ಬೆಳಗಾವಿ: ಸಿದ್ದರಾಮಯ್ಯನವರು ಪಕ್ಷ ಸಂಘಟನೆಗೆ ಬರುತ್ತಾರೆ. ನಾವು ಮೊದಲಿನಿಂದಲೂ ಅದನ್ನೇ ಹೇಳುತ್ತಿದ್ದೇವೆ. ಎಲ್ಲರೂ ಅದನ್ನೇ ಹೇಳುತ್ತಾರೆ. 2028ರಲ್ಲಿ ಅವರ ನೇತೃತ್ವದಲ್ಲೇ ನಾವು ಚುನಾವಣೆಗೆ ಹೋಗುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲಿಯೇ ನಾವು ಮುಂದಿನ ಚುನಾವಣೆ ಎದುರಿಸಲಿದ್ದೇವೆ. ಅಹಿಂದ ನಾಯಕತ್ವ ಯಾರು ವಹಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಕಾಲ ಕಾಲಕ್ಕೆ ಅದು ಗೊತ್ತಾಗುತ್ತದೆ. ಅದನ್ನು ಅಷ್ಟು ಹೈಲೆಟ್ ಮಾಡುವ ಅವಶ್ಯಕತೆ ಇಲ್ಲ ಎಂದರು.
ಬೆಳಗಾವಿ ದೊಡ್ಡ ಜಿಲ್ಲೆ. ಹೀಗಾಗಿ, ಮೂರು ಸ್ಥಾನ ಕೊಡಬೇಕು. ಕೊಟ್ಟರೆ ಒಳ್ಳೆಯದಾಗುತ್ತದೆ. ಯಾರಿಗೆ ಕೊಡಬೇಕು ಅಂತಾ ನಾನೇನು ಶಿಫಾರಸು ಮಾಡಿಲ್ಲ. ಹೈಕಮಾಂಡ್ ತೀರ್ಮಾನಿಸುತ್ತದೆ. ಜಿಲ್ಲೆಯವರು ನಮಗೆ ಯಾರು ಸಂಪರ್ಕ ಮಾಡಿಲ್ಲ. ಮುಂದಿನ ಚುನಾವಣೆಗೆ ಯಾರು ಅನುಕೂಲ ಆಗ್ತಾರೋ ಆ ದೃಷ್ಟಿ ಇಟ್ಟುಕೊಂಡು ಮಾಡುತ್ತಾರೆ ಎಂದು ಹೇಳಿದರು. ವಿಸ್ತರಣೆ ಯಾವಾಗಲಾದರೂ ಆಗಲಿ, ಬೇಗ ಆಗಲಿ ಅನ್ನೋದು ಇದೆ ಎಂದಿರುವ ಜಾರಕಿಹೊಳಿ, ಬಿ.ಕೆ.ಹರಿಪ್ರಸಾದ್ ಗೆ ಸಚಿವ ಸ್ಥಾನ ನೀಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.

