ಬೆಳಗಾವಿ : ಇಲ್ಲಿಯ ಮಹಾದ್ವಾರ ರಸ್ತೆಗೆ ಹೊಂದಿಕೊಂಡ ಅಪ್ಟೇಕರ್ ಗಲ್ಲಿಯಲ್ಲಿ ಮಂಗಳವಾರ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಮುನಿಯಾಲು ಮೂಲದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಕ್ಷಿತಾ ಪೂಜಾರಿ (29) ಆತ್ಮಹತ್ಯೆ ಮಾಡಿಕೊಂಡವರು. ತಿಂಗಳ ಹಿಂದೆ ಮಂಜುನಾಥ ಪೂಜಾರಿ ಎಂಬವರೊಂದಿಗೆ ಅವರ ವಿವಾಹ ನೆರವೇರಿತ್ತು. ರಕ್ಷಿತಾ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸದ್ಯ ವರ್ಕ್ ಫ್ರಮ್ ಹೋಂ ಮೂಲಕ ಕೆಲಸ ಮಾಡುತ್ತಿದ್ದರು. ರವಿವಾರ ಬೆಳಗ್ಗೆ ತನ್ನ ತಾಯಿಗೆ ಕರೆ ಮಾಡಿದ್ದ ಅವರು ಗಂಡನ ಮನೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಸಂಜೆವರೆಗೆ ಫೋನ್ ಸಂಪರ್ಕ ಮಾಡಿದ್ದರೂ ರಕ್ಷಿತಾ ಫೋನ್ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಕುಟುಂಬಸ್ಥರು ಅನುಮಾನ ಗೊಂಡಿದ್ದಾರೆ. ಕೊನೆಗೆ ಮನೆಯ ಕಿಟಕಿಯಿಂದ ಗಮನಿಸಿದಾಗ ರಕ್ಷಿತಾ ತನ್ನ ಚೂಡಿದಾರ ಶಾಲನ್ನು ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

