ಬೆಂಗಳೂರು: ಕಳಪೆ ಗುಣಮಟ್ಟದ ನೀರಿನ ಸಂಪ್ ನಿರ್ಮಾಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮನೆ ಮಾಲೀಕ ಪ್ಲಂಬರ್‌ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ(ಜು.17) ನಡೆದಿದೆ.
ಆಂಧ್ರಪ್ರದೇಶ ಮೂಲದ ಕಿತ್ತನಹಳ್ಳಿಯ ರವಿ (38) ಕೊಲೆಯಾದ ಪ್ಲಂಬರ್. ಆರೋಪಿಗಳಾದ ದೇವರಾಜ್ ಮತ್ತು ಆತನ ಮಗ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರವಿ ಗಾರೆ ಕೆಲಸ ಹಾಗೂ ಪ್ಲಂಬರ್ ಕೆಲಸ ಮಾಡುತ್ತಿದ್ದು, ತನ್ನ ಸಂಬಂಧಿಕರಾದ ಮಂಜುನಾಥ್ ಎಂಬುವರ ಮನೆಯಲ್ಲಿ ವಾಸಿಸುತ್ತಿದ್ದರು. ಕಡಬಗೆರೆಯ ಮಹಾಲಕ್ಷ್ಮೀ ಬಡಾವಣೆಯ ನಿವಾಸಿ ದೇವರಾಜ್ ಎಂಬುವರು ತನಗೆ ಸೇರಿದ ನಿವೇಶನವೊಂದರ ಸೈಟ್‌ನಲ್ಲಿ ಸಣ್ಣದಾಗಿ ಮನೆ ಕಟ್ಟಿಕೊಡುವಂತೆ ಹಾಗೂ ನೀರಿನ ಸಂಪ್ ನಿರ್ಮಿಸಿ ಮುಚ್ಚಳ ಹಾಕುವಂತೆ ಪರಿಚಿತ ಗಾರೆ ಮೇಸ್ತ್ರಿ ಮಂಜುನಾಥನಿಗೆ ತಿಳಿಸಿದ್ದರು. ಮಂಜುನಾಥ ಸಣ್ಣ ಮನೆ ನಿರ್ಮಿಸಿ, ಸಂಪ್ ಟ್ಯಾಂಕ್ ಕಟ್ಟಿ ಮುಚ್ಚಳ ಹಾಕಿದ್ದರು.
ಆರೋಪಿ ದೇವರಾಜ್, ನಿರ್ಮಾಣ ಹಂತದ ತಮ್ಮ ಮನೆ ಬಳಿ ಹೋದಾಗ ನೀರಿನ ಸಂಪ್ ಹಾಳಾಗಿರುವ ಮುಚ್ಚಳ ಅಳವಡಿಸಿರುವುದನ್ನು ಕಂಡು ಆಕ್ರೋಶಗೊಂಡು ಮಂಜುನಾಥ್‌ಗೆ ಕರೆ ಮಾಡಿ ಬೆದರಿಸಿದ್ದರು. ಇದರಿಂದ ನೊಂದ ಮಂಜುನಾಥ್ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಸುಮ್ಮನಾಗಿದ್ದರು. ಆ ವೇಳೆ ದೇವರಾಜ್, ತನ್ನ ಮಕ್ಕಳು ಸೇರಿದಂತೆ ನಾಲ್ವರ ಜೊತೆಗೆ ಮಂಜುನಾಥ್ ಮನೆ ಬಳಿ ಹೋಗಿ ಜಗಳ ಮಾಡಿದ್ದರು.
ಜಗಳ ತಾರಕಕ್ಕೇರಿದಾಗ, ಮನೆಯೊಳಗಿದ್ದ ರವಿ ಹೊರಗೆ ಬಂದು ಜಗಳ ಬಿಡಿಸಲು ಮುಂದಾಗಿದ್ದರು. ಅಷ್ಟರಲ್ಲಿ ದೇವರಾಜ್ ಹಾಗೂ ಇತರರು ರವಿ ಮೇಲೆ ಹಲ್ಲೆ ನಡೆಸಿ ಆತನ ಮರ್ಮಾಂಗಕ್ಕೆ ಒದ್ದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ. ಹಲ್ಲೆಯಿಂದ ಮಂಜುನಾಥ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾದನಾಯಕನಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದರು.

