ಸುದ್ದಿ

KarnatakaBudget:LIVE UPDATES

Share It

ಸನ್ಮಾನ್ಯ ಸಭಾಧ್ಯಕ್ಷರೇ,

  1. 2026-27ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸಲು ನನಗೆ ಸಂತೋಷವಾಗುತ್ತಿದೆ.
  2. ಪ್ರಗತಿಶೀಲ ರಾಜ್ಯದ ಜನರ ತೆರಿಗೆ ಹಣಕ್ಕೆ ಪ್ರಮುಖ ಟ್ರಸ್ಟಿಯಾದ ನಾನು ಸರ್ವರ ಏಳಿಗೆಯನ್ನು ಬಯಸಿ 17ನೇ ಆಯವ್ಯಯವನ್ನು ಮಂಡಿಸುತ್ತಿದ್ದೇನೆ. ನಾಡಿನ ಏಳು ಕೋಟಿ ಕನ್ನಡಿಗರ ನಿರೀಕ್ಷೆಗಳನ್ನು ನಾವು ಅರಿತಿದ್ದೇವೆ, ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಈ ಆಯವ್ಯಯವು ನಾಡಿನ ರೈತರ, ದಮನಿತರ, ಕಾರ್ಮಿಕರ, ಮಹಿಳೆಯರ, ಅಶಕ್ತರ, ಅಲ್ಪಸಂಖ್ಯಾತರ, ವಿದ್ಯಾರ್ಥಿ-ಯುವಜನರ, ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳಲ್ಲಿ ತೊಡಗಿಕೊಂಡವರ ಕನಸುಗಳು ಮತ್ತು ಆತ್ಮವಿಶ್ವಾಸವನ್ನು ಪ್ರತಿಧ್ವನಿಸುವ ಜೀವಂತ ದಾಖಲೆಯಾಗಿದೆ.

    ಧನಶೀಲ ಮನಶೀಲ ತನುಶೀಲ
    ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ
    ಇಂತೀ ವ್ರತಸಂಪದವೆಲ್ಲವೂ
    ಅದಾರ ಕುರಿತು ಮಾಡುವ ನೇಮ
    ಎಂಬುದ ತಾನರಿಯಬೇಕು
    -ವಚನಕಾರ್ತಿ ಅಕ್ಕಮ್ಮ
  3. ನಾವು ರೂಪಿಸುವ ಯೋಜನೆಗಳು, ವಿನಿಯೋಗಿಸುವ ಅನುದಾನಗಳು ಯಾರ ಏಳಿಗೆಯನ್ನು ಬಯಸುತ್ತವೆ, ಅವುಗಳು ಸದುದ್ದೇಶದಿಂದ ರೂಪುಗೊಂಡಿವೆಯೆ ಎಂಬುದನ್ನು ಅರಿತು ಮುನ್ನಡೆಯಬೇಕಾಗಿದೆ. ಜನಕೇಂದ್ರಿತ ಆರ್ಥಿಕ ತತ್ವಗಳ ಮೂಲಬಿಂದು ಇದೇ ಆಗಿದೆ. ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ʻಸರ್ವೋದಯವಾಗಲಿ ಸರ್ವರಲಿʼ ಎಂಬ ಕವಿವಾಣಿಯು ನಮ್ಮ ಸಮಗ್ರ ಅಭಿವೃದ್ಧಿಯ ದೀಕ್ಷೆಯೂ ಆಗಿದೆ.
  4. ಕರ್ನಾಟಕವು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾಣಿಜ್ಯ ರಂಗದಲ್ಲಿ ಅದ್ವಿತೀಯ ಪಾತ್ರ ವಹಿಸುತ್ತಿದೆ. ಕೃತಕ ಬುದ್ಧಿಮತ್ತೆಯ (AI) ಕ್ರಾಂತಿಕಾರಕ ಬೆಳವಣಿಗೆಗಳಿಂದ ಜಾಗತಿಕ ಉತ್ಪಾದನಾ ವಿಧಾನಗಳು ದಿನ ದಿನಕ್ಕೂ ಬದಲಾಗುತ್ತಿವೆ. ವಿಜ್ಞಾನ-ತಂತ್ರಜ್ಞಾನಗಳಲ್ಲಿನ ಹೊಸತನಗಳು ರಾಜ್ಯದ ಸ್ಥಿತಿ-ಗತಿಗಳನ್ನು ನಿರ್ಧರಿಸುವ ನಿರ್ಣಾಯಕ ಸಂಗತಿಗಳಾಗಿವೆ. ಈ ಸಂದರ್ಭದಲ್ಲಿ ನಾವು ಬೆಂಕಿಯನ್ನು ಬೆಳಕಾಗಿಸಿಕೊಳ್ಳುವ ಸಂಕಲ್ಪ ಹೊತ್ತು ಮುನ್ನಡೆಯಬೇಕಾಗಿದೆ ಎಂಬ ಎಚ್ಚರದಿಂದಲೆ ಈ ಆಯವ್ಯಯವನ್ನು ಮಂಡಿಸುತ್ತಿದ್ದೇನೆ.
  5. ರಾಷ್ಟ್ರದ ಅಭಿವೃದ್ಧಿಯ ಸರ್ವಕ್ಷೇತ್ರಗಳಲ್ಲೂ ನಮ್ಮ ರಾಜ್ಯವು ಮುಂಚೂಣಿಯಲ್ಲಿದೆ. ಅತಿ ಹೆಚ್ಚು ತೆರಿಗೆ ಸಂಪನ್ಮೂಲಗಳನ್ನು ಸಂಗ್ರಹಿಸಿ ಕೊಡುವ ಪ್ರಮುಖ ರಾಜ್ಯವಾಗಿದೆ. ಹೆಚ್ಚು ಹಾಲು ಕೊಡುವ ಹಸು/ಎಮ್ಮೆಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವೂ ಇರುತ್ತದೆ. ಅವು ಬಡವಾದರೆ ಗೋವಳಿಗನೂ ಸಂಕಷ್ಟಕ್ಕೆ ಸಿಲುಕುತ್ತಾನೆ ಎಂಬುದು ಭೀಷ್ಮನ ತತ್ವ. ಇದನ್ನು ಅರಿತು ಒಕ್ಕೂಟ ಸರ್ಕಾರವು ರಾಜ್ಯದ ಬೇಡಿಕೆಗಳ ಬಗ್ಗೆ ಸಂವೇದನಾಶೀಲತೆಯಿಂದ ವರ್ತಿಸಬೇಕೆಂದು ಆಗ್ರಹಿಸುತ್ತೇವೆ. ಭಾರತದಂಥ ವೈವಿಧ್ಯಮಯ ಸಂಸ್ಕೃತಿಗಳ ರಾಷ್ಟ್ರವು ಸಹಕಾರಿ ಒಕ್ಕೂಟ ವ್ಯವಸ್ಥೆಯಿಂದ ಮಾತ್ರವೇ ಅಭಿವೃದ್ಧಿ ಸಾಧಿಸಬಹುದಾಗಿದೆ.
  6. 2023ರಲ್ಲಿ ನಾವು ಅಧಿಕಾರಕ್ಕೆ ಬಂದ ಕೂಡಲೆ ʻಸಾರ್ವತ್ರಿಕ ಮೂಲ ಆದಾಯʼ ಪರಿಕಲ್ಪನೆಗಳಾದ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಸುಭದ್ರತೆ ಮತ್ತು ಸಾಮಾಜಿಕ ಸುಸ್ಥಿರತೆ ಒದಗಿಸುವುದಕ್ಕೆ ಆದ್ಯತೆ ನೀಡಿದೆವು. ಈ ಯೋಜನೆಗಳು ಇಂದು ಕೋಟ್ಯಾಂತರ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ, ಜನರ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿವೆ ಎಂದು ದೇಶ ವಿದೇಶಗಳ ಪ್ರಮುಖ ಅಧ್ಯಯನಗಳು ತೋರಿಸಿಕೊಡುತ್ತಿವೆ.
  7. ಕಲ್ಯಾಣ ಯೋಜನೆಗಳ ಜೊತೆಗೆ ಹೆಚ್ಚಿನ ಬಂಡವಾಳ ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ದೀರ್ಘಕಾಲೀನ ಆರ್ಥಿಕ ಪರಿವರ್ತನೆಗಳತ್ತಲೂ ಗಮನ ಹರಿಸಿದ್ದೇವೆ. ʻಮಾನವ ಅಭಿವೃದ್ಧಿಯಲ್ಲಿನ ಹೂಡಿಕೆಯನ್ನು ನಿರ್ಲಕ್ಷಿಸಿದ ಆರ್ಥಿಕ ಅಭಿವೃದ್ಧಿಯು ಅಸ್ಥಿರ ಮಾತ್ರವಲ್ಲ ಅನೈತಿಕವಾದುದು’ ಎಂಬ ಅಮರ್ತ್ಯ ಸೇನ್ ಅವರ ಪ್ರಮೇಯವನ್ನು ಅರಿತು ಜನಕಲ್ಯಾಣದ ಯೋಜನೆಗಳಿಗಾಗಿ ಹೂಡಿಕೆ ಮಾಡುತ್ತಿದ್ದೇವೆ.
  8. ನಾವು ಕರ್ನಾಟಕದ್ದೇ ಆದ ಸಶಕ್ತ ಹಾಗೂ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ರೂಪಿಸುತ್ತಿದ್ದೇವೆ. ಅವುಗಳನ್ನು 11ಜಿ ಮಾದರಿ ಆರ್ಥಿಕತೆಗಳೆಂದು ವ್ಯಾಖ್ಯಾನಿಸಲಾಗುತ್ತಿದೆ.

i. ಗ್ಯಾರಂಟಿ ಎಕಾನಮಿ-ಕಲ್ಯಾಣ ಹಾಗೂ ಲಿಂಗ ಸಮಾನತೆಯ ಹಾದಿಯತ್ತ ಕರ್ನಾಟಕ
ii. ಗುಡ್ ಪಬ್ಲಿಕ್ ಎಜುಕೇಶನ್-ಸರ್ವರ ಏಳಿಗೆ ಬಯಸುವ ಸಮರ್ಥ ಸಾರ್ವಜನಿಕ ಶಿಕ್ಷಣ
iii. ಗುಡ್ ಹೆಲ್ತ್ ಟು ಆಲ್-ಸಮಗ್ರ ಆರೋಗ್ಯ – ಸದೃಢ ಕರ್ನಾಟಕ
iv. ಗ್ರಾಸ್ ರೂಟ್ ಎಕಾನಮಿ- ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು
v. ಗುಡ್ ಗವರ್ನೆನ್ಸ್- ಜನಸ್ನೇಹಿ ಆಡಳಿತ
vi. ಗಿಗ್ ಎಕಾನಮಿ – ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು
vii. ಜಿಯೋಗ್ರಾಫಿಕಲ್ ಈಕ್ವಾಲಿಟಿ- ಪ್ರಾದೇಶಿಕ ಅಸಮಾನತೆಯ ನಿವಾರಣೆ
viii. ಗ್ಲೋಬಲ್ ಟ್ರೇಡ್ ಎಕಾನಮಿ ಅಥವಾ ವ್ಯಾಪಾರ ಮತ್ತು ಕೈಗಾರಿಕಾಭಿವೃದ್ಧಿ
ix. ಗ್ಲೋಬ್ ಟ್ರೋಟಿಂಗ್ ಎಕಾನಮಿ- ಪ್ರವಾಸೋದ್ಯಮ ಆರ್ಥಿಕತೆ
x. ಗ್ರೀನ್ ಎಕಾನಮಿ- ನವೀಕರಿಸಬಹುದಾದ ಇಂಧನ ಸೇರಿದಂತೆ ಪರಿಸರ ಪೂರಕ ಆರ್ಥಿಕ ಚಟುವಟಿಕೆಗಳು
xi. ಗ್ರೋಯಿಂಗ್ ಅರ್ಬನ್ ಎಕಾನಮಿ- ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆ

  1. ಈ ಆರ್ಥಿಕ ಪ್ರಮೇಯಗಳನ್ನು ಆಧಾರವಾಗಿಟ್ಟುಕೊಂಡು ನಾವು ನಾಡಿನ ಅಭಿವೃದ್ಧಿ ರಥವನ್ನು ಮುನ್ನಡೆಸುತ್ತಿದ್ದೇವೆ. ಈ ಪ್ರಮೇಯಗಳು ಹೇಗೆ ಕರ್ನಾಟಕದ್ದೇ ಆದ ಅಭಿವೃದ್ಧಿ ಮಾದರಿಯನ್ನು ವ್ಯಾಖ್ಯಾನಿಸುತ್ತವೆ ಎಂಬುದನ್ನು ಆಯವ್ಯಯದ ಇಲಾಖಾವಾರು ಖಂಡಿಕೆಗಳಲ್ಲಿ ಗಮನಿಸಬಹುದಾಗಿದೆ. ಕರ್ನಾಟಕದ 45ಕ್ಕೂ ಹೆಚ್ಚಿನ ಉತ್ಪನ್ನಗಳಿಗೆ ಜಿಐ ಮಾನ್ಯತೆಗಳು ದೊರೆತಿವೆ. ಈ ಮಾನ್ಯತೆಗಳು ನಮ್ಮ ಜನರ ಪಾರಂಪರಿಕ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದು ಹೊಸ ಉದ್ಯೋಗಗಳ ಸೃಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
  2. ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಂತೆ ಉದ್ಯೋಗ ಸೃಷ್ಟಿಗೆ ನಾವು ಆದ್ಯತೆ ನೀಡಿದ್ದೇವೆ. ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಉದ್ಯೋಗ ನೇಮಕಾತಿಗಳಲ್ಲಿ ನ್ಯಾಯಾಲಯದ ಪ್ರಕರಣಗಳಿಂದ ಉಂಟಾಗಿದ್ದ ವಿಳಂಬವನ್ನು ಪರಿಗಣಿಸಿ ವಯೋಮಿತಿಯಲ್ಲಿ ಒಂದು ಬಾರಿಗೆ ಐದು ವರ್ಷಗಳ ಸಡಿಲಿಕೆ ನೀಡಿದ್ದೇವೆ.
  3. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಯಲ್ಲಿ ರಾಜ್ಯದ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಇಲಾಖಾವಾರು ನೀಡುವ ಅನುದಾನಗಳನ್ನು ಹೊರತುಪಡಿಸಿ ಕಳೆದ ವರ್ಷ ರಸ್ತೆ ಮತ್ತು ಮೂಲಸೌಕರ್ಯಗಳ
    ಅಭಿವೃದ್ಧಿಗಾಗಿ “ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ”ವನ್ನು ಜಾರಿಗೊಳಿಸಿ 8,600 ಕೋಟಿ ರೂ. ಗಳ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರ 2ನೇ ಹಂತವಾಗಿ 2026-27ನೇ ಸಾಲಿನಲ್ಲಿ 4,000 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
  4. ವಸತಿರಹಿತರಿಗೆ ಮನೆಗಳು, ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ತಲ್ಲಣಗಳನ್ನು ನಿಭಾಯಿಸಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ.
  5. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮತ್ತಷ್ಟು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಪ್ರೊ.ಎಂ.ಗೋವಿಂದರಾವ್ ಸಮಿತಿಯ ಶಿಫಾರಸ್ಸುಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ರಾಜ್ಯ ನೀತಿ ಮತ್ತು ಯೋಜನಾ ಆಯೋಗ, ಐದನೇ ಹಣಕಾಸು ಆಯೋಗ, ಆಡಳಿತ ಸುಧಾರಣಾ ಆಯೋಗಗಳ ಶಿಫಾರಸ್ಸುಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ.
  6. ಕರ್ನಾಟಕದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಸ್ಟಾರ್ಟ್ಅಪ್, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಕ್ಷೇತ್ರಗಳಲ್ಲಿನ ಸಾಧನೆಗಳು ಜಾಗತಿಕ ಹೂಡಿಕೆ ಮತ್ತು ಪ್ರತಿಭೆಗಳನ್ನು ಸೆಳೆಯುತ್ತಿವೆ. ಬಿಯಾಂಡ್ ಬೆಂಗಳೂರು ಪರಿಕಲ್ಪನೆಯು ಹೆಚ್ಚಿನ ಬಂಡವಾಳವನ್ನು ಆಕರ್ಷಿಸುತ್ತಿದೆ. ರಾಜ್ಯವು ರೂಪಿಸಿರುವ ಹೊಸ ಕೈಗಾರಿಕಾ ನೀತಿಯಿಂದ ಹಂತ-2 ಮತ್ತು ಹಂತ-3 ನಗರಗಳಲ್ಲಿಯೂ ಅಭಿವೃದ್ಧಿ ಸಾಧ್ಯವಾಗಲಿದೆ.
  7. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರವು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ, ಕೇಂದ್ರ ಸರ್ಕಾರವು ಒಕ್ಕೂಟ ತತ್ವದ ಸಾಂವಿಧಾನಿಕ ನಿಯಮಗಳನ್ನೂ ಪಾಲಿಸದೆ ರಾಜ್ಯಕ್ಕೆ ನಿರಂತರ ಅನ್ಯಾಯವೆಸಗುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ತನ್ನ ಪಾಲಿನ ಕಡಿತ, ಕೇಂದ್ರದ ಯೋಜನೆಗಳಲ್ಲಿ ತಾರತಮ್ಯ, 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳಿಂದ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯ, ಅದೇ ಆಯೋಗವು ಮಾಡಿದ್ದ ವಿಶೇಷ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡದ ಕಾರಣ ಉಂಟಾದ ಆರ್ಥಿಕ ನಷ್ಟ ಮತ್ತು ಜಿಎಸ್ಟಿ ದರಗಳನ್ನು ತರ್ಕಬದ್ಧಗೊಳಿಸುವ ಅಕಾಲಿಕ ನಿರ್ಧಾರದಿಂದ ರಾಜ್ಯದ ಬೊಕ್ಕಸದ ಮೇಲೆ ಬಿದ್ದ ಹೆಚ್ಚುವರಿ ಹೊರೆ ಹಾಗೂ ಒತ್ತಡಗಳನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿದೆ.
  8. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರವು ವ್ಯವಸ್ಥಿತವಾಗಿ ದುರ್ಬಲಗೊಳಿಸಿರುವುದರಿಂದ ಜನರ ಉದ್ಯೋಗದ ಹಕ್ಕುಗಳು ಮೊಟಕಾಗಲಿವೆ ಮತ್ತು ರಾಜ್ಯಗಳ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಲಿದೆ. ಈ ಕಾರಣಗಳಿಂದ ರಾಜ್ಯದ ಹಿತಾಸಕ್ತಿಗಾಗಿ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ.
  9. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವ ನಮ್ಮ ಸಂಕಲ್ಪವನ್ನು ಈ ಆಯವ್ಯಯ ದೃಢಪಡಿಸುತ್ತದೆ. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಆರ್ಥಿಕ ಬೆಳವಣಿಗೆಯೊಂದಿಗೆ ವಿತ್ತೀಯ ಶಿಸ್ತು ಪಾಲಿಸಲು ಸಾಧ್ಯವಾಗಿರುವುದು ನಮ್ಮ ಆಡಳಿತ ವಿಧಾನದ ಮಾದರಿಯಾಗಿದೆ.
  10. ಈ ಆಯವ್ಯಯವು ನಾಡಿನ ಉಜ್ವಲ ಭವಿಷ್ಯವನ್ನು ಕಟ್ಟುವ ದೃಷ್ಟಿಯಿಂದ ರೂಪಿತವಾಗಿದೆ. ನಾಡಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವುದು ನಮ್ಮೆಲ್ಲರ ಹೊಣೆಯಾಗಿದೆ.

ʻʻನ್ಯಾಯವು ನಮ್ಮ ಪರವಾಗಿರುವಾಗ, ಈ ಹೋರಾಟದಲ್ಲಿ ನಾವು ಸೋಲಲು ಸಾಧ್ಯವೇ ಇಲ್ಲ. ಈ ಹೋರಾಟವು ನನಗೆ ಹರ್ಷದಾಯಕ ಸಂಗತಿಯಾಗಿದೆ. ಇದು ಪರಿಪೂರ್ಣ ಅರ್ಥದಲ್ಲಿ ಆಧ್ಯಾತ್ಮಿಕವಾದ ಹೋರಾಟವಾಗಿದೆ.ʼʼ
-ಡಾ|| ಬಿ.ಆರ್. ಅಂಬೇಡ್ಕರ್

ರಾಜ್ಯದ ಆರ್ಥಿಕತೆ

  1. ರಾಜ್ಯದ ಜಿ.ಎಸ್.ಡಿ.ಪಿಯು, 2025–26ನೇ ಸಾಲಿನಲ್ಲಿ ಶೇ.8.1 ರಷ್ಟು ನೈಜ ಬೆಳವಣಿಗೆಯನ್ನು ದಾಖಲಿಸಿದ್ದು, ದೇಶದ ಜಿ.ಡಿ.ಪಿ ಬೆಳವಣಿಗೆ ಶೇ.7.4 ಕ್ಕಿಂತ ಹೆಚ್ಚಿಗೆ ಇರುತ್ತದೆ. ಆರ್ಥಿಕತೆಯಲ್ಲಿನ ಈ ಸದೃಢ ಬೆಳವಣಿಗೆಯು ರಾಜ್ಯದ ಎಲ್ಲಾ ವಲಯಗಳ ಸಮಗ್ರ ಬೆಳವಣಿಗೆಯಿಂದ ಸಾಧ್ಯವಾಗಿದೆ.
  2. 2025–26ನೇ ಸಾಲಿನಲ್ಲಿ, ರಾಜ್ಯದ ಆರ್ಥಿಕತೆಯ ವಿವಿಧ ವಲಯಗಳಲ್ಲಿ ಸಮತೋಲಿತ ಬೆಳವಣಿಗೆ ಕಂಡುಬಂದಿದೆ. ಉತ್ತಮ ಮುಂಗಾರಿನಿಂದಾಗಿ ಕೃಷಿ ಕ್ಷೇತ್ರದಲ್ಲಿ ಶೇ.9.1 ರಷ್ಟು, ಕೈಗಾರಿಕಾ ವಲಯದಲ್ಲಿ ಶೇ.6.7 ರಷ್ಟು ಹಾಗೂ ಸೇವಾ ವಲಯದಲ್ಲಿ ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ.
  3. ಸರ್ಕಾರವು ಹೆಚ್ಚಿಸಿದ ಬಂಡವಾಳ ಹೂಡಿಕೆಯ ಜೊತೆಗೆ, ಖಾಸಗಿ ಹೂಡಿಕೆಯಲ್ಲಿನ ಹೆಚ್ಚಳವು ರಾಜ್ಯದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ. 2025–26ರ ಮೊದಲಾರ್ಧದಲ್ಲಿ, ರಾಜ್ಯಕ್ಕೆ
    9.4 ಬಿಲಿಯನ್ ಅಮೇರಿಕನ್ ಡಾಲರ್‌ಗಳಷ್ಟು ವಿದೇಶಿ ಹೂಡಿಕೆಯಾಗಿರುತ್ತದೆ. ಇದು ದೇಶದ ಒಟ್ಟು ವಿದೇಶಿ ಒಳಹರಿವಿನ ಶೇ.26.7 ರಷ್ಟಿರುತ್ತದೆ ಹಾಗೂ ಕಳೆದ ವರ್ಷಕ್ಕಿಂತ 2.6 ಪಟ್ಟು ಹೆಚ್ಚಳವನ್ನು ದಾಖಲಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, 2025–26ರ ಮೊದಲಾರ್ಧದಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ದೆಹಲಿಯಂತಹ ಪ್ರಮುಖ ರಾಜ್ಯಗಳಲ್ಲಿ ವಿದೇಶಿ ಒಳಹರಿವು ಕಡಿಮೆಯಾದರೂ ನಮ್ಮ ರಾಜ್ಯಕ್ಕೆ ಹೆಚ್ಚಿನ ವಿದೇಶಿ ಹೂಡಿಕೆಯಾಗಿದೆ. ಕೈಗಾರಿಕಾ ನೀತಿ 2025–30 ಅನ್ನು ಜಾರಿಗೊಳಿಸುವುದರಿಂದ ಇನ್ನೂ ಹೆಚ್ಚು ಹೂಡಿಕೆಯನ್ನು ನಿರೀಕ್ಷಿಸಲಾಗಿದೆ.
  4. ಭಾರತದಲ್ಲಿ ಜಾಗತಿಕವಾಗಿ ಸಮೀಕೃತವಾಗಿರುವ ರಾಜ್ಯ ಆರ್ಥಿಕತೆಗಳಲ್ಲಿ ಕರ್ನಾಟಕವು ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಐಟಿ ಸಂಬಂಧಿತ ಸೇವೆಗಳು, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಿನ್ಯಾಸ, ಸ್ಟಾರ್ಟ್-ಅಪ್ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ನಮ್ಮ ರಾಜ್ಯದ ನಾಯಕತ್ವವು ಭಾರತದ ರಫ್ತು ಕ್ಷೇತ್ರ ಮತ್ತು ವಿದೇಶಿ ನೇರ ಹೂಡಿಕೆಯ ಒಳಹರಿವುಗಳಿಗೆ ಪ್ರಮುಖ ಕೊಡುಗೆದಾರರನ್ನಾಗಿ ಮಾಡಿದೆ. ಆದರೆ, ವಿದೇಶಿ ವಿನಿಮಯಗಳಲ್ಲಿ ಇತ್ತೀಚಿಗೆ ಪ್ರಸ್ತಾಪಿಸಲಾಗಿರುವ ಸುಂಕ ಕ್ರಮಗಳು ಮತ್ತು ಅಮೇರಿಕ ಸೇರಿದಂತೆ ಇತರ ಪ್ರಮುಖ ದೇಶಗಳೊಂದಿಗೆ ವಾಣಿಜ್ಯ ಒಪ್ಪಂದವು ನಮ್ಮ ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.
  5. ಕರ್ನಾಟಕದಂತಹ ಜಾಗತಿಕವಾಗಿ ಸಮೀಕೃತ ರಾಜ್ಯಗಳ ಹಿತಾಸಕ್ತಿಗಳನ್ನು ವ್ಯಾಪಾರ ನೀತಿ ರೂಪಿಸುವಲ್ಲಿ ಪರಿಗಣಿಸುವುದು ಅಷ್ಟೇ ಮುಖ್ಯವಾಗುತ್ತದೆ. ಸಹಕಾರಿ ಒಕ್ಕೂಟದ ನಿಜಾರ್ಥದಲ್ಲಿ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಒಡನಾಟವು, ದೇಶದ ವಿದೇಶಿ ವ್ಯವಹಾರಗಳನ್ನು ಬಲಪಡಿಸುವುದರ ಜೊತೆಗೆ ಪ್ರಾದೇಶಿಕ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ದೇಶದ ಆರ್ಥಿಕ ಅಭಿವೃದ್ಧಿಗೆ ರಾಜ್ಯವು ಸದಾ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದು, ಕೇಂದ್ರ ಸರ್ಕಾರದೊಂದಿಗೆ ಈ ಸಹಕಾರವನ್ನು ಮುಂದುವರೆಸಲಾಗುವುದು.

ರಾಜ್ಯದ ಹಣಕಾಸು ಪರಿಸ್ಥಿತಿ

  1. ಕರ್ನಾಟಕವು ತನ್ನ ಸದೃಢ ವಿತ್ತೀಯ ನಿರ್ವಹಣೆ ಮತ್ತು ಸಂಪನ್ಮೂಲ ಕ್ರೋಢೀಕರಣ ಸಾಮರ್ಥ್ಯದೊಂದಿಗೆ ಮುಂದೆ ಸಾಗುತ್ತಿದೆ. ಆದಾಗ್ಯೂ, ಕೇಂದ್ರ ಸರ್ಕಾರವು ಜಾರಿಗೆ ತಂದ ತೆರಿಗೆ ನೀತಿ ಬದಲಾವಣೆಗಳಿಂದ ರಾಜ್ಯದ ರಾಜಸ್ವ ಸಂಗ್ರಹಣೆಗೆ ಸವಾಲುಗಳು ಎದುರಾಗಿವೆ. ಈ ಸವಾಲುಗಳ ನಡುವೆಯೂ, ನಮ್ಮ ಸರ್ಕಾರವು ಕೈಗೊಂಡ ಪರಿಣಾಮಕಾರಿ ಸಂಪನ್ಮೂಲ ಕ್ರೋಢೀಕರಣ ಕ್ರಮಗಳ ಫಲವಾಗಿ ರಾಜ್ಯದ ಸ್ವಂತ ರಾಜಸ್ವ ಸಂಗ್ರಹಣೆಯಲ್ಲಿ ಸ್ಥಿರತೆ ಸಾಧಿಸಲಾಗಿದೆ. 2024–25ರ ರಾಜಸ್ವ ಸಂಗ್ರಹಣೆಗೆ ಹೋಲಿಸಿದರೆ 2025–26ರ ಪರಿಷ್ಕೃತ ಅಂದಾಜುಗಳಲ್ಲಿ ರಾಜ್ಯದ ಸ್ವಂತ ರಾಜಸ್ವವು ಶೇ.8.3ರಷ್ಟು ಬೆಳವಣಿಗೆ ದಾಖಲಿಸಿದೆ.
  2. ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ರಾಜ್ಯದ ತೆರಿಗೆ ಆದಾಯದ ಪ್ರಮುಖ ರಾಜಸ್ವವಾಗಿದೆ. ರಾಜ್ಯದ ಸ್ವಂತ ತೆರಿಗೆ ರಾಜಸ್ವದಲ್ಲಿ ಜಿ.ಎಸ್.ಟಿ ರಾಜಸ್ವವು ಶೇ.43 ರಷ್ಟು ಪಾಲು ಹೊಂದಿದೆ. ಜಿ.ಎಸ್.ಟಿ ರಾಜಸ್ವ ಸಂಗ್ರಹಣೆಯಲ್ಲಿ ಕರ್ನಾಟಕವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.
  3. ಕೇಂದ್ರ ಸರ್ಕಾರವು ಆರ್ಥಿಕ ವರ್ಷದ ಮಧ್ಯದಲ್ಲಿ ಅನಿರೀಕ್ಷಿತವಾಗಿ ಜಿ.ಎಸ್.ಟಿ ದರ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯದ ರಾಜಸ್ವ ಸಂಗ್ರಹಣೆಯು ಮತ್ತಷ್ಟು ಇಳಿಕೆಯಾಗಿದೆ. 2025-26ನೇ ಸಾಲಿನಲ್ಲಿ ಜಿ.ಎಸ್.ಟಿ ತರ್ಕಬದ್ಧಗೊಳಿಸುವಿಕೆಗೂ ಮುನ್ನ, ರಾಜ್ಯದ ಸರಾಸರಿ ಮಾಸಿಕ ಜಿ.ಎಸ್.ಟಿ ರಾಜಸ್ವ (ನಿವ್ವಳ ಮರುಪಾವತಿ) ಸಂಗ್ರಹಣೆಯು ಶೇ.10 ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ ದರ ತರ್ಕಬದ್ಧಗೊಳಿಸುವಿಕೆಯ ನಂತರ, ಜಿ.ಎಸ್.ಟಿ ಸಂಗ್ರಹಣೆಯ ಮಾಸಿಕ ಬೆಳವಣಿಗೆಯು ಶೇ.4 ಕ್ಕೆ ಕಡಿಮೆಯಾಗಿದೆ. ಪ್ರಸ್ತಾವಿತ ದರ ಪರಿಷ್ಕರಣೆಯಿಂದ ಪ್ರಸಕ್ತ ಸಾಲಿಗೆ ರಾಜ್ಯದ ಜಿ.ಎಸ್.ಟಿ ಸಂಗ್ರಹಣೆಯು ಅಂದಾಜು 10,000 ಕೋಟಿ ರೂ.ಗಳ ಕೊರತೆ ಉಂಟಾಗಿದೆ. ಮುಂದಿನ ವರ್ಷದಲ್ಲಿ 15,000 ಕೋಟಿ ರೂ.ಗಳ ರಾಜಸ್ವ ಕೊರತೆಯನ್ನು ಅಂದಾಜಿಸಲಾಗಿದೆ.
  4. ರಾಷ್ಟ್ರೀಯ ಮಟ್ಟದಲ್ಲಿಯೂ ಸಹ, ಜಿ.ಎಸ್.ಟಿ ರಾಜಸ್ವ ಸಂಗ್ರಹಣೆಯು ನಿರಾಶಾದಾಯಕವಾಗಿದೆ. 2025–26ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಅಂದಾಜುಗಳಿಗೆ ಹೋಲಿಸಿದರೆ, ಪರಿಷ್ಕೃತ ಅಂದಾಜುಗಳಲ್ಲಿ ಜಿ.ಎಸ್.ಟಿ ಸಂಗ್ರಹಣೆಯು ಶೇ.11 ರಷ್ಟು ಇಳಿಕೆಯಾಗಿದೆ ಹಾಗೂ 2026–27ರ ಆಯವ್ಯಯ ಅಂದಾಜುಗಳಲ್ಲಿ ಶೇ.13.4 ರಷ್ಟು ಇಳಿಕೆಯಾಗಿದೆ. ಇದನ್ನು 2024-25ರ ವಾಸ್ತವ ಸಂಗ್ರಹಣೆಗಿಂತಲೂ ಕಡಿಮೆಯಾಗಿದೆ. ದೇಶದ ಜಿ.ಎಸ್.ಟಿ ಸಂಗ್ರಹಣೆಯು ಪ್ರಸಕ್ತ ಸಾಲಿನಲ್ಲಿ 1.3 ಲಕ್ಷ ಕೋಟಿ ರೂ.ಗಳು ಮತ್ತು ಮುಂದಿನ ವರ್ಷದಲ್ಲಿ 2 ಲಕ್ಷ ಕೋಟಿ ರೂ.ಗಳು ಕೊರತೆಯಾಗಲಿದೆ. ಇದರ ಪರಿಣಾಮವಾಗಿ ರಾಜ್ಯಗಳಿಗೆ ನೀಡುವ ತೆರಿಗೆ ಹಂಚಿಕೆಯೂ ಕಡಿಮೆಯಾಗಲಿದೆ.
  5. ಜಿ.ಎಸ್.ಟಿ ಸಂಗ್ರಹಣೆಯಲ್ಲಿನ ಕುಸಿತದಿಂದ ರಾಜ್ಯಗಳಲ್ಲಿ ಹೆಚ್ಚಿನ ಹಣಕಾಸು ಒತ್ತಡ ಉಂಟಾಗಿದೆ. ತೆರಿಗೆ ರಚನೆಯಲ್ಲಿನ ಬದಲಾವಣೆ ಮತ್ತು ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆಯು ಕೇಂದ್ರ ಸರ್ಕಾರಕ್ಕಿಂತ ಹೆಚ್ಚಾಗಿ ರಾಜ್ಯಗಳ ರಾಜಸ್ವ ಸಂಗ್ರಹಣೆಯ ಮೇಲೆ ನೇರವಾಗಿ ಪ್ರಭಾವ ಬೀರಿದೆ. ರಾಜ್ಯಗಳು ರಾಜಸ್ವ ನಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಮಾದಕ ವಸ್ತುಗಳು ಮತ್ತು ಐಶಾರಾಮಿ ವಸ್ತುಗಳ ಮೇಲೆ ಸೆಸ್ ಮತ್ತು ಇತರೆ ತೆರಿಗೆಗಳನ್ನು ವಿಧಿಸುವ ಮೂಲಕ ಕೇಂದ್ರ ಸರ್ಕಾರವು ರಾಜಸ್ವವನ್ನು ಸಂಗ್ರಹಿಸುತ್ತಿದ್ದು, ಈ ಆದಾಯದ ಸಂಪೂರ್ಣ ಮೊತ್ತವು ಕೇಂದ್ರ ಸರ್ಕಾರದ ಬೊಕ್ಕಸವನ್ನು ಸೇರಲಿದೆ.
  6. ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆಯನ್ನು ರಾಜ್ಯ ಸರ್ಕಾರ ತಾತ್ವಿಕವಾಗಿ ಬೆಂಬಲಿಸುತ್ತದೆ. ಆದರೆ, ಇದರಿಂದ ರಾಜ್ಯಗಳಿಗೆ ಉಂಟಾಗುವ ರಾಜಸ್ವ ನಷ್ಟವನ್ನು ಪರಿಹರಿಸುವುದರ ಜೊತೆಗೆ ರಾಜ್ಯಗಳ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ, ಕರ್ನಾಟಕವು ಇತರೆ ಏಳು ರಾಜ್ಯಗಳೊಂದಿಗೆ ಸೇರಿ ಜಿ.ಎಸ್.ಟಿ ಮಂಡಳಿಗೆ ಜಂಟಿ ಜ್ಞಾಪಕ ಪತ್ರವನ್ನು ಸಲ್ಲಿಸಿತ್ತು. ಈ ದರ ಪರಿಷ್ಕರಣೆಯು ರಾಜ್ಯಗಳ ರಾಜಸ್ವಕ್ಕೆ ವ್ಯತಿರಿಕ್ತ ಪರಿಣಾಮ ಬೀರದೆ ರಾಜ್ಯದ ರಾಜಸ್ವ ಸಂಗ್ರಹಣೆಯನ್ನು ರಕ್ಷಿಸುವ ರೀತಿಯಲ್ಲಿ ರೂಪಿತವಾಗಬೇಕು. ಜಿ.ಎಸ್.ಟಿ ತರ್ಕಬದ್ಧಗೊಳಿಸುವಿಕೆಯಿಂದ, ಉಂಟಾಗಿರುವ ರಾಜಸ್ವ ನಷ್ಟವನ್ನು ಸರಿದೂಗಿಸಲು ರಾಜ್ಯಗಳಿಗೆ ಅಗತ್ಯ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಮ್ಮ ಒತ್ತಾಯವು ಮುಂದುವರೆಯಲಿದೆ.
  7. ರಾಜ್ಯಗಳ ಸ್ವಂತ ತೆರಿಗೆ ರಾಜಸ್ವದ ಮೇಲಿನ ಈ ನಿರ್ಬಂಧಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ತೆರಿಗೆ ಹಂಚಿಕೆಯು ಇನ್ನಷ್ಟು ನಿರ್ಣಾಯಕವಾಗುತ್ತದೆ. 14ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಹಂಚಿಕೆಯ ಪಾಲನ್ನು ಶೇ.4.713 ರಷ್ಟು ಶಿಫಾರಸ್ಸು ಮಾಡಿತ್ತು. ಆದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯದ ತೆರಿಗೆ ಪಾಲು ಶೇ.3.647 ಕ್ಕೆ ಇಳಿಕೆಯಾಗಿದ್ದು, ಇದು ಹಿಂದಿನ ಆಯೋಗದ ಶಿಫಾರಸ್ಸಿಗೆ ಹೋಲಿಸಿದರೆ ಶೇ.23 ರಷ್ಟು ಕಡಿಮೆಯಾಗಿದೆ. 15ನೇ ಹಣಕಾಸು ಆಯೋಗದ ಆರು ವರ್ಷಗಳ ಅವಧಿಯಲ್ಲಿ ಒಟ್ಟಾರೆ ಸುಮಾರು 65,000 ಕೋಟಿ ರೂ.ಗಳ ನಷ್ಟ ಉಂಟಾಗಿದೆ. ಇದಲ್ಲದೆ,
    15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ 5,495 ಕೋಟಿ ರೂ.ಗಳ ವಿಶೇಷ ಅನುದಾನ ಮತ್ತು
    6,000 ಕೋಟಿ ರೂ.ಗಳ ರಾಜ್ಯ ಕೇಂದ್ರಿತ ಅನುದಾನಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವುದಿಲ್ಲ. ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಹಂಚಿಕೆ ಮಾಡಲು ಸಮಾನತೆ ಮತ್ತು ಬೆಳವಣಿಗೆ ಎರಡಕ್ಕೂ ಪ್ರಾಮುಖ್ಯತೆ ನೀಡುವ ಸೂತ್ರವನ್ನು ಶಿಫಾರಸ್ಸು ಮಾಡಬೇಕು ಎಂದು ರಾಜ್ಯವು 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿತ್ತು. ಆದಾಯ ಅಂತರಕ್ಕೆ ನಿಗದಿಪಡಿಸಲಾದ ಹೆಚ್ಚಿನ ತೂಕವನ್ನು ಕಡಿಮೆ ಮಾಡಿ, ವಿತ್ತೀಯ ನಿರ್ವಹಣೆ ಮತ್ತು ದೇಶದ ಆರ್ಥಿಕತೆಗೆ ರಾಜ್ಯದ ಕೊಡುಗೆಯ ಮಾನದಂಡವನ್ನು ತೆರಿಗೆ ಹಂಚಿಕೆ ಸೂತ್ರ ನಿರ್ಧರಿಸಲು ಪರಿಗಣಿಸಬೇಕು ಎಂದು ನಾವು ಒತ್ತಾಯಿಸಿದ್ದೇವೆ.
  8. 16ನೇ ಹಣಕಾಸು ಆಯೋಗವು 2026–31ರ ಅವಧಿಗೆ ತನ್ನ ವರದಿಯನ್ನು ಸಲ್ಲಿಸಿದೆ ಮತ್ತು ಕರ್ನಾಟಕಕ್ಕೆ ಶೇ.4.131 ರಷ್ಟು ತೆರಿಗೆ ಪಾಲನ್ನು ಶಿಫಾರಸ್ಸು ಮಾಡಿದೆ, ಇದು 15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಪಾಲಿಗಿಂತ ಶೇ.13 ರಷ್ಟು ಹೆಚ್ಚಳವಾಗಿರುತ್ತದೆ. 14ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಶೇ.4.713 ರಷ್ಟು ತೆರಿಗೆ ಪಾಲನ್ನು ರಾಜ್ಯವು ನಿರೀಕ್ಷಿಸಿದ್ದರೂ, 16ನೇ ಹಣಕಾಸು ಆಯೋಗದ ಶಿಫಾರಸ್ಸು ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಆದ ಅನ್ಯಾಯವನ್ನು ಭಾಗಶಃ ಪರಿಹರಿಸಿದೆ.
  9. ತೆರಿಗೆ ಹಂಚಿಕೆ ಸೂತ್ರವನ್ನು ನಿರ್ಧರಿಸುವ ಸಂದರ್ಭದಲ್ಲಿ 16ನೇ ಹಣಕಾಸು ಆಯೋಗವು, ರಾಜ್ಯಗಳ ಆರ್ಥಿಕ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ಗುರುತಿಸುವ ಉದ್ದೇಶದಿಂದ, ದೇಶದ ಜಿ.ಡಿ.ಪಿಗೆ ರಾಜ್ಯದ ಕೊಡುಗೆಯನ್ನು ಮಾನದಂಡವಾಗಿ ಪರಿಗಣಿಸಿರುವುದು ಆರ್ಥಿಕ ಆಯೋಗದ ತತ್ವಗಳಲ್ಲಿ ಒಂದು ಮಹತ್ವದ ಬೆಳೆವಣೆಗೆಯಾಗಿದ್ದು, ರಾಜ್ಯವು ಇದನ್ನು ಸ್ವಾಗತಿಸುತ್ತದೆ. ಮುಂದಿನ ಹಣಕಾಸು ಆಯೋಗವು ಸಹ ಆರ್ಥಿಕ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ಗುರುತಿಸುವ ಮೂಲಕ ಕರ್ನಾಟಕ ರಾಜ್ಯವು ಸೇರಿದಂತೆ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ಇತರೆ ರಾಜ್ಯಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಿದೆ ಎಂದು ನಾವು ಭಾವಿಸುತ್ತೇವೆ.
  10. ರಾಜಸ್ವ ಸಂಗ್ರಹಣೆಗಿರುವ ಈ ನಿರ್ಬಂಧಗಳ ನಡುವೆಯೂ, ರಾಜ್ಯವು ಆರ್ಥಿಕ ಬೆಳವಣಿಗೆ, ಜನ ಕಲ್ಯಾಣ ಮತ್ತು ವಿತ್ತೀಯ ಶಿಸ್ತನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಲು ವೆಚ್ಚ ನಿರ್ವಹಣೆಗೆ ಆದ್ಯತೆ ನೀಡಿದೆ. ರಾಜ್ಯವು ಸಮಾಜದ ಕಲ್ಯಾಣಕ್ಕೆ ನೀಡಿದ ಬದ್ಧತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ, ಫೆಬ್ರವರಿ 2026ರವರೆಗೆ ಒಟ್ಟು 1,21,598 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ನಮ್ಮ ಸರ್ಕಾರವು ವಿತ್ತೀಯ ಶಿಸ್ತನ್ನು ಪಾಲಿಸುವುದರೊಂದಿಗೆ ಜನ ಸಾಮಾನ್ಯರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿರುತ್ತದೆ.
  11. ಜಿ.ಎಸ್.ಟಿ ದರಗಳ ತರ್ಕಬದ್ಧಗೊಳಿಸುವಿಕೆ ಹಾಗೂ ಕೇಂದ್ರದಿಂದ ಸ್ವೀಕೃತವಾಗುವ ತೆರಿಗೆ ಪಾಲಿನ ಕಡಿತದ ಪರಿಣಾಮವಾಗಿ ರಾಜಸ್ವ ಸಂಗ್ರಹಣೆ ಕಡಿಮೆಯಾಗಿದ್ದು, ಇಂತಹ ಆರ್ಥಿಕ ಸವಾಲಿನ ಪರಿಸ್ಥಿತಿಯಲ್ಲಿಯೂ, ನಮ್ಮ ಸರ್ಕಾರವು ಕಳೆದ ಮೂರು ವರ್ಷಗಳಿಂದ ವಿತ್ತೀಯ ಶಿಸ್ತನ್ನು ಜವಾಬ್ದಾರಿಯುತವಾಗಿ ಮತ್ತು ದೃಢವಾಗಿ ಪಾಲಿಸಿಕೊಂಡು ಬಂದಿದೆ. ನಾಲ್ಕನೇ ವರ್ಷದಲ್ಲಿಯೂ ಸಹ, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ನಿಯಮಾನುಸಾರ, ರಾಜ್ಯದ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇ.3 ರೊಳಗೆ ಹಾಗೂ ಒಟ್ಟು ಸಾರ್ವಜನಿಕ ಹೊಣೆಗಾರಿಕೆಗಳನ್ನು ಜಿ.ಎಸ್.ಡಿ.ಪಿಯ ಶೇ.25 ರೊಳಗೆ ನಿರ್ವಹಿಸಲಾಗಿದೆ. ಈ ಮೂಲಕ ವಿತ್ತೀಯ ಶಿಸ್ತಿನ ಪಾಲನೆಯೊಂದಿಗೆ ದೀರ್ಘಾವಧಿಯ ಹಣಕಾಸಿನ ಸುಸ್ಥಿರತೆಗೆ ರಾಜ್ಯದ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತೇವೆ.

ಕೃಷಿ

ʻʻಧರೆಯ ಕೃಷಿ ಶುದ್ಧವಾಗಿಯಲ್ಲದೆ, ಸಸಿ ಶುದ್ಧವಿಲ್ಲʼʼ
-ವಚನಕಾರ ಶಿವಲೆಂಕ ಮಂಚಣ್ಣ

  1. ʻರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದೆʼ ಎಂಬ ದೃಢ ನಂಬಿಕೆಯಿಂದ ಪ್ರೇರಿತವಾಗಿ ನಮ್ಮ ಸರ್ಕಾರವು ಬಿತ್ತನೆಯಿಂದ ಮಾರಾಟದವರೆಗೆ ರೈತರಿಗೆ ಸಮಗ್ರ ಬೆಂಬಲ ನೀಡುವ ನಾಲ್ಕು ಆಧಾರಸ್ತಂಭಗಳ ಮೇಲೆ ಕೃಷಿ ಅಭಿವೃದ್ಧಿ ತಂತ್ರವನ್ನು ರೂಪಿಸಿದೆ. ಮೊದಲನೆಯ ಆಧಾರಸ್ತಂಭ ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಎರಡನೆಯದು ರೈತರಿಗೆ ಹಣಕಾಸು ನೆರವು, ಮೂರನೆಯದು ಉತ್ತಮ ಗುಣಮಟ್ಟದ ಕೃಷಿಪರಿಕರಗಳನ್ನು ಒದಗಿಸುವುದು ಮತ್ತು ಬೆಳೆಗಳ ನಿರ್ವಹಣೆ ಹಾಗೂ ನಾಲ್ಕನೆಯದು ಕೊಯ್ಲೋತ್ತರ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕಗಳ ವಿಸ್ತರಣೆ. ಇದರಿಂದ ಪ್ರತಿಯೊಬ್ಬ ರೈತರ ಸಮೃದ್ಧಿ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಸರ್ಕಾರ ದೃಢಸಂಕಲ್ಪ ತೊಟ್ಟಿದೆ.
  2. ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರವು ರೈತರ ಅಭ್ಯುದಯಕ್ಕಾಗಿ ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ.

• 40 ಲಕ್ಷ ರೈತರಿಗೆ 468 ಕೋಟಿ ರೂ. ಮೊತ್ತದಲ್ಲಿ ಬಿತ್ತನೆ ಬೀಜಗಳಿಗೆ ಸಹಾಯಧನ ವಿತರಣೆ.
• 2,825 ಕೋಟಿ ವೆಚ್ಚ ಭರಿಸಿ 7 ಲಕ್ಷ ರೈತರಿಗೆ ಹನಿ ನೀರಾವರಿ ಘಟಕ ಸ್ಥಾಪನೆ ಹಾಗೂ 3.41 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ.
• 363 ಕೋಟಿ ರೂ. ಮೊತ್ತದಲ್ಲಿ 32,138 ಕೃಷಿ ಹೊಂಡಗಳ ನಿರ್ಮಾಣ.
• 51 ಲಕ್ಷ ರೈತರಿಗೆ 6,213 ಕೋಟಿ ಬೆಳೆ ವಿಮೆ ಪರಿಹಾರ.
• 36 ಲಕ್ಷ ನೀರಾವರಿ ಪಂಪ್ಸೆಟ್ಗಳಿಗೆ 48,000 ಕೋಟಿ ರೂ. ಉಚಿತ ವಿದ್ಯುತ್ ಸಹಾಯಧನ.
• 83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 70 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಣೆ.

  1. ಉತ್ಪಾದನೋತ್ತರ ಕೃಷಿ ಚಟುವಟಿಕೆಗಳಾದ ಸಂಸ್ಕರಣೆ, ಮೌಲ್ಯವರ್ಧನೆ, ಮೌಲ್ಯ ಸರಪಳಿ ಅಭಿವೃದ್ಧಿ, ಕೃಷಿ ತ್ಯಾಜ್ಯಗಳ ಮರುಬಳಕೆ ಹಾಗೂ ಮಾರುಕಟ್ಟೆ ಸಂಪರ್ಕಗಳನ್ನು ಸಮಗ್ರವಾಗಿ ಬಲಪಡಿಸುವ ಮೂಲಕ ಗ್ರಾಮೀಣ ರೈತರಿಗೆ ಸ್ಥಿರ ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಸೃಜಿಸುವ ಉದ್ದೇಶದಿಂದ ʻಮುಖ್ಯಮಂತ್ರಿ ಕೃಷಿ ವಿಸ್ತಾರʼ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
  2. ರಾಜ್ಯದಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ನಿರ್ಮಿಸಲಾಗುತ್ತಿರುವ ʻಮಿಲೆಟ್ ಹಬ್ʼ ಅನ್ನು ರೈತರು, ಗ್ರಾಮೀಣ ಯುವಕರು ಮತ್ತು ನವ ಉದ್ಯಮಿಗಳಿಗೆ ತಾಂತ್ರಿಕ ಸಹಾಯ, ಸಂಸ್ಕರಣಾ ಸೌಲಭ್ಯ, ಗುಣಮಟ್ಟ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಸ್ವಾವಲಂಬಿ ಸಂಸ್ಥೆಯನ್ನಾಗಿಸಲಾಗುವುದು.
  3. ರೈತರಿಗೆ ಮಣ್ಣು, ನೀರು, ಬೀಜ ಹಾಗೂ ರಸಗೊಬ್ಬರ ಪರೀಕ್ಷೆಗಳಲ್ಲಿ ನಿಖರ ಫಲಿತಾಂಶಗಳನ್ನು ಒದಗಿಸಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಇಲಾಖೆಯ ಎಲ್ಲಾ ಪ್ರಯೋಗಾಲಯಗಳಿಗೆ NABL ಮಾನ್ಯತೆ ಪಡೆದು ವಿಶ್ವಾಸಾರ್ಹ ಹಾಗೂ ವೈಜ್ಞಾನಿಕ ಪರೀಕ್ಷಣಾ ಸೇವೆಗಳನ್ನು ಒದಗಿಸಲಾಗುವುದು.
  4. ನೂತನ ದ್ವಿದಳಧಾನ್ಯ ತಳಿಗಳ ಬಿತ್ತನೆ ಬೀಜಗಳ ಬಳಕೆಯನ್ನು ರೈತರಲ್ಲಿ ಪ್ರೇರೇಪಿಸಲು ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಲಾಗುವುದು.
  5. ಮಣ್ಣಿನ ಸಾವಯವ ಇಂಗಾಲ ಹಾಗೂ ಅದರ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ʻವಸುಧಾಮೃತʼ ಕಾರ್ಯಕ್ರಮವನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲಾಗುವುದು.
  6. ಬೆಳೆಗಳಲ್ಲಿ ಕೀಟ ಹಾಗೂ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಇವುಗಳನ್ನು ನಿಯಂತ್ರಿಸಲು ಅಗತ್ಯವಿರುವ ಪರಿಸರ ಸ್ನೇಹಿ ಜೈವಿಕ ಪೀಡೆನಾಶಕ/ಜೈವಿಕ ಕೀಟನಾಶಕಗಳ ಜೊತೆ ಇತರೆ ಸುರಕ್ಷಿತ ನಿರ್ವಹಣಾ ಕ್ರಮಗಳ ಶಿಫಾರಸ್ಸುಗಳನ್ನು ರೈತರಿಗೆ ಸಕಾಲದಲ್ಲಿ ಒದಗಿಸಲು ʻಸಸ್ಯ ಸಂಜೀವಿನಿ’ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು.
  7. ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ಕೃಷಿ ತಾಂತ್ರಿಕತೆ ಮತ್ತು ಇಲಾಖಾ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ಕೃಷಿ ಇಲಾಖೆಯ ʻರೈತ ಕರೆ ಕೇಂದ್ರʼವನ್ನು
    AI ತಂತ್ರಜ್ಞಾನದಿಂದ ಉನ್ನತೀಕರಿಸಲಾಗುವುದು.
  8. ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʻಕೃಷಿ ಉದ್ದಿಮೆ ತರಬೇತಿ ಕೇಂದ್ರʼ ವನ್ನಾಗಿ ಉನ್ನತೀಕರಿಸಲಾಗುವುದು.
  9. ಕೃಷಿ ಚಟುವಟಿಕೆಯಲ್ಲಿ ರೈತರ ಸಮಯ ಹಾಗೂ ಶ್ರಮ ತಗ್ಗಿಸುವುದರೊಂದಿಗೆ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ನಿಖರ ಬಿತ್ತನೆ ಮತ್ತು ನಾಟಿ
    ಯಂತ್ರಗಳನ್ನು ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸೇರ್ಪಡೆಗೊಳಿಸಲಾಗುವುದು.
  10. ಕೃಷಿ ಸಂಬಂಧಿತ ಕಸುಬುಗಳನ್ನು ಮತ್ತು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ಸಣ್ಣ, ಅತೀ ಸಣ್ಣ ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಾಗುವುದು.
  11. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
  12. ಹವಾಮಾನ ಬದಲಾವಣೆಗೆ ಹೊಂದಾಣಿಕೆ ಹಾಗೂ ತಗ್ಗಿಸುವಿಕೆಯ ರಾಜ್ಯದ ಪ್ರಯತ್ನಗಳನ್ನು ಬಲಪಡಿಸಿ ಕೃಷಿಯನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿಯಾಗಿಸಲು ಭತ್ತದ ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಪರ್ಯಾಯ ತೇವ–ಒಣಗಿಸುವ (Alternate Wetting & Drying) ವಿಧಾನಗಳನ್ನು ಉತ್ತೇಜಿಸಲಾಗುವುದು.
  13. ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗಿಸುವುದರ ಜೊತೆಗೆ ಮಾರುಕಟ್ಟೆಯ ಅನಿಶ್ಚಿತತೆಯನ್ನು ನಿವಾರಿಸುವ ಉದ್ದೇಶದಿಂದ ಬಿತ್ತನೆ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳು ಹಾಗೂ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ದೊರಕಿಸಲು ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ MSIL ವತಿಯಿಂದ ರೈತ ಮಾಲ್ಗಳನ್ನು ಸ್ಥಾಪಿಸಲಾಗುವುದು.
  14. ರೈತರಿಗೆ ಕಳಪೆ, ಅಸುರಕ್ಷಿತ, ದೋಷಪೂರಿತ ಬೀಜಗಳು ಮತ್ತು ಕೀಟನಾಶಕಗಳನ್ನು ಪೂರೈಸುವುದನ್ನು ಹಾಗೂ ಕೃಷಿ ಪರಿಕರಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ಮಾಡಿ ಸೂಕ್ತ ಶಿಫಾರಸ್ಸುಗಳನ್ನು ಸಲ್ಲಿಸಲು ರಾಜ್ಯ ಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಗುವುದು.
  15. ತಜ್ಞರ ಕಾರ್ಯಸಾಧ್ಯತಾ ವರದಿಯ ಶಿಫಾರಸ್ಸಿನಂತೆ ಅಥಣಿಯಲ್ಲಿ ಕೃಷಿ ಕಾಲೇಜನ್ನು ಸ್ಥಾಪಿಸಲು ಅಗತ್ಯವಿರುವ ಪ್ರಥಮ ಹಂತದ ಮೂಲಸೌಕರ್ಯ ಒದಗಿಸಲಾಗುವುದು.

ತೋಟಗಾರಿಕೆ

  1. ತೋಟಗಾರಿಕೆಯನ್ನು ರೈತರ ಆದಾಯ ವೃದ್ಧಿಯ ಪ್ರಮುಖ ಇಂಜಿನ್ ಆಗಿ ರೂಪಿಸುವ ಉದ್ದೇಶದಿಂದ ನಮ್ಮ ಸರ್ಕಾರವು ಉತ್ಕೃಷ್ಟ ಗುಣಮಟ್ಟ, ಅಧಿಕ ಮೌಲ್ಯದ, ಹವಾಮಾನ
    ಸ್ಥಿತಿ-ಸ್ಥಾಪಕ ಮತ್ತು ಮಾರುಕಟ್ಟೆ ಆಧಾರಿತ ತೋಟಗಾರಿಕೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗಾಗಿ ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ:

• ಹೊಸದಾಗಿ 89,000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೇಸಾಯ ಅಳವಡಿಕೆ;
• 2.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಅಳವಡಿಸಿ 2.36 ಲಕ್ಷ ರೈತರಿಗೆ ಅನುಕೂಲ;
• ಬೆಳೆ ವಿಮೆ ಯೋಜನೆಯಡಿ 11 ಲಕ್ಷ ರೈತರಿಗೆ 2,378 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ;
• 21,360 ಫಲಾನುಭವಿಗಳಿಗೆ 9,800 ಕೊಯ್ಲೋತ್ತರ ಘಟಕಗಳ ನಿರ್ಮಾಣ.

  1. ತೋಟಗಾರಿಕೆ ಇಲಾಖೆಯ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿ ಲಭ್ಯವಿರುವ ಜಮೀನನ್ನು ಉಪಯೋಗಿಸಿ ಉತ್ಕೃಷ್ಟ ಮೌಲ್ಯದ ತೋಟಗಳ ಅಭಿವೃದ್ಧಿ, ಕೊಯ್ಲೋತ್ತರ ಸೌಲಭ್ಯಗಳು ಹಾಗೂ ತೋಟಗಾರಿಕೆ ಆಧಾರಿತ ಕೈಗಾರಿಕೆಗಳನ್ನು PPP ಮಾದರಿಯಲ್ಲಿ ಸ್ಥಾಪಿಸಲಾಗುವುದು.
  2. ಅಡಿಕೆ ಬೆಳೆಯ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳ ಮತ್ತು ತೆಂಗು ಬೆಳೆಯ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣಗಳ ನಿಯಂತ್ರಣಕ್ಕಾಗಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಸಮುದಾಯ ಆಧಾರಿತ ರೋಗ–ಕೀಟ ನಿಯಂತ್ರಣ ಕ್ರಮಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
  3. ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಮತ್ತು ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಒಟ್ಟು 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಶೀತಲಗೃಹಗಳನ್ನು 64 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಶೀತಲಗೃಹಗಳನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು.
  4. ಹೆಚ್ಚಿನ ಪ್ರವಾಸಿಗರನ್ನು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಮೈಸೂರಿನ ಲಿಂಗಾಂಬುಧಿ ಸಸ್ಯ ತೋಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.
  5. ನೀರಿನ ಸಂರಕ್ಷಣೆ ಮತ್ತು ಮಣ್ಣಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಹೈಡ್ರೋಪೊನಿಕ್ಸ್ (Hydroponics) ಹಾಗೂ ಕೋಕೋಪೀಟ್ (Coco peat) ಆಧಾರಿತ ಮಣ್ಣಿಲ್ಲದ ಕೃಷಿಯನ್ನು ಪ್ರೋತ್ಸಾಹಿಸಲಾಗುವುದು.
  6. ತಜ್ಞರ ಕಾರ್ಯಸಾಧ್ಯತಾ ವರದಿಯ ಶಿಫಾರಸ್ಸಿನಂತೆ ಡಂಬಳದಲ್ಲಿ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲು ಅಗತ್ಯವಿರುವ ಪ್ರಥಮ ಹಂತದ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

ರೇಷ್ಮೆ

  1. ಭಾರತದ ರೇಷ್ಮೆ ಉತ್ಪಾದನೆಯಲ್ಲಿ ಶೇ.46 ರಷ್ಟು ಪಾಲು ಹೊಂದಿರುವ ಕರ್ನಾಟಕವು ದೇಶದ ರೇಷ್ಮೆ ರಾಜಧಾನಿಯಾಗಿದೆ. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ರೀಲಿಂಗ್ ಶೆಡ್ ನಿರ್ಮಾಣ, ಹನಿ ನೀರಾವರಿ ಘಟಕ ಮುಂತಾದ ಚಟುವಟಿಕೆಗಳಿಗೆ ಕಳೆದ ಮೂರು ವರ್ಷಗಳಲ್ಲಿ 531 ಕೋಟಿ ರೂ. ಮೊತ್ತದ ಸಹಾಯಧನವನ್ನು 2 ಲಕ್ಷ ಫಲಾನುಭವಿಗಳಿಗೆ ಒದಗಿಸಲಾಗಿದೆ
  2. ಪ್ರಮುಖ 15 ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸಂಪೂರ್ಣ ನಗದುರಹಿತ, ಡಿಜಿಟಲ್ ವಹಿವಾಟು, ಇ-ಹರಾಜು, ಇ-ಪೇಮೆಂಟ್ ಮತ್ತು ಇ-ಪಾವತಿ ವ್ಯವಸ್ಥೆಯನ್ನು ಆರಂಭಿಸಿದ ದೇಶದ ಮೊದಲ ಮತ್ತು ಏಕೈಕ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಷಯವಾಗಿದೆ.
  3. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ಪಾದಿಸುವ ರೇಷ್ಮೆಗೂಡನ್ನು ಸರ್ಕಾರದ ಯಾವುದೇ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆ.ಜಿ. ಗೂಡಿಗೆ ಇರುವ 10 ರೂ. ಸಾಗಾಣಿಕಾ ವೆಚ್ಚವನ್ನು 20 ರೂ. ಗೆ ಹೆಚ್ಚಿಸಲಾಗುವುದು.
  4. ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ (ಮೈಸೂರು) ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್ಗಳ ಸ್ಥಾಪನೆಗೆ ಕ್ರಮವಹಿಸಲಾಗುವುದು.
  5. ರೇಷ್ಮೆ ಇಲಾಖೆಯ ಆಯ್ದ ಕ್ಷೇತ್ರಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ರೈತ ಉದ್ಯಮಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದೊಂದಿಗೆ ಚಾಕಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಪಶು ಸಂಗೋಪನೆ

  1. ನಮ್ಮ ಸರ್ಕಾರದ ಪ್ರಾರಂಭದ ಅವಧಿಯಲ್ಲಿ ಪ್ರತಿದಿನ 8.75 ಲಕ್ಷ ಹಾಲು ಉತ್ಪಾದಕರಿಂದ 81.78 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿತ್ತು. ಪ್ರಸ್ತುತ ಪ್ರತಿದಿನ 9.07 ಲಕ್ಷ ಹಾಲು ಉತ್ಪಾದಕರಿಂದ ಸರಾಸರಿ ಒಂದು ಕೋಟಿ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಹಾಲು ಪೂರೈಕೆದಾರರಿಗೆ ಬಾಕಿ ಇದ್ದ 609 ಕೋಟಿ ರೂ. ಪ್ರೋತ್ಸಾಹಧನವನ್ನು ಒಳಗೊಂಡಂತೆ, ಇದುವರೆಗೂ ಒಟ್ಟಾರೆ 4,523 ಕೋಟಿ ರೂ. ಪ್ರೋತ್ಸಾಹಧನವನ್ನು ನೀಡಲಾಗಿದೆ.
  2. ಅನುಗ್ರಹ ಯೋಜನೆಯಡಿ ಕುರಿ/ಮೇಕೆಗಳ ಮತ್ತು ರಾಸುಗಳ ಆಕಸ್ಮಿಕ ಸಾವಿಗೆ ನೀಡುವ ಪರಿಹಾರ ಧನವನ್ನು ಹೆಚ್ಚಿಸಿ, ಇದುವರೆಗೂ 1.70 ಲಕ್ಷ ಫಲಾನುಭವಿಗಳಿಗೆ 101 ಕೋಟಿ ರೂ. ವಿತರಿಸಲಾಗಿದೆ.
  3. ʻಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ಅಧಿನಿಯಮ, 2025ʼ ನ್ನು ಜಾರಿಗೆ ತರಲಾಗಿದೆ. ಇಲ್ಲಿಯವರೆಗೆ 6,702 ಕುರಿಗಾಹಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ.
  4. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 300 ಪಶುವೈದ್ಯ ಸಂಸ್ಥೆಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ. 2026-27ನೇ ಸಾಲಿನಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹೊಸದಾಗಿ 100 ಕಟ್ಟಡಗಳನ್ನು ನಿರ್ಮಿಸಲಾಗುವುದು.
  5. ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25 ರಷ್ಟು ಸಹಾಯಧನದಲ್ಲಿ ಕುರಿ/ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಲಾಗಿದೆ. ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25 ರಷ್ಟು ಸಹಾಯಧನದಲ್ಲಿ ಹಸು/ಎಮ್ಮೆ ಖರೀದಿಸಲು ಪ್ರೋತ್ಸಾಹಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗಳಿಗೆ ಒಟ್ಟು 40 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗುವುದು.
  6. ಜಿಲ್ಲಾ ಹಂತದಲ್ಲಿರುವ ತಜ್ಞ ಪಶುವೈದ್ಯಕೀಯ ವಿಶೇಷ ಸೇವೆ ವ್ಯವಸ್ಥೆಯನ್ನು ತಾಲ್ಲೂಕು ಹಂತಕ್ಕೆ ವಿಸ್ತರಿಸಲು 20 ತಾಲ್ಲೂಕುಗಳ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್ಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 15 ತಾಲ್ಲೂಕು ಪಶು ಆಸ್ಪತ್ರೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಪಾಲಿಕ್ಲಿನಿಕ್ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.
  7. ಸ್ಥಳೀಯ ಮೇಕೆ ತಳಿಗಳ ಉನ್ನತೀಕರಣಕ್ಕಾಗಿ ಮೈಸೂರಿನಲ್ಲಿ ಬೋಯರ್ ಮೇಕೆ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು.
  8. ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆಗಳನ್ನು ನಿವಾರಿಸಲು ʻವರ್ಷಕ್ಕೊಂದು ಕರುʼ ಎಂಬ ಘೋಷವಾಕ್ಯದೊಂದಿಗೆ ರಾಜ್ಯದ 1,000 ಗ್ರಾಮ ಪಂಚಾಯಿತಿಗಳಲ್ಲಿ ʻಫಲಧಾರೆʼ ಶಿಬಿರಗಳನ್ನು ಐದು ಕೋಟಿ ರೂ. ವೆಚ್ಚದಲ್ಲಿ ಏರ್ಪಡಿಸಲಾಗುವುದು.
  9. ಪಶುಗಳಲ್ಲಿನ ರೋಗಗಳನ್ನು ನಿಖರವಾಗಿ ಪತ್ತೆ ಹಚ್ಚಲು ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ಹಾಗೂ ಬೀದರ್ನ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶು ಆಸ್ಪತ್ರೆಗಳಲ್ಲಿ ಜಾನುವಾರುಗಳ ಸಿ.ಟಿ. ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
  10. ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರೋಪಾಯವಾಗಿ ಸಂತಾನಹರಣ ನಿಯಂತ್ರಣವನ್ನು ವೈಜ್ಞಾನಿಕ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಜಾರಿಗೆ ತರುವ ಉದ್ದೇಶದಿಂದ ಪಶುವೈದ್ಯರು ಮತ್ತು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ತರಬೇತಿಯನ್ನು ನೀಡಲು ಬೆಂಗಳೂರು ಹಾಗೂ ಬೀದರ್ ನಲ್ಲಿ ʻಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರʼವನ್ನು ಸ್ಥಾಪಿಸಲಾಗುವುದು.

ಮೀನುಗಾರಿಕೆ

  1. ಮೀನುಗಾರರಿಗೆ ಉಚಿತವಾಗಿ ನೀಡುವ ಮೀನುಗಾರಿಕೆ ಸಲಕರಣೆ ಕಿಟ್ ಮೌಲ್ಯದ ದರವನ್ನು 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಿಸಿ ಮೀನುಗಾರಿಕೆ ಚಟುವಟಿಕೆಗಳನ್ನು ಉತ್ತೇಜಿಸಲಾಗುವುದು.
  2. ಜೈವಿಕ ತಂತ್ರಜ್ಞಾನದ ಉದ್ಯಮಗಳು, ನವೀನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಮುದ್ರ ಕೃಷಿಯನ್ನು (Mariculture) ಪ್ರೋತ್ಸಾಹಿಸಲು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ Centre of Excellence ಸ್ಥಾಪಿಸಲಾಗುವುದು.
  3. ಮೀನು ಆಹಾರದ ಸೇವನೆಯನ್ನು ಉತ್ತೇಜಿಸುವ ಹಾಗೂ ಸಾರ್ವಜನಿಕರಿಗೆ ಸ್ವಚ್ಛ ಮತ್ತು ಗುಣಮಟ್ಟದ ಮೀನು ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಮತ್ಸ್ಯದರ್ಶಿನಿಗಳನ್ನು ಸ್ಥಾಪಿಸಲಾಗುವುದು.
  4. ಮೀನು ಮಾರಾಟ ಮಾಡಲು ಸುಸಜ್ಜಿತ ಮೀನು ಮಾರುಕಟ್ಟೆಗಳ ಅವಶ್ಯಕತೆ ಇರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗುವುದು.
  5. ರಾಜ್ಯದಲ್ಲಿ ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆಗಾಗಿ 20 ಕೋಟಿ ರೂ.ಗಳನ್ನು ಒದಗಿಸಲಾಗುವುದು.
  6. ಒಳನಾಡು ಮೀನುಗಾರಿಕೆಯು ಗ್ರಾಮೀಣ ಜೀವನೋಪಾಯ ಮತ್ತು ಆಹಾರ ಭದ್ರತೆಗೆ ಮಹತ್ವವಾಗಿದೆ. ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನದಿ, ಕೆರೆ, ಕೃಷಿ ಹೊಂಡ ಹಾಗೂ ಜಲಾಶಯಗಳಲ್ಲಿ ಮೀನು ಉತ್ಪಾದನೆ ಹೆಚ್ಚಿಸಲು ಮೀನುಗಾರರಿಗೆ ತರಬೇತಿ ನೀಡಿ ಸ್ಥಿರ ಆದಾಯ ಗಳಿಕೆಗೆ ಅವಕಾಶ ಕಲ್ಪಿಸಲಾಗುವುದು.

ಸಹಕಾರ

  1. 2025-26ನೇ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲವನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಫೆಬ್ರವರಿ 2026ರ ಅಂತ್ಯಕ್ಕೆ 25 ಲಕ್ಷ ರೈತರಿಗೆ 22,000 ಕೋಟಿ ರೂ. ಕೃಷಿ ಸಾಲವನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 30,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ.
  2. ಯಶಸ್ವಿನಿ ಯೋಜನೆಯಡಿ ಇದುವರೆಗೆ ರಾಜ್ಯಾದ್ಯಂತ 870 ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ 86,253 ಫಲಾನುಭವಿಗಳು ಚಿಕಿತ್ಸೆ ಪಡೆದಿದ್ದು, ಇದಕ್ಕಾಗಿ 163 ಕೋಟಿ ರೂ.ಗಳನ್ನು ಭರಿಸಲಾಗಿದೆ.
  3. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕೇಂದ್ರ ಪುರಸ್ಕೃತ ಗಣಕೀಕರಣ ಯೋಜನೆಯಡಿ 3,863 PACS ಗಳು Go-Live ಆಗಿದ್ದು, Online ಸೇವೆಯನ್ನು ಒದಗಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಬಾಕಿ ಉಳಿದ 1,628 ಸಹಕಾರ ಸಂಘಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ.
  4. ಸಹಕಾರ ಸಂಘಗಳ ನಿಬಂಧಕರ ಹಂತದಲ್ಲಿ ವಿವಿಧ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಒದಗಿಸಲು ದತ್ತಾಂಶವನ್ನು ಆನ್ಲೈನ್ನಲ್ಲಿ ನಿರ್ವಹಿಸಲು ಕ್ರಮವಹಿಸಲಾಗುವುದು.
  5. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ಮೆಕ್ಕೆಜೋಳದ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾದ ರೈತರ ಹಿತ ಕಾಪಾಡಲು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ನಮ್ಮ ಸರ್ಕಾರ 100 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ.
  6. ಕರ್ನಾಟಕ ರಾಜ್ಯ ಉಗ್ರಾಣ ನಿಗಮವನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ನಿಗಮದ ಅನುಪಯುಕ್ತ ಆಸ್ತಿಗಳನ್ನು ನಗದೀಕರಣಗೊಳಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮೈಸೂರು (ಬಂಬೂ ಬಜಾರ್) ಮತ್ತು ಹುಬ್ಬಳ್ಳಿ (ಕಾಟನ್ ಮಾರ್ಕೆಟ್) ಕೇಂದ್ರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುವುದು.
  7. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ಸಂಪೂರ್ಣ digitize ಮಾಡಲು 10 ಕೋಟಿ ರೂ. ವೆಚ್ಚದಲ್ಲಿ ERP (Enterprise Resource Planning) ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.
  8. ನಬಾರ್ಡ್ ಸಂಸ್ಥೆಯ ಸಲಹೆಯಂತೆ ಪ್ರತಿ ಜಿಲ್ಲೆಯಲ್ಲಿ ʻಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ʼ ಸ್ಥಾಪಿಸಲು RBI ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಜಲಸಂಪನ್ಮೂಲ

“ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ”
-ಕೆ.ಪಿ. ಪೂರ್ಣಚಂದ್ರ ತೇಜಸ್ವಿ

  1. ಕರ್ನಾಟಕದ ಬಹು ನಿರೀಕ್ಷಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ, ತಮಿಳುನಾಡು ರಾಜ್ಯವು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿಗಳು ವಜಾಗೊಂಡಿರುವುದು ಕರ್ನಾಟಕಕ್ಕೆ ಮಹತ್ವದ ಕಾನೂನು ಜಯವಾಗಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ, ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (DPR) ಶೀಘ್ರವೇ ಸಿದ್ಧಪಡಿಸಿ ಅನುಮೋದನೆಗೆ ಹಾಗೂ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
  2. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದ ಏತ ನೀರಾವರಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. 2ನೇ ಹಂತದಲ್ಲಿ ಬಾಕಿ ಇರುವ 18.73 ಕಿ.ಮೀ ಉದ್ದದ ಕಾಲುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಹೆಚ್ಚುವರಿಯಾಗಿ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಲು ಕೊರಟಗೆರೆ ತಾಲ್ಲೂಕಿನ ವಡೇರಹಳ್ಳಿ ಸಮೀಪ 1.2 ಟಿ.ಎಂ.ಸಿ ಸಾಮರ್ಥ್ಯದ ಸಮತೋಲನಾ ಜಲಾಶಯವನ್ನು ನಿರ್ಮಿಸಲಾಗುವುದು.
  3. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಒದಗಿಸುವ ಬಗ್ಗೆ ಕೇಂದ್ರ ಸರ್ಕಾರದ 2023-24ರ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದರೂ ಸಹ ಇಲ್ಲಿಯವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಆದರೂ, ರಾಜ್ಯ ಸರ್ಕಾರದ ವತಿಯಿಂದ ಈ ಯೋಜನೆಗೆ
    11,343 ಕೋಟಿ ರೂ.ಗಳ ವೆಚ್ಚ ಭರಿಸಲಾಗಿದೆ. ಸುಮಾರು ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳಲು ಗ್ರಾಮದ ಭೂಸಮಸ್ಯೆಯನ್ನು ಬಗೆಹರಿಸಲಾಗಿದೆ. ಇದರಿಂದಾಗಿ 135 ಕಿ.ಮೀ ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ಇದರಡಿ ಬರುವ ಫೀಡರ್ ಕಾಮಗಾರಿಗಳನ್ನು 2027ನೇ ಸಾಲಿನಲ್ಲಿ ಪೂರ್ಣಗೊಳಿಸಿ 157 ಕೆರೆಗಳನ್ನು ತುಂಬಿಸಲಾಗುವುದು.
  4. ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಯಾದ UKP Stage-III ಯೋಜನೆಯಡಿ ಆಲಮಟ್ಟಿ ಅಣೆಕಟ್ಟನ್ನು 519.6 ಮೀ. ಯಿಂದ 524.256 ಮೀ. ಗೆ ಎತ್ತರಿಸುವ ಕಾಮಗಾರಿಯಿಂದ ಮುಳುಗಡೆಯಾಗುವ ಜಮೀನುಗಳು ಹಾಗೂ ನೀರಾವರಿ ಕಾಲುವೆ ಜಾಲಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರು ಮತ್ತು ಸಂತ್ರಸ್ತರ ದೀರ್ಘಕಾಲದ ಬೇಡಿಕೆಗೆ ನಮ್ಮ ಸರ್ಕಾರ ಸ್ಪಂದಿಸಿ ಪರಿಷ್ಕೃತ ಒಪ್ಪಂದದ ದರಗಳನ್ನು ಅನುಮೋದಿಸಿದೆ. ಮುಳುಗಡೆಗೊಳ್ಳುವ ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ನಿಗದಿಪಡಿಸಲಾಗಿದೆ. ಒಪ್ಪಂದದ ಐತೀರ್ಪುಗಳ ಮುಖಾಂತರ ಜಮೀನನ್ನು ಸ್ವಾಧೀನಪಡಿಸುವ ಪ್ರಕ್ರಿಯೆಯನ್ನು ಪ್ರಸಕ್ತ ವರ್ಷದಲ್ಲಿ ಪ್ರಾರಂಭಿಸಲಾಗುವುದು.
  5. ತುಂಗಭದ್ರಾ ಅಣೆಕಟ್ಟಿನ ಶಿಥಿಲಗೊಂಡಿರುವ 33 ಗೇಟುಗಳನ್ನು ಬದಲಾಯಿಸಿ ಹೊಸ ಗೇಟುಗಳ ಅಳವಡಿಕೆಯನ್ನು ಮುಂಗಾರು ಪೂರ್ವದಲ್ಲಿ ಪೂರ್ಣಗೊಳಿಸಲಾಗುವುದು. ಮುಂದುವರೆದು, ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಶೇಖರಣೆಯಿಂದ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಸೇರಿದಂತೆ ಇತರೆ ಪರ್ಯಾಯ ಮಾರ್ಗೋಪಾಯಗಳ ಕುರಿತು ಈಗಾಗಲೇ ಚಿಂತಿಸಲಾಗಿದೆ. ಇವುಗಳಲ್ಲಿ ಸಮಯೋಚಿತ ಪರ್ಯಾಯ ಮಾರ್ಗದ ಕುರಿತು ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ ತುಂಗಭದ್ರಾ ಮಂಡಳಿಯ ಸಹಮತಿಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ತೀವ್ರತರವಾಗಿ ಪ್ರಯತ್ನಿಸಲಾಗುವುದು.
  6. ಮಹದಾಯಿ ಕಣಿವೆಯ ಕಳಸಾ-ಬಂಡೂರಾ ನಾಲಾ ಯೋಜನೆಗಳಡಿ ಅರಣ್ಯ ತೀರುವಳಿ ಪಡೆಯಲು ರಾಜ್ಯ ಸರ್ಕಾರವು ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯಲ್ಲಿ ಎರಡು ವರ್ಷಗಳಿಂದ ನಿರಂತರ ಪ್ರಯತ್ನಿಸಿದ್ದರೂ, ಈವರೆಗೆ ತೀರುವಳಿ ಲಭಿಸಿರುವುದಿಲ್ಲ. ಈ ಯೋಜನೆಗಳಿಗೆ ಈಗಾಗಲೇ ಗುತ್ತಿಗೆ ವಹಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಅರಣ್ಯ ತೀರುವಳಿ ದೊರೆತ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಈ ವಿಳಂಬದಿಂದ ರಾಜ್ಯ ಸರ್ಕಾರದ ಹೊರೆ ಹೆಚ್ಚಾಗುತ್ತಿದೆ.
  7. ಚಾಮರಾಜನಗರದ ಹನೂರು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಿ ಕುಡಿಯುವ ನೀರು ಹಾಗೂ 12 ಸಾವಿರ ಎಕರೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು ಉಡುತೊರೆಹಳ್ಳ ಯೋಜನೆಯನ್ನು 490 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು.
  8. ವಿಜಯಪುರ ಜಿಲ್ಲೆಯ ಬಾಬಾ ನಗರದಲ್ಲಿ 0.67 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯವನ್ನು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗುವುದು.
  9. ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಾಲ್ಕು ನಿಗಮಗಳಡಿ ಪೂರ್ಣಗೊಳ್ಳುವ ಹಂತದಲ್ಲಿನ 12 ನೀರಾವರಿ ಯೋಜನೆಗಳು, 22 ಕೆರೆ ತುಂಬುವ ಯೋಜನೆಗಳು ಮತ್ತು ಮೂರು ಆಧುನೀಕರಣ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ 1.16 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಯೋಜನೆಗಳ ಪಟ್ಟಿಯನ್ನು ಅನುಬಂಧ-೧ರಲ್ಲಿ ಲಗತ್ತಿಸಿದೆ.
  10. ಕೃಷ್ಣಾ, ಕಾವೇರಿ, ಗೋದಾವರಿ ಹಾಗೂ ಇತರೆ ನದಿ ಕಣಿವೆಗಳಲ್ಲಿ ಒಟ್ಟಾರೆ 8,045 ಕೋಟಿ ರೂ. ಮೊತ್ತದ 75 ನೀರಾವರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು. ಯೋಜನೆಗಳ ಪಟ್ಟಿಯನ್ನು ಅನುಬಂಧ-೨ರಲ್ಲಿ ಲಗತ್ತಿಸಿದೆ.
  11. ರಾಜ್ಯದ ಕಾಡಾ ಪ್ರಾಧಿಕಾರದಡಿ ಹತ್ತಿಕುಣಿ ಹಾಗೂ ತುಂಗಭದ್ರಾ ಎಡದಂಡೆ ಶಾಖಾ ಕಾಲುವೆಯಡಿ ಬರುವ 4,745 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ Pressurised Piped Network ಪದ್ಧತಿಯನ್ನು ಅಳವಡಿಸಿ ನೀರಾವರಿ ವ್ಯವಸ್ಥೆಯನ್ನು ಆಧುನೀಕರಿಸಲಾಗುವುದು.

ಸಣ್ಣ ನೀರಾವರಿ

  1. ಹೆಬ್ಬಾಳ-ನಾಗವಾರ ಕಣಿವೆಯ ಮೂರನೇ ಹಂತದಲ್ಲಿ ಶಿಡ್ಲಘಟ್ಟದ ಅಮಾನಿ ಕೆರೆಯಿಂದ ಶಿಡ್ಲಘಟ್ಟ ತಾಲ್ಲೂಕಿನ 45 ಕೆರೆಗಳಿಗೆ ಮತ್ತು ಚಿಂತಾಮಣಿ ತಾಲ್ಲೂಕಿನ 119 ಕೆರೆಗಳೂ ಸೇರಿ ಒಟ್ಟಾರೆ
    164 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 237 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು.
  2. ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಹೆಚ್.ಎನ್ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ತುಂಬಿಸುವ ಕಾಮಗಾರಿಯನ್ನು 140 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು.
  3. ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂ.ಎಲ್.ಡಿ. ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ೧೧೯ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು 650 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.
  4. 2025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏತ ನೀರಾವರಿ, ಚೆಕ್ ಡ್ಯಾಂ, ಕೆರೆಗಳ ಪುನಃಶ್ಚೇತನ ಅಭಿವೃದ್ಧಿ ಮುಂತಾದ 112 ಕಾಮಗಾರಿಗಳನ್ನು 1,793 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದಿಸಿದೆ. (ಅನುಬಂಧ-3)
  5. ರಾಜ್ಯಾದ್ಯಂತ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಿಸಲು ಕೆರೆ ಬಳಕೆದಾರರ ಸಂಘಗಳನ್ನು ಬಲವರ್ಧನೆಗೊಳಿಸಲಾಗುವುದು.
  6. ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ಹಾಗೂ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಜಿಡಗಾದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅಂತರ್ಜಲ ಹೆಚ್ಚಿಸಲು ಕೆರೆಗಳ ಆಧುನೀಕರಣ, ಅಣೆಕಟ್ಟು ಮತ್ತು ಪಿಕ್-ಅಪ್ ಹಾಗೂ ಚೆಕ್ಡ್ಯಾಂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಶಾಲಾ ಶಿಕ್ಷಣ

  1. 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 184 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಲಾಗಿದೆ.
  2. ಖಾಸಗಿ ಶಾಲೆಗಳ ಮಾನ್ಯತೆ ಪಡೆಯುವ ಹಾಗೂ ನವೀಕರಿಸುವ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಲು ಅನುಮತಿಸಿ ಸರಳೀಕರಣಗೊಳಿಸಲಾಗಿದೆ.
  3. 2025–26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿವಿಧ ಸವಲತ್ತುಗಳನ್ನು ಮೊದಲ ಬಾರಿಗೆ ನೇರ ನಗದು ವರ್ಗಾವಣೆ (DBT) ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರಗಳನ್ನು ಆನ್-ಲೈನ್ ಮೂಲಕ ವಿತರಿಸಲಾಗಿದೆ.
  4. ʻಉತ್ತಮ ಕಲಿಕೆ ಉಜ್ವಲ ಭವಿಷ್ಯʼ ಎಂಬ ಘೋಷವಾಕ್ಯದೊಂದಿಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ADB ನೆರವಿನೊಂದಿಗೆ 500 ಶಾಲೆಗಳು, KKRDB ನಿಧಿಯಿಂದ 200 ಶಾಲೆಗಳು ಹಾಗೂ KMERC ನಿಧಿಯಿಂದ 100 ಶಾಲೆಗಳು ಒಟ್ಟಾರೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಇದಕ್ಕಾಗಿ ಒಟ್ಟಾರೆ 3,900 ಕೋಟಿ ರೂ.ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ವೆಚ್ಚ ಮಾಡಲಾಗುವುದು.
  5. ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯ ವೇಳೆ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿನ (KPS) ಶಿಕ್ಷಕರ ಹುದ್ದೆಗಳನ್ನು ಮಹತ್ವದ ಹುದ್ದೆಗಳೆಂದು ಪರಿಗಣಿಸಿ ಮೊದಲ ಆದ್ಯತೆಯಲ್ಲಿ ಭರ್ತಿ ಮಾಡಲಾಗುವುದು ಹಾಗೂ ಸದರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರ ನೇಮಕಾತಿ ಮಾಡಲು ಆದ್ಯತೆ ನೀಡಲಾಗುವುದು.
  6. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ವಿಶೇಷವಾಗಿ ದಾಖಲಾತಿ ಪ್ರಮಾಣ ಮತ್ತು ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ 1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ. 2026-27ನೇ ಸಾಲಿನಿಂದ ವಿದ್ಯಾವಿಕಾಸ ಯೋಜನೆಯಡಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಚಟುವಟಿಕೆ ಪುಸ್ತಕಗಳನ್ನು, 1 ರಿಂದ 10ನೇ ತರಗತಿಯವರೆಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು.
  7. ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಕೊಠಡಿ ನಿರ್ಮಾಣ ಮತ್ತು ಕೊಠಡಿಗಳ ದುರಸ್ತಿ ಕಾಮಗಾರಿಗಳಿಗೆ 565 ಕೋಟಿ ರೂ.ಗಳು, ಶೌಚಾಲಯ ನಿರ್ಮಾಣಕ್ಕಾಗಿ 75 ಕೋಟಿ ರೂ.ಗಳು ಹಾಗೂ ಶಾಲೆಗಳಿಗೆ ಪೀಠೋಪಕರಣಗಳನ್ನು ಖರೀದಿಸಲು 25 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
  8. ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಗಾಗಿ 125 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು. ಸದರಿ ಅನುದಾನವನ್ನು ಶಾಲಾ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ನೇರವಾಗಿ ವರ್ಗಾಯಿಸಲಾಗುವುದು.
  9. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಜಾರಿಗೊಳಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಸಾಮರ್ಥ್ಯ ವೃದ್ಧಿಗಾಗಿ ಇಂಗ್ಲಿಷ್ ಭಾಷಾ ತರಬೇತಿ ಕಾರ್ಯಕ್ರಮವನ್ನು 24 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುವುದು.
  10. IIT ಧಾರವಾಡದ ಸಹಯೋಗದೊಂದಿಗೆ 8 ರಿಂದ 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 12.28 ಲಕ್ಷ ವಿದ್ಯಾರ್ಥಿಗಳಿಗೆ ಅಂದಾಜು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ AI ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೈಯಕ್ತಿಕ ಸ್ವಯಂ-ಕಲಿಕಾ ಡಿಜಿಟಲ್ ಟ್ಯೂಟರ್ ಸೌಲಭ್ಯವನ್ನು ಒದಗಿಸಲಾಗುವುದು.
  11. 2026-27ನೇ ಸಾಲಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
  12. ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು 204 BRC ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ ಒಬ್ಬರು ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸಲಾಗುವುದು.
  13. ವಿಜಯಪುರದ ಸೈನಿಕ ಶಾಲೆಯ ಹಾಸ್ಟೆಲ್ ಕಟ್ಟಡಗಳನ್ನು ಹಂತ ಹಂತವಾಗಿ ಪುನರ್ ನಿರ್ಮಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.
  14. ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಲಾಗುವುದು.
  15. ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಮತ್ತು ವ್ಯಕ್ತಿತ್ವ ರೂಪಿಸುವ ಸ್ಥಳವಾಗಿರುವ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ, ಕಠಿಣ ನಿಯಮ ಹಾಗೂ ಸಹಾಯ ಕೇಂದ್ರಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು.

ಉನ್ನತ ಶಿಕ್ಷಣ

  1. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಾಲಿಟೆಕ್ನಿಕ್ಗಳ ಬಲವರ್ಧನೆ, ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ADB ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ ʻಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆʼ ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 11 ಪಾಲಿಟೆಕ್ನಿಕ್ಗಳನ್ನು ಮಾದರಿ ಸಂಸ್ಥೆಗಳನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ADB ನೆರವಿನೊಂದಿಗೆ 9 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
  2. ಹಿಂದಿನ ಸಾಲಿನಲ್ಲಿ ಘೋಷಿಸಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್ಗಳು ಮತ್ತು ಯುವಿಸಿಇ ವಿಶ್ವವಿದ್ಯಾಲಯದಲ್ಲಿ ಒಟ್ಟಾರೆ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿಸಲಾಗಿದೆ.
    ಸದರಿ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಮುಂದುವರೆದು, ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 1,000 ಬೋಧಕ ಹುದ್ದೆಗಳನ್ನು ತರ್ಕಬದ್ಧಗೊಳಿಸಿ ಹಂತ ಹಂತವಾಗಿ ಭರ್ತಿ ಮಾಡಲಾಗುವುದು.
  3. ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ 25 ಸರ್ಕಾರಿ ಪದವಿ ಕಾಲೇಜು, ಮೂರು ಪಾಲಿಟೆಕ್ನಿಕ್ ಹಾಗೂ ಮೂರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತಲಾ ಒಂದು ಕೋಟಿ ರೂ.ಗಳಂತೆ ಒಟ್ಟು 31 ಕೋಟಿ ರೂ.ಗಳ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಅವಶ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು.
  4. 1,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಒಟ್ಟು 50 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ ಪೀಠೋಪಕರಣಗಳು ಹಾಗೂ ಕಟ್ಟಡಗಳ ದುರಸ್ತಿ/ನವೀಕರಣ ಕಾಮಗಾರಿಗಳನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಕೈಗೊಳ್ಳಲಾಗುವುದು.
  5. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ 75 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 23 ಪಾಲಿಟೆಕ್ನಿಕ್ ಹಾಗೂ ಐದು ಇಂಜಿನಿಯರಿಂಗ್ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಒದಗಿಸಲಾಗುವುದು.
  6. ವಿಜಯಪುರ ಜಿಲ್ಲೆಯ ಚಡಚಣ, ಬೆಳಗಾವಿ ಗ್ರಾಮಾಂತರ ಹಾಗೂ ಮೈಸೂರು ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ KKRDB macro ಅನುದಾನದಿಂದ ಪ್ರಥಮ ದರ್ಜೆ ಕಾಲೇಜನ್ನು ಸ್ಥಾಪಿಸಲಾಗುವುದು.
  7. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕಲಬುರಗಿ ಜಿಲ್ಲೆಯ ನಿಂಬರಗಾ, ಯಾದಗಿರಿ ಜಿಲ್ಲೆಯ ಕಕ್ಕೇರಾ, ರಾಯಚೂರು ಜಿಲ್ಲೆಯ ಅಂಬಾಮಠ ಮತ್ತು ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮಗಳಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳನ್ನು ತಲಾ 18 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
  8. ಸರ್ಕಾರದ 11 ಪಾಲಿಟೆಕ್ನಿಕ್ಗಳಲ್ಲಿ ಹಾಗೂ ಚಿತ್ರದುರ್ಗ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸ್ತುತ ಹೆಚ್ಚಿನ ಬೇಡಿಕೆ ಹಾಗೂ ಉದ್ಯೋಗಾವಕಾಶವಿರುವ ಕೋರ್ಸ್ಗಳಾದ AI, ಮಷಿನ್ ಲರ್ನಿಂಗ್, ಕ್ಲೌಡ್ ಕಂಪ್ಯೂಟಿಂಗ್, ಮೈನಿಂಗ್ ಇಂಜಿನಿಯರಿಂಗ್, ಆಟೋಮೇಷನ್ ಇಂಜಿನಿಯರಿಂಗ್ ಮುಂತಾದ 15 ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲಾಗುವುದು.
  9. AnitaB.org India ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯೊಂದಿಗೆ ವೃತ್ತಿ ಜೀವನದ ಆರಂಭಿಕ ಹಂತದಲ್ಲಿರುವ ವಿಜ್ಞಾನ, ತಾಂತ್ರಿಕ, ಗಣಿತ ಮತ್ತು ಇಂಜಿನಿಯರಿಂಗ್ (STEM) ವಿಭಾಗಗಳಲ್ಲಿನ ಆಯ್ದ 3,000 ಮಹಿಳಾ ಪದವೀಧರರಿಗೆ ಕೌಶಲ್ಯಾಭಿವೃದ್ಧಿ/ವೃತ್ತಿನಿರತ ತರಬೇತಿಗಳನ್ನು ಒಟ್ಟು 13.50 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗುವುದು.
  10. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪ್ರಸಕ್ತ ವರ್ಷದಲ್ಲಿಯೂ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು.
  11. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 10 ಮತ್ತು 12ನೇ ತರಗತಿಗಳನ್ನು ವ್ಯಾಸಂಗ ಮಾಡಿ 2025-26ನೇ ಸಾಲಿನಿಂದ ಉನ್ನತ ಶಿಕ್ಷಣವನ್ನು ಮುಂದುವರೆಸುತ್ತಿರುವ 37,000 ವಿದ್ಯಾರ್ಥಿನಿಯರಿಗೆ ವಾರ್ಷಿಕ 30,000 ರೂ.ಗಳ ವಿದ್ಯಾರ್ಥಿ ವೇತನವನ್ನು ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ ಹಾಗೂ ಉಳಿದ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದ ವತಿಯಿಂದ ʻದೀಪಿಕಾ ವಿದ್ಯಾರ್ಥಿ ವೇತನʼ ಯೋಜನೆಯಡಿ ನೀಡಲಾಗುತ್ತಿದೆ. ಇದನ್ನು ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಲಾಗುವುದು.
  12. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ 90 ದಿನಗಳ ಮಾತೃತ್ವ ರಜೆಯ ಸೌಲಭ್ಯವನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲಾಗುವುದು.
  13. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಹೆಸರಘಟ್ಟ ಇಲ್ಲಿ ನಡೆಸಲಾಗುತ್ತಿರುವ ಸೌಂಡ್ ರೆಕಾರ್ಡಿಂಗ್ ಮತ್ತು ಇಂಜಿನಿಯರಿಂಗ್ ಹಾಗೂ ಸಿನಿಮಾಟೋಗ್ರಫಿ ಕೋರ್ಸುಗಳಿಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು.
  14. ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ʻಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯʼವನ್ನು ನಿಲ್ಲಿಸಲು ʻರೋಹಿತ್ ವೇಮುಲ ಕಾಯ್ದೆʼಯನ್ನು ಜಾರಿಗೆ ತರಲಾಗುವುದು.
  15. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ನಮ್ಮ ಸರ್ಕಾರವು ಉದ್ದೇಶಿಸಿದೆ.
  16. ಧಾರವಾಡ ಮತ್ತು ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು.
  17. ಕರ್ನಾಟಕದಲ್ಲಿ NCC ಯನ್ನು ಉತ್ತೇಜಿಸುವ ಸಲುವಾಗಿ ಪ್ರಸ್ತುತ ಇರುವ 96,000 NCC ಕೆಡೆಟ್ಗಳ ಕಾರ್ಯಬಲವನ್ನು ಮುಂದಿನ ಎರಡು ವರ್ಷಗಳಲ್ಲಿ 10,000 ಗಳಷ್ಟು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
  18. ಬಸವಕಲ್ಯಾಣದಲ್ಲಿ ಖಾಸಗಿ ವಚನ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು 25 ಎಕರೆ ಜಮೀನನ್ನು ನೀಡಲಾಗುವುದು.

ಕರ್ನಾಟಕ ಬಜೆಟ್ 2026-27
“ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ”

“ಕೃಷಿ ಕ್ಷೇತ್ರದ ಅಭಿವೃದ್ಧಿ”

• ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʼಕೃಷಿ ಉದ್ದಿಮೆ ತರಬೇತಿ ಕೇಂದ್ರʼವಾಗಿ ಉನ್ನತೀಕರಣ

• ಸಣ್ಣ, ಅತೀ ಸಣ್ಣ ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಾಗುವುದು

• ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ದೊರಕಿಸಲು ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ MSIL ವತಿಯಿಂದ ರೈತ ಮಾಲ್‌ಗಳ ಸ್ಥಾಪನೆ


Share It

You cannot copy content of this page