು ವಿತರಿಸಲಾಯಿತು. ಕಷ್ಟದ ಸಮಯದಲ್ಲಿ ನೌಕರರ ಕುಟುಂಬಕ್ಕೆ ಆರ್ಥಿಕ ಆಸರೆ ನೀಡುವುದು ನಮ್ಮ ಆದ್ಯತೆಯಾಗಿದೆ. ನೂತನವಾಗಿ ಸಂಸ್ಥೆಗೆ ಸೇರ್ಪಡೆಗೊಂಡ ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಬಿಎಂಟಿಸಿ ಸಂಸ್ಥೆ ಅಧ್ಯಕ್ಷ ವಿ.ಎಸ್. ಆರಾಧ್ಯ, ಉಪಾಧ್ಯಕ್ಷ ನಿಕೇತ್ ರಾಜ್ ಎಂ., ವ್ಯವಸ್ಥಾಪಕ ನಿರ್ದೇಶಕ ಕೆ.ಬಿ. ಶಿವಕುಮಾರ್, ನಿರ್ದೇಶಕರಾದ ಅಬ್ದುಲ್ ಅಹದ್, ಶಿಲ್ಪಾ ಎಂ. ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.

