ಬೆಂಗಳೂರು: “ನಾನು ದೆಹಲಿಗೆ ಹೋಗುವುದು ಬರುವುದು ಇದ್ದೇ ಇರುತ್ತದೆ. ನಾನು ಹೋಗದೆ ಮತ್ಯಾರು ಹೋಗುತ್ತಾರೆ? ಅವರು ಯಾವಾಗ ಕರೆಯುತ್ತಾರೋ ಆಗೆಲ್ಲಾ ಹೋಗುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಭಾನುವಾರ ಮಾತನಾಡಿಸಿ, ‘ಮುಂದಿನ ವಾರ ದೆಹಲಿಗೆ ಹೋಗುತ್ತೀರಾ’ ಎಂದು ಕೇಳಿದಾಗ ಶಿವಕುಮಾರ್ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಅಸ್ಸಾಂಗೆ ತೆರಳಿದ್ದಾಗ ಪ್ರಿಯಾಂಕ ಗಾಂಧಿ ಅವರ ಜೊತೆ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಮಾಡಿದಿರಾ ಎಂದು ಕೇಳಿದಾಗ, “ನಾನು ರಾಜ್ಯ ರಾಜಕೀಯದ ಬಗ್ಗೆ ಹಂಗೆಲ್ಲ, ಎಲ್ಲೆಂದರಲ್ಲಿ ಚರ್ಚೆ ಮಾಡುವುದಿಲ್ಲ. ಅದು ಸಾರ್ವಜನಿಕವಾಗಿ ಚರ್ಚಿಸುವ ವಿಚಾರವೂ ಅಲ್ಲ” ಎಂದರು.
ದೇಶದ ಹಿತಕ್ಕಾಗಿ ರಾಹುಲ್ ಗಾಂಧಿ ಧ್ವನಿ: ರಾಹುಲ್ ಗಾಂಧಿ ಅವರು ಅಮೆರಿಕ ವಿಧಿಸಿರುವ ತೆರಿಗೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಅವರು ದೇಶದ ಹಿತಕ್ಕಾಗಿ ಏನು ಬೇಕೋ ಅದನ್ನು ಮಾಡುತ್ತಾರೆ, ಮಾತಾಡುತ್ತಾರೆ. ಅಮೆರಿಕದ ಜತೆಗಿನ ತೆರಿಗೆ ಒಪ್ಪಂದದಿಂದ ದೇಶದ ಪ್ರತಿ ರೈತನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಚರ್ಚೆ ಮಾಡುತ್ತಾರೆ” ಎಂದರು.
ನಾಳೆ ಚಿಕ್ಕಬಳ್ಳಾಪುರದಲ್ಲಿ ಮನರೇಗಾ ಬಚಾವ್ ಸಮಾವೇಶ: “ಇಂದು ನಾನು ಹಾಗೂ ಸಿಎಂ ಇಬ್ಬರೂ ಕಾರವಾರಕ್ಕೆ ಹೋಗಿ ವೈದ್ಯಕೀಯ ವಿವಿ ಉದ್ಘಾಟನೆ ಮಾಡುತ್ತಿದ್ದೇವೆ. ನಾಳೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಎರಡೂ ಸೇರಿಸಿ ಮನರೇಗಾ ಉಳಿಸಿ ಸಮಾವೇಶ ಹಮ್ಮಿಕೊಂಡಿದ್ದೇವೆ. ದೆಹಲಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸುತ್ತಿದ್ದು, ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಆಗಮಿಸಬೇಕು. ಮನರೇಗಾ ರಕ್ಷಣೆಗೆ ಆಗ್ರಹಿಸಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಲಾಗಿದೆ. ಬಾಕಿ ಇರುವ ಕ್ಷೇತ್ರಗಳಲ್ಲೂ ಮಾಡಲಾಗುವುದು” ಎಂದು ತಿಳಿಸಿದರು.
“ನಿನ್ನೆ ಜಿಬಿಎ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ಮಾಡಿದ್ದು, ಬೆಂಗಳೂರು ನಗರದಲ್ಲಿ 5065 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಎಲ್ಲವನ್ನೂ ಏಪ್ರಿಲ್ ತಿಂಗಳಾಂತ್ಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಬೆಂಗಳೂರು ಸುತ್ತಮುತ್ತ 40 ಕಿ.ಮೀ ಒಳಗೆ ಗುಡ್ಡಗಳ ಅಕ್ಕಪಕ್ಕ ಜಾಗ ಕೊಟ್ಟರೆ ಸರ್ಕಾರ ಅದನ್ನು ಖರೀದಿ ಮಾಡಲಿದೆ. ಸುಮಾರು 100 ಎಕರೆಯಷ್ಟು ಖರೀದಿ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.
ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರ ಭೇಟಿ ಬಗ್ಗೆ ಕೇಳಿದಾಗ, “ಪರಮೇಶ್ವರ್ ಅವರು ತಮ್ಮ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಥವಾ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ವಿಚಾರವಾಗಿ ಚರ್ಚೆ ಮಾಡಲು ಭೇಟಿಯಾಗಿರಬಹುದು. ರಾಜ್ಯ ಸಚಿವರು ಹಾಗೂ ಕೇಂದ್ರ ಸಚಿವರು ಭೇಟಿ ಮಾಡಿದ್ದಾರೆ” ಎಂದು ತಿಳಿಸಿದರು.
ಯೂತ್ ಕಾಂಗ್ರೆಸ್ ಪ್ರತಿಭಟನೆಯನ್ನು ಕುಮಾರಸ್ವಾಮಿ ಅವರು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ಇದು ಅವರ ರಾಜಕೀಯ ದಾರಿ, ಅದು ಆ ಯುವಕರ ರಾಜಕೀಯ ದಾರಿ. ಅವರಿಗೆ ಯಾರು ಆ ರೀತಿ ಮಾಡಲು ಮಾರ್ಗದರ್ಶನ ನೀಡಿದರೋ ಗೊತ್ತಿಲ್ಲ” ಎಂದರು.

