ರಾಜಕೀಯ ಸುದ್ದಿ

ಹಸಿದವರಿಗೆ ಬಿರಿಯಾನಿ ಹಂಚಿದ್ದೇ ಜೆಡಿಎಸ್ ಎಂಟ್ರಿಗೆ ಕಾರಣವಾಯ್ತು: ಬಿಗ್ ಬಾಸ್ ಬೆಡಗಿ ಜಾಹ್ನವಿ ಸ್ಪಷ್ಟನೆ

Share It

ಬಿಗ್ ಬಾಸ್ ಕನ್ನಡ ಸೀಸನ್ 12 ರ ಮೂಲಕ ಮನೆಮಾತಾಗಿ, ಇದೀಗ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿರುವ ನಿರೂಪಕಿ ಹಾಗೂ ನಟಿ ಜಾಹ್ನವಿ ಅವರು, ತಮ್ಮ ರಾಜಕೀಯ ಪ್ರವೇಶದ ಹಿಂದಿನ ಆಸಕ್ತಿದಾಯಕ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಸಮಾಜಸೇವೆಯೇ ತಮ್ಮನ್ನು ರಾಜಕೀಯದ ಕಡೆಗೆ ಕರೆತಂದಿದ್ದು, ಜನರಿಗೆ ಆಹಾರ ಹಂಚುವ ವೀಡಿಯೋಗಳು ಜೆಡಿಎಸ್ ಪಕ್ಷದ ಗಮನ ಸೆಳೆದಿದ್ದವು ಎಂದು ಅವರು ತಿಳಿಸಿದ್ದಾರೆ.

ಸಮಾಜಸೇವೆಯೇ ರಾಜಕೀಯಕ್ಕೆ ಸ್ಪೂರ್ತಿ

ತಮ್ಮ ರಾಜಕೀಯ ಪ್ರಯಾಣದ ಕುರಿತು ಮಾತನಾಡಿದ ಜಾಹ್ನವಿ, “ನನ್ನ ಗಳಿಕೆಯ ಶೇ.10 ರಷ್ಟು ಹಣವನ್ನು ಸಮಾಜಕ್ಕಾಗಿ ಮೀಸಲಿಡಬೇಕೆಂದು ನಿರ್ಧರಿಸಿದ್ದೆ. ನಾನು ಮಾಡುತ್ತಿದ್ದ ಸಣ್ಣಪುಟ್ಟ ಸಹಾಯದ ವೀಡಿಯೋಗಳು ಇತರರಿಗೂ ಪ್ರೇರಣೆಯಾಗಬೇಕೆಂಬುದು ನನ್ನ ಆಶಯವಾಗಿತ್ತು. ವಿಶೇಷವಾಗಿ, ನಾವು ಹಸಿದವರಿಗೆ ಬಿರಿಯಾನಿ ಹಂಚುತ್ತಿದ್ದ ದೃಶ್ಯಗಳನ್ನು ನೋಡಿಯೇ ಜೆಡಿಎಸ್ ಪಕ್ಷದವರು ನನ್ನನ್ನು ಸಂಪರ್ಕಿಸಿದ್ದರು” ಎಂದು ಬಹಿರಂಗಪಡಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದ ಅವಧಿಯಲ್ಲಿ ತಮ್ಮ ಡ್ರೆಸ್ ಕೋಡ್ ಮತ್ತು ವರ್ತನೆಯ ಬಗ್ಗೆ ಟೀಕೆಗಳು ಎದುರಾದರೂ, ಅವುಗಳನ್ನು ಲೆಕ್ಕಿಸದೆ ತಮ್ಮ ದಾರಿಯಲ್ಲಿ ಸಾಗಿದುದಾಗಿ ಹೇಳಿದರು. “ಜನರು ಸಣ್ಣ ವಿಷಯಗಳ ಬಗ್ಗೆ ಚರ್ಚಿಸುವ ಬದಲು ಚುನಾವಣೆಯಲ್ಲಿ ಮತ ಚಲಾಯಿಸುವಂತಹ ಪ್ರಮುಖ ವಿಚಾರಗಳತ್ತ ಗಮನ ನೀಡಿದರೆ ದೇಶದ ಒಳಿತಾಗುತ್ತದೆ. ನಾನು ಆಗಲೂ ಇದನ್ನೇ ಯೋಚಿಸುತ್ತಿದ್ದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಆಫರ್ ನಿರಾಕರಿಸಿ ಜೆಡಿಎಸ್ ಆಯ್ಕೆ ಏಕೆ?

ರಾಜಕೀಯ ಪ್ರವೇಶಕ್ಕೂ ಮುನ್ನ, ತಮಗೆ ಬಿಜೆಪಿ ಪಕ್ಷದಿಂದಲೂ ಆಹ್ವಾನ ಬಂದಿತ್ತು ಎಂದು ಜಾಹ್ನವಿ ತಿಳಿಸಿದ್ದಾರೆ. ಆದರೆ ಜೆಡಿಎಸ್ ಸಿದ್ಧಾಂತ ಮತ್ತು ಜನಸೇವೆಯ ಉದ್ದೇಶವೇ ತಮ್ಮನ್ನು ಆಕರ್ಷಿಸಿತ್ತು. “ಮಣ್ಣಿನ ಪಕ್ಷವಾದ ಜೆಡಿಎಸ್ ಜನರ ಪ್ರಶ್ನೆಗಳಿಗೆ ಸ್ಪಂದಿಸುವ ಪಕ್ಷ. ಈ ಪಕ್ಷದ ಚಿಹ್ನೆಯೇ ‘ತೆನೆ ಹೊತ್ತ ಮಹಿಳೆ’ ಆಗಿರುವುದು ಮಹಿಳಾ ಸಬಲೀಕರಣದ ಸಂದೇಶವನ್ನು ನೀಡುತ್ತದೆ. ಇದು ನನಗೆ ಸ್ಫೂರ್ತಿಯಾಯಿತು” ಎಂದು ಅವರು ಕಾರಣ ನೀಡಿದ್ದಾರೆ.

ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಪಕ್ಷವು ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಸಿದ್ಧಳಿದ್ದೇನೆ. ನನ್ನ ಮುಖ್ಯ ಉದ್ದೇಶ ಜನರ ಸೇವೆಯೇ ಆಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.


Share It

You cannot copy content of this page