ರಾಜಕೀಯ ಸುದ್ದಿ

ಸಾರಿಗೆ ನೌಕರರ ಬಗ್ಗೆ ಅನುಕಂಪದ ಮಾತಾಡಲು ನಿಮಗ್ಯಾವ ನೈತಿಕತೆ ಇದೆ: ಆರ್.ಅಶೋಕ್ ಗೆ ರಾಮಲಿಂಗಾ ರೆಡ್ಡಿ ತರಾಟೆ

Share It

ಬೆಂಗಳೂರು: ಆರ್. ಅಶೋಕ್ ರವರೇ, ತಾವು ಟ್ಟೀಟ್ ಮಾಡಿದರೆ ಮಾತ್ರ ವಿರೋಧ ಪಕ್ಷದ ನಾಯಕರು ಎಂದು ಗುರುತಿಸುತ್ತಾರೆ ಎಂ‌ಬ ಕಲ್ಪನಾ ಲೋಕದಿಂದ ಹೊರ ಬನ್ನಿ. ಸಾರಿಗೆ ನೌಕರರ ಬಗ್ಗೆ ಅನುಕಂಪ ತೋರುವ ಅದ್ಯಾವ ನೈತಿಕತೆ ನಿಮಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾವು ಅವರೊಡನೆ 11 ಬಾರಿ  ಸಭೆಗಳನ್ನು ನಡೆಸಿದ್ದೇವೆ.  ಸಾರಿಗೆ ನೌಕರರಿಗೆ 12.5 % ವೇತನ‌ ಪರಿಷ್ಕರಣೆ ಮಾಡಿ ಸರ್ಕಾರವು ಆದೇಶ ಹೊರಡಿಸಿದೆ. ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ರೂ72.80 ಕೋಟಿ, ಪ್ರತಿ ವರ್ಷ ರೂ.873.64 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.

ಈಗಾಗಲೇ ತಮ್ಮ ಪಕ್ಷದ ಆಡಳಿತದ ಅವಧಿಯ 2023 ರ ಮಾರ್ಚ್‌ ನ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ ರೂ. 1271.92 ಕೋಟಿಗಳಲ್ಲಿ ಮೊದಲ ಕಂತಿನ ಹಣ ರೂ. 450 ಕೋಟಿಯನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ. ನಾನು ಈಗಾಗಲೇ ತಮ್ಮ ಮತ್ತು ತಮ್ಮ ಪಕ್ಷದ ಆಡಳಿತ ಅವಧಿಯ  ಮಾಹಿತಿಯನ್ನು‌ ಅಂಕಿಅಂಶ‌ ಸಮೇತ ನೀಡಿರುವುದನ್ನು ಅವಗಾಹಿಸಿ. ಆದರೂ‌ ಮತ್ತೊಮ್ಮೆ ಈ ಎಲ್ಲಾ ಮಾಹಿತಿಗಳನ್ನು ನೀಡಲಾಗುತ್ತಿದೆ.

ತಾವು ಸಾರಿಗೆ ಮಂತ್ರಿಯಾಗಿದ್ದಾಗಲೇ ಮೊದಲ ಬಾರಿಗೆ ವೇತನ ಪರಿಷ್ಕರಣೆಗಾಗಿ ಮುಷ್ಕರ ಹೂಡುವ ಪದ್ಧತಿ ಪ್ರಾರಂಭವಾಗಿದ್ದು. ಮುಷ್ಕರದ ಅವಧಿ ದಿನಾಂಕ: 13-09-2012 ಮತ್ತು 14-09-2012. ತಾವು ಸಾರಿಗೆ ಮಂತ್ರಿಗಳಾಗಿದ್ದಾಗ ನೌಕರರ ಸಂಘಟನೆಗಳು 35% ವೇತನ‌ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದವು, ತಾವು 10% ವೇತನ ಪರಿಷ್ಕರಣೆ ಮಾಡಿದ್ದೀರಿ ಎಂಬುದು ತಿಳಿದಿದಿಯೇ? ಎಂದಿದ್ದಾರೆ.

ತಮ್ಮದೇ ಬಿಜೆಪಿ ಪಕ್ಷದ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಕಾಲ‌ ಮುಷ್ಕರ ನಡೆದಿದ್ದು.
ಎರಡೆರಡು ಬಾರಿ‌ ಮುಷ್ಕರ ನಡೆದದ್ದು. ದಿನಾಂಕ: 11-12-2020 ರಿಂದ 14-12-2020 ( ನಾಲ್ಕು ದಿವಸ) ಮತ್ತು 07-04-2021 ರಿಂದ 21-04-2021 ( ಹದಿನೈದು ದಿವಸ). ತಮ್ಮ ಪಕ್ಷ ದ ಅವಧಿಯಲ್ಲಿ ಮುಷ್ಕರದ ಹೆಸರಿನಲ್ಲಿ ಸರಿಸುಮಾರು 3,500 ನೌಕರರನ್ನು‌ ಕೆಲಸದಿಂದ ವಜಾ, ಅಮಾನತು ಮಾಡಿ FIR ಹಾಕಿಸಿ,‌ ಇಂದಿಗೂ ಅವರು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ.

ತಮ್ಮದೇ ಬಿಜೆಪಿ ಸರ್ಕಾರವಿದ್ದಾಗ ಮಾರ್ಚ್-2023 ರಲ್ಲಿ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಮಾಡಿ, 38 ತಿಂಗಳ ಹಿಂಬಾಕಿ ವೇತನ ಪಾವತಿ ಬಾಕಿಯಿಟ್ಟು, ಈ ಸಂಬಂಧ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ತಪ್ಪಾದ ಸರ್ಕಾರಿ ಆದೇಶ ಹೊರಡಿಸಿರುವುದೇ ಈ ಎಲ್ಲಾ ತೊಡಕುಗಳಿಗೆ ಮೂಲ ಕಾರಣವಾಗಿದೆ.

ತಮ್ಮ ಬಿಜೆಪಿ ಆಡಳಿತ ಅವಧಿಯಲ್ಲಿ ನೀಡಬೇಕಾಗಿದ್ದ ನಿವೃತ್ತ ನೌಕರರ ವೇತನ ಪರಿಷ್ಕರಣೆ ಉಪಧನ ಬಾಕಿ ಮೊತ್ತ ರೂ.224 ಕೋಟಿ ಗಳಿಗೂ ಸಹ ಯಾವುದೇ ಅನುದಾನ ಮೀಸಲಿಡದೆ ಇದ್ದಾಗ್ಯೂ ಸಹ ನಮ್ಮ ಸರ್ಕಾರವು 2025 ರಲ್ಲಿ ಹಣ ಬಿಡುಗಡೆಗೊಳಿಸಿದೆ. ನಾಲ್ಕು ಸಾರಿಗೆ ಸಂಸ್ಥೆಗಳ ಬಾಕಿ ಹೊಣೆಗಾರಿಕೆ 31.03.2026 ರಂತೆ ರೂ. 7130.80 ಕೋಟಿ (ಇದರಲ್ಲಿ ರೂ. 2298.20 ಕೋಟಿ ನೌಕರರ ಭವಿಷ್ಯ ನಿಧಿ ಬಾಕಿ ಮತ್ತು ರೂ.822.26 ಕೋಟಿ ಇಂಧನ ಪಾವತಿ ಬಾಕಿ)

ತಮ್ಮ ಬಿಜಿಪಿ ಆಡಳಿತ ಅವಧಿಯ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್‌ ಬಾಕಿ ಹಣ ಪಾವತಿಗಾಗಿ, 2025ರಲ್ಲಿ ನಮ್ಮ ಸರ್ಕಾರವು ಬ್ಯಾಂಕ್‌ನಿಂದ ರೂ.2000 ಕೋಟಿ ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಿದ್ದು, ಈ ಸಾಲದ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರ್ಕಾರವು ಪಾವತಿಸುತ್ತಿದೆ ಎಂದು ಗುಡುಗಿದ್ದಾರೆ.


Share It

You cannot copy content of this page