ಉಪಯುಕ್ತ ಸುದ್ದಿ

ಉಜ್ವಲ ಸಬ್ಸಿಡಿ ಕಡಿತಗೊಳಿಸಿದ ಕೇಂದ್ರ: ವರ್ಷಕ್ಕೆ 9 ಸಿಲಿಂಡರ್​​ಗಳ ಕೋಟಾ ಈಗ 4ಕ್ಕೆ ಇಳಿಕೆ

Share It

ನವದೆಹಲಿ: ಕೇಂದ್ರವು ತನ್ನ ಪ್ರಮುಖ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ ಲಭ್ಯವಿರುವ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್‌ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಕೆ ಮಾಡಿದೆ.

ಮೇ 2016 ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿ ಫಲಾನುಭವಿಗಳು ಆರಂಭದಲ್ಲಿ ವರ್ಷಕ್ಕೆ 12 ಸಬ್ಸಿಡಿ 14.2 ಕೆಜಿ ಸಿಲಿಂಡರ್‌ಗಳಿಗೆ ಅರ್ಹರಾಗಿದ್ದರು. ಕಳೆದ ವರ್ಷ ಸಬ್ಸಿಡಿ ಕೋಟಾವನ್ನು ಒಂಬತ್ತು ಸಿಲಿಂಡರ್‌ಗಳಿಗೆ ಇಳಿಸಲಾಗಿತ್ತು ಮತ್ತು ಈಗ ಅದನ್ನು ನಾಲ್ಕಕ್ಕೆ ಇಳಿಕೆ ಮಾಡಲಾಗಿದೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನೂಜಾ, ಪರಿಷ್ಕೃತ ಅರ್ಹತೆಯು ಉಜ್ವಲ ಫಲಾನುಭವಿಗಳ ಸರಾಸರಿ ವಾರ್ಷಿಕ ಬಳಕೆಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದ್ಧಾರೆ.

ಶುದ್ಧ ಅಡುಗೆ ಇಂಧನದ ಬಳಕೆಯನ್ನು ಉತ್ತೇಜಿಸಲು ಮತ್ತು ಕೈಗೆಟುಕುವಿಕೆಯನ್ನು ಸುಧಾರಿಸಲು, ಸರ್ಕಾರವು ಮೇ 2022 ರಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿ ನೀಡಿತ್ತು. ಇದನ್ನು ವಾರ್ಷಿಕವಾಗಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತಿತ್ತು. ಪ್ರತಿ ಸಿಲಿಂಡರ​ ಖರೀದಿಸಿದ ನಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. ಅಕ್ಟೋಬರ್ 2023 ರಲ್ಲಿ ಈ ಸಬ್ಸಿಡಿಯನ್ನು 300 ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. ಈ ಪ್ರಯೋಜನವನ್ನು 5 ಕೆಜಿ ಸಿಲಿಂಡರ್‌ಗಳಗೂ ವಿಸ್ತರಿಸಲಾಗಿತ್ತು.

ನವದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‌ನ ಬೆಲೆ ಕಳೆದ ಮೂರು ತಿಂಗಳಲ್ಲಿ ಎರಡು ಬಾರಿ ಹೆಚ್ಚಳವಾಗಿದ್ದು, ಒಟ್ಟು 89 ರೂ.ಗಳಷ್ಟು ಹೆಚ್ಚಾಗಿದೆ. ಜೂನ್ 7ರ ನಂತರದ ಬೆಲೆ 942 ರೂ.ಗಳಾಗಿದೆ. 300 ರೂ. ಸಬ್ಸಿಡಿಯನ್ನು ಲೆಕ್ಕಹಾಕಿದ ನಂತರ, ಪಿಎಂಯುವೈ ಫಲಾನುಭವಿಗಳು 14.2 ಕೆಜಿ ಸಿಲಿಂಡರ್‌ಗೆ 642 ರೂ.ಗಳನ್ನು ಪಾವತಿಸುತ್ತಿದ್ದಾರೆ.

ಫೆಬ್ರವರಿ ಅಂತ್ಯದಲ್ಲಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ನಂತರ ಅಂತಾರಾಷ್ಟ್ರೀಯ ಬೆಲೆಗಳಲ್ಲಿ ಏರಿಕೆಯಾಗಿದೆ. ಹೀಗಾಗಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಪೂರೈಸುವ ವೆಚ್ಚವು 1,600 ರೂ.ಗಳಿಗಿಂತ ಹೆಚ್ಚಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಖನೂಜಾ ಹೇಳಿದ್ದಾರೆ.


Share It

You cannot copy content of this page