ನವದೆಹಲಿ : ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಹೊರಬಂದ ಕೇಜ್ರೀವಾಲ್ “ಸರ್ವಾಧಿಕಾರಿಯ ವಿರುದ್ಧದ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಘೋಷಿಸಿದ್ದಾರೆ.
ಕೇಜ್ರೀವಾಲ್ ಬಿಡುಗಡೆಯಾಗುತ್ತಿದ್ದಂತೆ, ಎಎಪಿ ಕಾರ್ಯಕರ್ತರು ಹರ್ಷೋದ್ಘಾರ ಮೊಗಲಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೇಜ್ರೀವಾಲ್‌ಗೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಜೈಲಿನಿಂದ ಹೊರಬಂದ ನಂತರ ಮಾತನಾಡಿದ ಅವರು, ಸರ್ವಾಧಿಕಾರಿ ತನ್ನ ಮೇಲಿನ ವಿರೋಧವನ್ನು ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತಾನೆ ಎಂಬುದು ಗೊತ್ತಾಗಿದೆ. ಅದರ ವಿರುದ್ಧ ನಾವೆಲ್ಲ ಹೋರಾಡಬೇಕಿದೆ ಎಂದರು.
“ನಾನು ಸರ್ವಾಧಿಕಾರದ ವಿರುದ್ಧ ನನ್ನ ಶಕ್ತಿ ಮೀರಿ ಹೋರಾಡುತ್ತಿದ್ದೇನೆ. ಆದರೆ, ಅದರ ವಿರುದ್ಧ ಒಟ್ಟಾಗಿ ಹೋರಾಡಲು ದೇಶದ ೧೪೦ ಕೋಟಿ ಜನರು ಬರಬೇಕಾಗಿದೆ. ಶನಿವಾರ ಬೆಳಗ್ಗೆ ೧೧ ಗಂಟೆಗೆ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ, ಮಧ್ಯಾಹ್ನ ೧ ಗಂಟೆಗೆ ಎಎಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದೇನೆ ಎಂದು ಅವರು ತಿಳಿಸಿದರು.
“ನಿಮ್ಮೊಂದಿಗೆ ಇರಲು ನನಗೆ ತುಂಬಾ ಸಂತೋಷವಾಗಿದೆ. ನಾನು ಶೀಘ್ರದಲ್ಲೇ ಹೊರಗೆ ಬರುತ್ತೇನೆ ಎಂದು ನಾನು ನಿಮಗೆ ಹೇಳಿದ್ದೆ. ಎಲ್ಲಕ್ಕಿಂತ ಮೊದಲು ನಾನು ಹನುಮಂತ ದೇವರಿಗೆ ನಮಸ್ಕರಿಸುತ್ತೇನೆ. ಹನುಮಂತನ ಆಶೀರ್ವಾದದಿಂದಾಗಿ ನಾನು ನಿಮ್ಮ ನಡುವೆ ಇದ್ದೇನೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಎಎಪಿ ನಾಯಕ ಜನರ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಡಲು ಒಗ್ಗೂಡುವಂತೆ ಕೇಳಿಕೊಂಡರು. “ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ದೇಶದ ಕೋಟಿಗಟ್ಟಲೆ ಜನರು ತಮ್ಮ ಆಶೀರ್ವಾದವನ್ನು ನನಗೆ ಕಳುಹಿಸಿದ್ದಾರೆ. ನಾನು ಇಲ್ಲಿರುವ ಸುಪ್ರೀಂ ಕೋರ್ಟ್ಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದಿದ್ದಾರೆ.