ರಾಜಕೀಯ ಸುದ್ದಿ

ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯ ಸ್ತುತ್ಯಾರ್ಹ : ಪ್ರೊ. ಹೊಸಕೋಟಿ

Share It

ಬೆಳಗಾವಿ : ” ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸುವ ಕಾರ್ಯ ನಡೆಸಿರುವ ರಂಗಸಂಪದದ ಸಮಾಸ ವೇದಿಕೆಯ ಕಾರ್ಯ ಸ್ತುತ್ಯಾರ್ಹವಾಗಿದೆ ” ಎಂದು ಪ್ರೊ. ಶಶಿಧರ ಹೊಸಕೋಟಿ ಹೇಳಿದರು.

ಸಮಾನ ಮನಸ್ಕರ ಮಾಸಿಕ ಸಮ್ಮಿಲನದ ಎರಡನೆಯ ವರ್ಷದ ಮೊದಲ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳು ಅಕಾಡೆಮಿಕ್ ವಲಯಕ್ಕೆ ಸೀಮಿತವಾಗದೆ ಶಿಕ್ಷಣೇತರ ಕ್ಷೇತ್ರಗಳಿಗೂ ವ್ಯಾಪಿಸಿಕೊಳ್ಳುವಂತಾಗಬೇಕು. ಅಂತಹ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತ ಬಂದಿರುವ ಸಮಾಸದ ಸಂಯೋಜಕರು ಅಭಿನಂದನಾರ್ಹರೆಂದರು.

ಸಮಾಸದ 13 ನೆಯ ತಿಂಗಳ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಪ್ರೊ. ಶಂಕರಮೂರ್ತಿಯವರು ಅನಕೃ ಅವರ ನಟಸಾರ್ವಭೌಮ ಕಾದಂಬರಿಯ ಕುರಿತು ಮಾತನಾಡಿ ರಂಗಭೂಮಿ ಮತ್ತು ಕಲಾವಿದರಿಗೆ ಸಂಬಂಧಿಸಿದಂತೆ ಇಷ್ಟೊಂದು ವಿಚಾರಗಳನ್ನು ಒದಗಿಸುವ ಬೇರೆ ಕೃತಿ ಕನ್ನಡದಲ್ಲಿಲ್ಲ. ಇಲ್ಲಿಯ ಕಥೆ ಮತ್ತು ಪಾತ್ರಗಳ ಚಿತ್ರಣ ಅದ್ಭುತವಾಗಿದ್ದು ಕಾದಂಬರಿ ಸಾರ್ವಭೌಮ ಅ. ನ. ಕೃಷ್ಣರಾಯರ ಈ ನಟಸಾರ್ವಭೌಮ ಕನ್ನಡದ ಒಂದು ಮೇರುಕೃತಿ ಎಂದರು.

ಆರ್. ಟಿ. ಶರಣಬಸವ ಅವರು ಓರ್ವ ಓದುಗರಾಗಿ ಅನಕೃ ಕುರಿತು ಮಾತನಾಡಿದರು. ಪೂಜಾ ಕಾರಜೋಳ ಸ್ವಾಗತಿಸಿದರು. ಸಮಾಸ ವೇದಿಕೆಯ ಮೊದಲ ವರ್ಷದ 12 ತಿಂಗಳುಗಳಲ್ಲಿ ನಡೆದ ಕಾರ್ಯಕ್ರಮಗಳ ಸಂಕ್ಷಿಪ್ತ ನೋಟವನ್ನೊಳಗೊಂಡ ವಾರ್ಷಿಕ ವರದಿ ಪುಸ್ತಿಕೆಯನ್ನು ಬಿಡುಗಡೆ ಮಾಡಲಾಯಿತು. ಅದರ ಸಂಪಾದಕ ಎಲ್. ಎಸ್. ಶಾಸ್ರ್ರಿ ಮತ್ತು, ಶಿರೀಷ ಜೋಶಿ, ಡಾ. ರಾಮಕೃಷ್ಣ ಮರಾಠೆ, ಮಮತಾ ಶಂಕರ , ಡಾ. ಎಚ್. ಬಿ.ಕೋಲಕಾರ ಅವರು ಸಮಾಸದ ನಡೆದುಬಂದ ದಾರಿಯನ್ನು ಸ್ಮರಿಸಿದರು. ಡಾ. ಅರವಿಂದ ಕುಲಕರ್ಣಿ ನಿರೂಪಿಸಿದರು. ಪ್ರಸಾದ ಕಾರಜೋಳ ವಂದಿಸಿದರು.

ಧಾರವಾಡ ರಂಗಾಯಣದ ಮುಖ್ಯಸ್ಥ ಝಾಕಿರ್ ನದಾಫ್, ಪದ್ಮಾ ಕುಲಕರ್ಣಿ ಆರ್. ಬಿ. ಕಟ್ಟಿ, ಗುರುನಾಥ ಕುಲಕರ್ಣಿ, ಶ್ರೀ ಮುದೇನೂರ, ಚಾಟೆ, ಜ್ಯೋತಿ ಬದಾಮಿ, ವೆಂ. ಲ. ಜೋಶಿ, ಆನಂದ ಪುರಾಣಿಕ, ಶಶಿಧರ ಚರಂತಿಮಠ, ಅಶೋಕ ಬೈಲವಾಡ, ಶರಣಯ್ಯ ಮಠಪತಿ , ಚಿದಂಬರ ಮುನವಳ್ಳಿ, ಮದನ ಕಣಬೂರ, ಬಿ. ಕೆ. ಕುಲಕರ್ಣಿ ಮೊದಲಾದವರನ್ನೊಳಗೊಂಡಂತೆ 55 ಜನ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.


Share It

You cannot copy content of this page