ಸುದ್ದಿ

ಮೊಹರಮ್ ಹಬ್ಬ ಕರ್ನಾಟಕದ ಜನಪದ ಸಂಸ್ಕೃತಿ ಮತ್ತು ಕೋಮು ಸೌಹಾರ್ದತೆಯ ಜೀವಂತ ಸಂಕೇತ

Share It

  • ಖಾಸಿಂ ಸಾಬ್. ಎ, ಬೆಂಗಳೂರು

ಭಾರತವು ವಿವಿಧ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳ ಸಹಬಾಳ್ವೆಯ ನೆಲೆಯಾಗಿದ್ದು, ಈ ವೈವಿಧ್ಯತೆಯೊಳಗಿನ ಏಕತೆಯನ್ನು ಸ್ಪಷ್ಟವಾಗಿ ತೋರಿಸುವ ಹಬ್ಬಗಳಲ್ಲಿ ಮೊಹರಂ ಪ್ರಮುಖ ಸ್ಥಾನ ಹೊಂದಿದೆ. ಇಸ್ಲಾಮಿನ ಇತಿಹಾಸದಲ್ಲಿ ದುಗುಡ ಮತ್ತು ತ್ಯಾಗದ ಸ್ಮರಣೆಯಾಗಿ ಆಚರಿಸಲ್ಪಡುವ ಮೊಹರಂ, ಭಾರತೀಯ ಸಮಾಜದಲ್ಲಿ ಧರ್ಮಸೌಹಾರ್ದ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿ ವಿಶಿಷ್ಟ ರೂಪ ಪಡೆದುಕೊಂಡಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಮೊಹರಂ ಕೇವಲ ಒಂದು ಧಾರ್ಮಿಕ ಆಚರಣೆ ಮಾತ್ರವಲ್ಲ ಅದು ಜನಪದ ಸಂಸ್ಕೃತಿ, ಸಾಮಾಜಿಕ ಐಕ್ಯತೆ ಮತ್ತು ಕೋಮುಸೌಹಾರ್ದತೆಯ ಜೀವಂತ ದೇಸಿ ಸಂಪ್ರದಾಯವಾಗಿದೆ.

ಇಮಾಮ್ ಹುಸೈನ್ ಅವರ ತ್ಯಾಗವನ್ನು ಸ್ಮರಿಸುವ ಈ ಹಬ್ಬವು ನ್ಯಾಯ, ಸತ್ಯ ಮತ್ತು ಅನ್ಯಾಯದ ವಿರುದ್ಧದ ಹೋರಾಟದ ಸಂದೇಶ ಹೊತ್ತು ಬಂದಿದೆ. ಆದರೆ ಭಾರತದ ಸಾಂಸ್ಕೃತಿಕ ನೆಲೆಯಲ್ಲಿ ಮೊಹರಂ ತನ್ನ ಮೂಲ ಧಾರ್ಮಿಕ ಅರ್ಥವನ್ನು ಮೀರಿ ಸಮಾಜದ ವಿವಿಧ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸಾಮಾಜಿಕ ಹಬ್ಬವಾಗಿ ರೂಪುಗೊಂಡಿದೆ. ಅನೇಕ ಪ್ರದೇಶಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಒಟ್ಟಿಗೆ ತಾಜಿಯಾ ನಿರ್ಮಾಣ ಮಾಡುವುದು, ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವುದು ಮತ್ತು ಮಾನತಿಗಳನ್ನು ಇಡುವುದು ಭಾರತೀಯ ಸಮಾಜದ ಸಹಜ ಸಹಬಾಳ್ವೆಯ ಉದಾಹರಣೆಯಾಗಿದೆ.

ದಕ್ಷಿಣ ಭಾರತದಲ್ಲಿ ಮೊಹರಂ ಆಚರಣೆ ವ್ಯಾಪಕವಾಗಿ ಹರಡಲು ಹೈದರಾಬಾದ್ ನಿಜಾಮರ ಪಾತ್ರ ಇತಿಹಾಸಾತ್ಮಕವಾಗಿ ಮಹತ್ವದ್ದಾಗಿದೆ. ಮೀರ್ ಉಸ್ಮಾನ್ ಅಲಿ ಖಾನ್ ಸೇರಿ ನಿಜಾಮರ ಆಡಳಿತದಲ್ಲಿ ಆಶೂರ್ ಖಾನಾಗಳು ನಿರ್ಮಾಣಗೊಂಡವು, ಮೊಹರಂ ಮೆರವಣಿಗೆಗಳಿಗೆ ಆಡಳಿತಾತ್ಮಕ ಬೆಂಬಲ ದೊರೆಯಿತು ಮತ್ತು ಎಲ್ಲಾ ಜಾತಿ ಧರ್ಮದ ಜನರು ಭಾಗವಹಿಸುವ ವಾತಾವರಣ ನಿರ್ಮಾಣವಾಯಿತು. ಹೈದರಾಬಾದ್ ನಗರದಲ್ಲಿ ನಡೆಯುವ “ಬಿಬಿ ಕಾ ಆಲಂ” ಮೆರವಣಿಗೆ ಈ ಪರಂಪರೆಯ ಐತಿಹಾಸಿಕ ಸಂಕೇತವಾಗಿ ಇಂದಿಗೂ ಪ್ರಸಿದ್ಧವಾಗಿದೆ. ಈ ಪರಂಪರೆ ದಕ್ಷಿಣ ಭಾರತದ ವಿವಿಧ ಪ್ರದೇಶಗಳಿಗೆ ಹರಡಿಕೊಂಡು ಮೊಹರಂ ಅನ್ನು ಜನಸಾಮಾನ್ಯರ ಹಬ್ಬವನ್ನಾಗಿ ರೂಪಿಸಿತು.

ಕರ್ನಾಟಕದಲ್ಲಿ ಮೊಹರಂ ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಸೇರಿ ಅನೇಕ ಪ್ರದೇಶಗಳಲ್ಲಿ ಮೊಹರಂ ಹಬ್ಬವನ್ನು “ದೊಡ್ಡ ಹಬ್ಬ” ಎಂದು ಕರೆಯಲಾಗುತ್ತದೆ. ಇಲ್ಲಿ ಈ ಹಬ್ಬ ಧಾರ್ಮಿಕ ಆಚರಣೆ ಮೀರಿ ಗ್ರಾಮ ಸಮುದಾಯದ ಒಟ್ಟುಗೂಡುವಿಕೆ ಉತ್ಸವವಾಗಿ ಕಾಣಿಸುತ್ತದೆ. ಮೆರವಣಿಗೆಗಳ ಭವ್ಯತೆ, ದಫ್ ಮತ್ತು ಜನಪದ ವಾದ್ಯಗಳ ಸಂಗೀತ, ನೃತ್ಯಗಳು, ಸ್ಥಳೀಯ ಆಚರಣೆ ಮತ್ತು ಎಲ್ಲಾ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆ ಮೊಹರಂ ಅನ್ನು ಕರ್ನಾಟಕದ ಜನಪದ ಸಂಸ್ಕೃತಿ ಭಾಗವನ್ನಾಗಿ ರೂಪಿಸಿದೆ.

ಕರ್ನಾಟಕದಲ್ಲಿ ಮೊಹರಂ ಜನಪ್ರಿಯವಾಗಲು ಸೂಫಿ ಪರಂಪರೆಯ ಪ್ರಭಾವ ಅತ್ಯಂತ ಮಹತ್ವದ್ದಾಗಿದೆ. ಸೂಫಿ ಸಂತರು ಧರ್ಮಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಮಾನವೀಯತೆ, ಪ್ರೀತಿ ಮತ್ತು ಸಹೋದರತ್ವದ ಸಂದೇಶ ಹರಡಿದರು. ಖ್ವಾಜಾ ಮೊಯಿನುದ್ದೀನ್ ಚಿಷ್ಟಿ, ಹಜ್ರತ್ ನಿಜಾಮುದ್ದೀನ್ ಅವ್ಲಿಯಾ ಹಾಗೂ ಬಂದೆ ನವಾಜ್ ಅವರಂತಹ ಸೂಫಿ ಸಂತರು ಸಮಾಜದಲ್ಲಿ ಧರ್ಮಸೌಹಾರ್ದತೆ ಬಲಪಡಿಸಿದರು. ಅವರ ದರ್ಗಾಗಳು ಎಲ್ಲಾ ಧರ್ಮದ ಜನರಿಗೆ ಮುಕ್ತವಾಗಿದ್ದವು. ಈ ಸಂಸ್ಕೃತಿ ಮೊಹರಂ ಆಚರಣೆಯಲ್ಲೂ ಪ್ರತಿಫಲಿಸಿ ಜನಪದ ಸಂಪ್ರದಾಯಗಳೊಂದಿಗೆ ಬೆರೆತು ವ್ಯಾಪಕ ಸ್ವೀಕಾರ ಪಡೆಯಿತು. ಇತಿಹಾಸದ ದೃಷ್ಟಿಯಿಂದಲೂ ಕರ್ನಾಟಕದಲ್ಲಿ ಮೊಹರಂ ಆಚರಣೆಗೆ ಸಹಿಷ್ಣುತೆಯ ವಾತಾವರಣವಿತ್ತು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವಿವಿಧ ಧರ್ಮಗಳಿಗೆ ಅವಕಾಶ ನೀಡಲಾಗಿದ್ದು, ನಂತರದ ಮರಾಠ ಆಡಳಿತ ಮತ್ತು ಸ್ಥಳೀಯ ಪಾಳೇಗಾರರ ಕಾಲದಲ್ಲಿಯೂ ಧಾರ್ಮಿಕ ಆಚರಣೆಗಳು ನಿರ್ಬಂಧವಿಲ್ಲದೆ ಮುಂದುವರಿದವು. ಸ್ಥಳೀಯ ನಾಯಕರು ಮತ್ತು ಗ್ರಾಮ ಸಮುದಾಯಗಳು ಮೊಹರಂ ಆಚರಣೆಗೆ ಸಹಕಾರ ನೀಡುತ್ತಿದ್ದವು. ಇದು ಕರ್ನಾಟಕದ ಬಹುಸಾಂಸ್ಕೃತಿಕ ಪರಂಪರೆಯ ಬಲವನ್ನು ತೋರಿಸುತ್ತದೆ.

ಮೊಹರಂ ಸಂದರ್ಭದಲ್ಲಿ ಕಂಡುಬರುವ ಅತ್ಯಂತ ಮಹತ್ವದ ಅಂಶವೆಂದರೆ ಕೋಮುಸೌಹಾರ್ದತೆ. ಅನೇಕ ಗ್ರಾಮಗಳಲ್ಲಿ ಹಿಂದೂ ಕುಟುಂಬಗಳೇ ತಾಜಿಯಾ ಕಟ್ಟುವ ಮಾನತಿ ಇಡುವುದು, ವಿವಿಧ ಸಮುದಾಯದ ಯುವಕರು ಮೆರವಣಿಗೆಗಳನ್ನು ಸಂಯುಕ್ತವಾಗಿ ಆಯೋಜಿಸುವುದು, ಸಾರ್ವಜನಿಕ ಅನ್ನಸಂತರ್ಪಣೆಗಳು ಮತ್ತು ಸಮುದಾಯ ಸೇವೆಗಳು ನಡೆಯುವುದು ಸಮಾಜದ ಪರಸ್ಪರ ನಂಬಿಕೆ ಬಲಪಡಿಸುತ್ತವೆ. ಧರ್ಮದ ಗಡಿ ರೇಖೆಗಳು ಇಲ್ಲಿ ಮಸುಕಾಗುತ್ತವೆ ಮಾನವೀಯತೆ ಮುಖ್ಯವಾಗುತ್ತದೆ.

ಇಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ವಿಭಜನೆಯ ರಾಜಕೀಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಮೊಹರಂ ನಂತಹ ಹಬ್ಬಗಳು ಭಾರತೀಯ ಸಮಾಜದ ಮೂಲ ಮೌಲ್ಯಗಳನ್ನು ನೆನಪಿಸುತ್ತವೆ. ಇಮಾಮ್ ಹುಸೈನ್ ಅವರ ತ್ಯಾಗವು ಅನ್ಯಾಯದ ವಿರುದ್ಧ ನಿಲ್ಲುವ ಧೈರ್ಯವನ್ನು ಮಾತ್ರವಲ್ಲ, ನ್ಯಾಯ ಮತ್ತು ಮಾನವೀಯತೆಯ ಪರ ಸಮಾಜ ಒಟ್ಟಾಗಿ ನಿಲ್ಲಬೇಕೆಂಬ ಸಂದೇಶವನ್ನೂ ನೀಡುತ್ತದೆ. ಈ ಸಂದೇಶ ಧರ್ಮವನ್ನೂ ಮೀರಿ ಮಾನವಕುಲದ ಸಾಮಾನ್ಯ ಮೌಲ್ಯವಾಗಿ ಪರಿಣಮಿಸಿದೆ.

ಹೀಗಾಗಿ ಕರ್ನಾಟಕದಲ್ಲಿ ಮೊಹರಂ ಕೇವಲ ಇಸ್ಲಾಮಿನ ಧಾರ್ಮಿಕ ಆಚರಣೆ ಮಾತ್ರವಲ್ಲ ಅದು ಜನಪದ ಸಂಸ್ಕೃತಿ, ಸಾಮಾಜಿಕ ಏಕತೆ ಮತ್ತು ಕೋಮುಸೌಹಾರ್ದತೆಯ ಪ್ರತಿಬಿಂಬವಾಗಿದೆ. “ದೊಡ್ಡ ಹಬ್ಬ” ಎಂಬ ಹೆಸರಿನಿಂದ ಜನಮನದಲ್ಲಿ ಸ್ಥಾನ ಪಡೆದಿರುವ ಈ ಆಚರಣೆ, ವಿಭಿನ್ನ ಸಮುದಾಯಗಳು ಸಹಬಾಳ್ವೆಯಿಂದ ಬದುಕುವ ಭಾರತದ ಸಂವಿಧಾನಾತ್ಮಕ ಆತ್ಮವನ್ನು ಪ್ರತಿನಿಧಿಸುತ್ತದೆ. ಭಾರತವು ವಿವಿಧ ಧರ್ಮಗಳು, ಭಾಷೆಗಳು ಮತ್ತು ಸಂಸ್ಕೃತಿಗಳ ಸಮಾಗಮವಾಗಿರುವ ದೇಶವಾಗಿದೆ. ಇಲ್ಲಿ ಅನೇಕ ಧಾರ್ಮಿಕ ಹಬ್ಬಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಸಮಾಜದ ವಿವಿಧ ವರ್ಗಗಳ ನಡುವೆ ಸೌಹಾರ್ದ ಮತ್ತು ಸಹಬಾಳ್ವೆಯ ಸಂಕೇತವಾಗಿ ರೂಪುಗೊಂಡಿವೆ. ಅಂತಹ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ ಮೊಹರಮ್ ಹಬ್ಬ.

ಮೊಹರಂ ಇಸ್ಲಾಮಿನ ಧಾರ್ಮಿಕ ಪರಂಪರೆಯಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿದೆ ಆದರೆ ಭಾರತದಲ್ಲಿ ಈ ಆಚರಣೆ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿಯೇ ಉಳಿಯದೆ ಭಾರತೀಯ ದೇಸಿ ತಳಸ್ತರ ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಬ್ಬವಾಗಿ ರೂಪುಗೊಂಡಿದೆ. ಭಾರತದ ಬಹುತೇಕ ಭಾಗಗಳಲ್ಲಿ ಮೊಹರಂ ಜನಪದ ಸಂಸ್ಕೃತಿಯೊಂದಿಗೆ ಬೆರೆತು ವಿಶಿಷ್ಟ ರೂಪ ಪಡೆದಿದೆ. ಭಾರತೀಯ ಸಮಾಜದಲ್ಲಿ ಸೂಫಿ ಪರಂಪರೆ, ಸ್ಥಳೀಯ ಸಂಸ್ಕೃತಿ ಮತ್ತು ರಾಜಕೀಯ ಇತಿಹಾಸದ ಪರಿಣಾಮದಿಂದ ಮೊಹರಂ ಆಚರಣೆ ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಂಕೇತವಾಗಿ ವಿಶೇಷವಾಗಿ ದಲಿತ, ಹಿಂದುಳಿದ, ಮುಸ್ಲಿಮರ ಐಕ್ಯತೆಯಾಗಿ ಕಾಣಿಸಿಕೊಂಡಿದೆ. ಇದು ನೈಜ ಅಹಿಂದ ಹಬ್ಬವೆಂದರೂ ತಪ್ಪಾಗಲಾರದು.

ಮೊಹರಂ ಹಬ್ಬದ ಪ್ರಾರಂಭವು ಇಸ್ಲಾಮಿನ ಕ್ಯಾಲೆಂಡರ್‌ನ ಮೊದಲ ತಿಂಗಳು ಪ್ರಾರಂಭವಾಗುತ್ತದೆ, ಈ ದಿನವನ್ನು ಆಶೂರಾ ಎಂದು ಕರೆಯಲಾಗುತ್ತದೆ. ಈ ದಿನವು ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೈನ್ ಅವರು ಶಹಾದತ್ ಆದ ದಿನವಾಗಿದೆ. ಕ್ರಿ.ಶ. 680ರಲ್ಲಿ ನಡೆದ ಕರಬಲಾ ಯುದ್ಧದಲ್ಲಿ ಅವರು ಅನ್ಯಾಯದ ವಿರುದ್ಧ ಹೋರಾಡಿ ಶಹೀದರಾದರು. ಈ ಯುದ್ಧದಲ್ಲಿ ಅವರು ಯಜೀದ್ ಇಬ್ನ್ ಮುಆವಿಯಾ ಅವರ ಆಡಳಿತವನ್ನು ಒಪ್ಪಲು ನಿರಾಕರಿಸಿದರು. ಕರಬಲಾ ಘಟನೆ ಇಸ್ಲಾಮಿನ ಇತಿಹಾಸದಲ್ಲಿ ನ್ಯಾಯ, ಧರ್ಮ ಮತ್ತು ಮಾನವೀಯ ಮೌಲ್ಯಗಳ ಸಂಕೇತವಾಗಿದೆ. ಆದ್ದರಿಂದ ಮೊಹರಂ ಆಚರಣೆ ದುಃಖ ಮತ್ತು ಸ್ಮರಣೆಯ ರೂಪದಲ್ಲಿ ಆಚರಿಸಲಾಗುತ್ತದೆ.

ಇಸ್ಲಾಮಿನ ಎರಡು ಪ್ರಮುಖ ಪಂಥಗಳು ಶಿಯಾ ಮತ್ತು ಸುನ್ನಿ. ಈ ಎರಡೂ ಸಮುದಾಯಗಳು ಮೊಹರಂ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತವೆ. ಶಿಯಾ ಮುಸ್ಲಿಮರಲ್ಲಿ ಮೊಹರಂ ಅತ್ಯಂತ ದುಃಖದ ತಿಂಗಳು. ಈ ಸಂದರ್ಭದಲ್ಲಿ ಮಜ್ಲಿಸ್(ಧಾರ್ಮಿಕ ಸಭೆಗಳು) ಮಾತಮ್ (ದುಃಖ ವ್ಯಕ್ತಪಡಿಸುವ ಆಚರಣೆ) ತಾಜಿಯಾ ಮೆರವಣಿಗೆ ನಡೆಯುತ್ತವೆ. ಇಮಾಮ್ ಹುಸೈನ್ ಅವರ ತ್ಯಾಗವನ್ನು ಸ್ಮರಿಸಿ ಮರ್ಸಿಯಾ ಮತ್ತು ನೋಹಾ ಪಠಿಸಲಾಗುತ್ತದೆ. ಸುನ್ನಿ ಮುಸ್ಲಿಮರು ಆಶೂರಾ ದಿನ ಉಪವಾಸ ಆಚರಿಸುತ್ತಾರೆ. ಇದು ಪ್ರವಾದಿ ಮುಹಮ್ಮದ್ ಅವರ ಸಂಪ್ರದಾಯದಂತೆ ನಡೆಯುತ್ತದೆ. ಕೆಲವು ಪ್ರದೇಶಗಳಲ್ಲಿ ಸುನ್ನಿಗಳು ಕೂಡ ತಾಜಿಯಾ ಮೆರವಣಿಗೆಗಳಲ್ಲಿ ಭಾಗವಹಿಸುತ್ತಾರೆ.

ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಉಳಿಸಬೇಕಾದ ಇಂದಿನ ಸಂದರ್ಭದಲ್ಲಿ ಮೊಹರಂ ನೀಡುವ ಸೌಹಾರ್ದ ಸಂದೇಶವು ಇನ್ನಷ್ಟು ಪ್ರಸ್ತುತವಾಗಿಸಿದೆ. ಧರ್ಮಗಳ ನಡುವಿನ ಸೇತುವೆಯಾಗಿ, ಮಾನವೀಯ ಮೌಲ್ಯಗಳ ಜ್ಯೋತಿಯಾಗಿ ಮತ್ತು ನ್ಯಾಯದ ಸಂಕೇತವಾಗಿ ಮೊಹರಂ ಕರ್ನಾಟಕದ ಸಾಂಸ್ಕೃತಿಕ ಜೀವನದಲ್ಲಿ ಮುಂದುವರಿಯಲಿ ಎಂಬುದು ಕಾಲದ ಅಗತ್ಯವಾಗಿದೆ.


Share It

You cannot copy content of this page