ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC) ನಡೆಸಿರುವ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕೋಟಿಗಟ್ಟಲೆ ರೂಪಾಯಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಒಎಂಆರ್ ಶೀಟ್ ತಿದ್ದುಪಡಿ ನಡೆದಿರುವ ಆರೋಪ ಸಂಬಂಧ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ(ಸಿಬಿಐ)ಕ್ಕೆ ಹಸ್ತಾಂತರಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಿಡರೆ ಗ್ರಾಮದ ಪಶುವೈದ್ಯ ಡಾ.ಮಂಜುನಾಥ್ ಎಂಬವರು ಅರ್ಜಿ ಸಲ್ಲಿಸಿದ್ದು, ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಲು ಕೋರಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪೀಠ ಮಧ್ಯಾಹ್ನ ಪರಿಗಣಿಸುವುದಾಗಿ ತಿಳಿಸಿದೆ.
ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ತಲಾ 80 ಲಕ್ಷ ರೂ. ಲಂಚ ಪಡೆದು ಒಟ್ಟು 100 ಕೋಟಿಗೂ ಹೆಚ್ಚು ರೂಪಾಯಿಗಳ ವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಅಭ್ಯರ್ಥಿಗಳನ್ನು ಹೊರರಾಜ್ಯದ ರೆಸಾರ್ಟ್‌ಗಳಿಗೆ ಕರೆದೊಯ್ದು ತರಬೇತಿ ನೀಡಿರುವುದು ಹಾಗೂ ಒಎಂಆರ್ ಶೀಟ್ ಅಕ್ರಮ ಎಸಗಿರುವ ಆರೋಪವಿದೆ. ಜುಲೈ 24ರಂದು ಮಧ್ಯರಾತ್ರಿ ದೂರು ದಾಖಲಾಗುವ ಮುನ್ನ ದೂರುದಾರರು ಪೊಲೀಸ್ ಠಾಣೆ ಎದುರು ದಿನವಿಡೀ ಪ್ರತಿಭಟನೆ ನಡೆಸಬೇಕಾಯಿತು.
ಕೆಪಿಎಸ್‌ಸಿ ಪ್ರಮುಖರ ಹೆಸರುಗಳನ್ನು ಕೈಬಿಡುವಂತೆ ಒತ್ತಡ ಹೇರಲಾಗಿತ್ತು. ರಾಜಕೀಯ ನಾಯಕರು ಹಾಗೂ ಕೆಪಿಎಸ್‌ಸಿ ಉನ್ನತಾಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ರಾಜ್ಯ ಪೊಲೀಸ್ ಅಥವಾ ಸಿಐಡಿ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಈ ಹಿಂದೆ ಕೆಪಿಎಸ್ಸಿ ಅಕ್ರಮಗಳ ಕುರಿತು ನಡೆದ ತನಿಖೆಗಳು ಯಾವುದೇ ತರ್ಕಬದ್ಧ ಅಂತ್ಯ ಕಾಣದೆ ಮುಚ್ಚಿಹೋಗಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಲ್ಲದೆ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ತಕ್ಷಣವೇ ಸಿಬಿಐಗೆ ವಹಿಸಬೇಕು. ಈ ನ್ಯಾಯಾಲಯವೇ ನೇರವಾಗಿ ತನಿಖೆಯ ಮೇಲುಸ್ತುವಾರಿ ವಹಿಸಬೇಕು. ಅರ್ಜಿಯ ಅಂತಿಮ ತೀರ್ಪು ಬರುವವರೆಗೆ, ಸಿಐಡಿ ಅಥವಾ ಇತರ ರಾಜ್ಯ ತನಿಖಾ ಸಂಸ್ಥೆಗಳಿಗೆ ಪ್ರಕರಣದ ದಾಖಲೆಗಳನ್ನು ವರ್ಗಾಯಿಸದೆ ಸಿಬಿಐ ವಶಕ್ಕೆ ನೀಡಲು ಮಧ್ಯಂತರ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ. ಅರ್ಜಿಯಲ್ಲಿ ಸರ್ಕಾರದ ಗೃಹ ಇಲಾಖೆ ಕಾರ್ಯದರ್ಶಿ, ಸಿಬಿಐ, ವಿಧಾನಸೌಧ ಪೊಲೀಸ್ ಠಾಣೆ ಹಾಗೂ ಸಿಐಡಿಯನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

