ಬೆಂಗಳೂರು: ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ, ಇಂದು ಮಧ್ಯಾಹ್ನ 2.30ಕ್ಕೆ ಇನ್ನಷ್ಟು ಸಚಿವರು ಲೋಕಸಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಬೇಕಾಗಿತ್ತು. ಆದರೆ, ಅದು ತಾತ್ಕಾಲಿಕವಾಗಿ ಬ್ರೇಕ್ ಆಗಿದೆ.
ಲೋಕಸಭವನಕ್ಕೆ ಅಧಿಕೃತ ಮಾಹಿತಿ ನೀಡಿದ್ದ ಸರಕಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿತ್ತು. ಅದರಂತೆ, ಲೋಕೋಪಯೋಗಿ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು.
ಆದರೆ, ಸರಕಾರ ನಿರ್ಧರಿಸಿದ್ದ ಸಚಿವರ ಪಟ್ಟಿಗೆ ಹೈಕಮಾಂಡ್ನಿಂದ ಅಂತಿಮ ಅಸ್ತು ಸಿಕ್ಕದ ಹಿನ್ನೆಲೆಯಲ್ಲಿ ಸಚಿವರ ಪ್ರಮಾಣ ವಚನ ಸ್ವೀಕಾರ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.
ದೆಹಲಿಯ ಮೂಲಗಳ ಪ್ರಕಾರ ಎರಡು ದಿನದಲ್ಲಿ ಮತ್ತೇ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಗೆ ಅಂತಿಮ ಮುದ್ರೆ ಬೀಳಲಿದ್ದು, ಶೀಘ್ರವೇ ಇನ್ನುಳಿದ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಥ್ ನೀಡಿದ್ದು, ಪ್ರಧಾನಿ ಮೋದಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಸಂಸತ್ನಲ್ಲಿ ಬಿಜೆಪಿ ಸರಕಾರದ ವಿರುದ್ಧ ಹೋರಾಟ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಚಿವರ ಪಟ್ಟಿಗೆ ಅಂತಿಮ ಅನುಮತಿ ನೀಡಿಲ್ಲ ಎನ್ನಲಾಗಿದೆ. ಸಿದ್ದರಾಮಯ್ಯ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ಅವರು ಸಿದ್ಧಪಡಿಸಿರುವ ಪಟ್ಟಿಯನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ತೋರಿಸಿ, ಹೈಕಮಾಂಡ್ ಅಪ್ಪಣೆಗಾಗಿ ನೀಡಿದ್ದಾರೆ ಎನ್ನಲಾಗಿದೆ.

