ಬೆಂಗಳೂರು: ನಗರದ ಜನನಿಬಿಡ ಪ್ರದೇಶವಾದ ಕೆ.ಆರ್.ಸರ್ಕಲ್ನಲ್ಲಿ ಸಿಗ್ನಲ್ನಲ್ಲಿ ನಿಂತಿದ್ದ ವಾಯುವಜ್ರ ಬಸ್ಗೆ ಮತ್ತೊಂದು ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಮಹಿಳೆಯೊಬ್ಬರು ಹಿಂಬದಿ ಬಸ್ನ ಡ್ರೈವರ್ ಸೀಟ್ ಕೆಳಗೆ ಸಿಲುಕಿದ್ದು, ಆಕೆಯನ್ನು ರಕ್ಷಣೆ ಮಾಡಲು ಗಂಟೆಗಟ್ಟಲೇ ಪ್ರಯಾಸ ಪಟ್ಟ ಘಟನೆ ನಡೆದಿದೆ. ಅನಂತರ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು, ಆಕೆಯನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಹಿಂಬದಿಯ ಬಸ್ ಚಾಲಕನಿಗೆ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸಾರ್ವಜನಿಕರೇ ರಕ್ಷಣೆ ಮಾಡಿ, ಮಾರ್ಥಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆತನ ಸ್ಥಿತಿ ಗಂಭಿರವಾಗಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಅನೇಕ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೆ.ಆರ್.ಸರ್ಕಲ್ ಸಿಗ್ನಲ್ನಲ್ಲಿ ವಾಯುವಜ್ರ ಬಸ್ ನಿಲುಗಡೆ ಮಾಡಿತು. ಆದರೆ, ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಬಸ್ ನ ಚಾಲಕ ನಿಯಂತ್ರಣ ಕಳೆದುಕೊಂಡು ಮುಂದಿದ್ದ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ಗುದ್ದಿದ್ದ ರಭಸಕ್ಕೆ ಮುಂದಿನ ಬಸ್ನ ಎಂಜಿನ್ ಸಂಪೂರ್ಣ ಜಖಂಗೊಂಡ ಪರಿಣಾಮ ಬಸ್ ಸ್ಟಾರ್ಟ್ ಆಗಲಿಲ್ಲ ಎನ್ನಲಾಗುತ್ತಿದೆ.
ಕೆಲ ಪ್ರಯಾಣಿಕರು ಗಾಯಗೊಂಡರೆ, ಮಹಿಳೆಯೊಬ್ಬರು ಡ್ರೈವರ್ ಸೀಟ್ನ ಕೆಳಗೆ ಸಿಲುಕಿದ್ದರು. ಆಕೆಯನ್ನು ರಕ್ಷಿಸುವ ಕಾರ್ಯ ಸುಮಾರು ಒಂದೂವರೆ ತಾಸಿಗೂ ಅಧಿಕ ಕಾಲ ನಡೆದಿದ್ದು, ಈ ವೇಳೆ ಶೇಷಾದ್ರಿ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಗಿತ್ತು.

