ಚಾಮರಾಜನಗರ: ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ಹೆಬ್ಬಾಗಿಲು ನಿಲ್ಲಿಸಲು ಕುರುಬ ಸಮುದಾಯ ಅಡ್ಡಿಪಡಿಸಿದ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ದಲಿತ ಸಮುದಾಯದ ಯುವಕರು ಅಂಬೇಡ್ಕರ್ ಹೆಬ್ಬಾಗಿಲು ನಿಲ್ಲಿಸಲು ತೀರ್ಮಾನಿಸಿ, ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಈ ಹೆಬ್ಬಾಗಿಲು ನಿಲ್ಲಿಸಲು ಗ್ರಾಮದ ಕುರುಬ ಸಮುದಾಯದವರು ವಿರೋಧ ವ್ಯಕ್ತಪಡಿಸಿದರು.
ಕುರುಬ ಸಮುದಾಯದ ಜನರು ಕೂಡ ಕನಕದಾಸರ ಹೆಬ್ಬಾಗಿಲು ಹಾಕಲು ಪಟ್ಟುಹಿಡಿದರು. ಇದರಿಂದ ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ತಹಸೀಲ್ದಾರ್ ಅವರು ಎರಡು ಸಮುದಾಯಗಳಿಗೂ ಅನುಮತಿ ನೀಡಿ ಹೆಬ್ಬಾಗಿಲು ನಿಲ್ಲಿಸಲು ಅನುಕೂಲ ಕಲ್ಪಿಸಿದರು.
ಸ್ಥಳಕ್ಕೆ ಕೊಳ್ಳೇಗಾಲದ ಮಾಜಿ ಶಾಸಕ ಎನ್. ಮಹೇಶ್ ಭೇಟಿ ನೀಡಿದ್ದು, ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ನಂತರ ಅಂಬೇಡ್ಕರ್ ಹೆಬ್ಬಾಗಿಲು ಅಳವಡಿಸುವ ಕಾರ್ಯಕ್ಕೆ ಚಾಲನೆ ದೊರಕಿತು. ಯುವಕರು ಘೋಷಣೆಗಳೊಂದಿಗೆ ಅಂಬೇಡ್ಕರ್ ಹೆಬ್ಬಾಗಿಲು ಅಳವಡಿಸಿದರು.

