ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ ಪ್ರಮುಖ ಕ್ರೂಸ್ ಸಂಸ್ಥೆಗಳೊಂದಿಗೆ ಸಭೆ
- ಮುಂದಿನ ತಿಂಗಳು ಮಂಗಳೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿರುವ ಸಂಸ್ಥೆ
ಬೆಂಗಳೂರು : ರಾಜ್ಯದಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ ಪ್ರವಾಸೋದ್ಯಮ ಇಲಾಖೆ ದೇಶದ ಪ್ರಮುಖ ಕ್ರೂಸ್ ಸಂಸ್ಥೆಗಳೊಂದಿಗೆ ಸಮಾಲೋಚನೆ ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನಡೆದ ಸಭೆಯಲ್ಲಿ ಭಾರತದ ಪ್ರಮುಖ ಕ್ರೂಸ್ ಸಂಸ್ಥೆ ವಾಟರ್‌ವೇಸ್ ಲೀಜರ್ ಟೂರಿಸಂ ಲಿಮಿಟೆಡ್ ಮಂಗಳೂರಿನಿಂದ ಕ್ರೂಸ್ ಸೇವೆ ಆರಂಭಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ತಾತ್ವಿಕ ಒಪ್ಪಿಗೆ ಸೂಚಿಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ .
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿಗಳು ಮುಂಬೈನಲ್ಲಿ ಸಂಸ್ಥೆ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುರ್ಗನ್ ಬೈಲೋಮ್ ಹಾಗೂ ಪೋರ್ಟ್ ಆಪರೇಷನ್ಸ್‌ನ ಅಸೋಸಿಯೇಟ್ ಡೈರೆಕ್ಟರ್ ಭರತ್ ಆಚಾರ್ಯ ಅವರೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು. ಮಂಗಳೂರಿನಿಂದ ಕ್ರೂಸ್ ಸೇವೆ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯ, ಕಾರ್ಯಾಚರಣೆ ಅವಶ್ಯಕತೆಗಳು, ಮಾರುಕಟ್ಟೆ ಅವಕಾಶಗಳು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು.
ಕರಾವಳಿ ಪ್ರದೇಶದ ಪ್ರವಾಸೋದ್ಯಮ ಮಾರುಕಟ್ಟೆ, ಪ್ರವಾಸಿಗರ ಬೇಡಿಕೆ ಹಾಗೂ ವಾಣಿಜ್ಯ ಸಾಧ್ಯತೆಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಅಗತ್ಯವನ್ನು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು. ಅಲ್ಲದೆ, ಮಂಗಳೂರು ಕರಾವಳಿ ಪ್ರದೇಶವನ್ನು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ವಿಶೇಷ ಪ್ರಚಾರ ಕಾರ್ಯತಂತ್ರ ರೂಪಿಸುವಂತೆ ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ತಾಂತ್ರಿಕ ತಂಡವು ಮುಂದಿನ ತಿಂಗಳು ಮಂಗಳೂರಿಗೆ ಭೇಟಿ ನೀಡಿ, ಬಂದರು ಮೂಲಸೌಕರ್ಯ, ಪ್ರವಾಸೋದ್ಯಮ ಸಾಮರ್ಥ್ಯ, ಕಾರ್ಯಾಚರಣೆಯ ಸಾಧ್ಯತೆ ಹಾಗೂ ಅಗತ್ಯ ಸೌಲಭ್ಯ ಕುರಿತು ಸ್ಥಳ ಪರಿಶೀಲನೆ (ರೆಕ್ಕಿ) ನಡೆಸಲಿದೆ.
ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ತಂಡ ಇತ್ತೀಚೆಗೆ ಮುಂಬೈ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ಗೆ ಭೇಟಿ ನೀಡಿ ಅಲ್ಲಿನ ಪ್ರಯಾಣಿಕರ ಸೌಲಭ್ಯ, ಟರ್ಮಿನಲ್ ನಿರ್ವಹಣೆ ಹಾಗೂ ಕಾರ್ಯಾಚರಣಾ ವ್ಯವಸ್ಥೆ ಅಧ್ಯಯನ ಮಾಡಿದೆ. ಈ ಆಧಾರದ ಮೇಲೆ ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೂಸ್ ಟರ್ಮಿನಲ್ ಅಭಿವೃದ್ಧಿಪಡಿಸುವ ಸಾಧ್ಯತೆ ಕುರಿತು ಪ್ರಾಥಮಿಕ ಕಾರ್ಯಸಾಧ್ಯತಾ ಅಧ್ಯಯನ (Feasibility Study) ಕೈಗೊಳ್ಳುವಂತೆ ಡಾ ರಾಮ್ ಪ್ರಸಾತ್ ಮನೋಹರ್ ನಿರ್ದೇಶನ ನೀಡಿದ್ದಾರೆ.
ಕೋಟ್
“ಕರ್ನಾಟಕದ ಕರಾವಳಿ ಪ್ರದೇಶವು ಕ್ರೂಸ್ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳನ್ನು ಹೊಂದಿದೆ. ರಾಜ್ಯದಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಉದ್ಯಮದ ಪ್ರಮುಖ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಅಗತ್ಯ ಮೂಲಸೌಕರ್ಯ ಹಾಗೂ ಅನುಕೂಲಕರ ಪರಿಸರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ದೊರೆಯಲಿದ್ದು, ಉದ್ಯೋಗ ಮತ್ತು ಹೂಡಿಕೆ ಅವಕಾಶಗಳೂ ಹೆಚ್ಚಲಿವೆ.”
- ಕೆ.ಜೆ. ಜಾರ್ಜ್, ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು
ಕೋಟ್
“ಮಂಗಳೂರಿನಿಂದ ಕ್ರೂಸ್ ಸೇವೆ ಆರಂಭಿಸಲು ವಾಟರ್‌ವೇಸ್ ಲೀಜರ್ ಟೂರಿಸಂ ಸಂಸ್ಥೆಯು ತಾತ್ವಿಕ ಒಪ್ಪಿಗೆ ಸೂಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮುಂದಿನ ಹಂತದಲ್ಲಿ ಸಂಸ್ಥೆಯ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ನಡೆಸಲಿದ್ದು, ಅದರ ವರದಿ ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದೇ ವೇಳೆ, ಅಂತರರಾಷ್ಟ್ರೀಯ ಗುಣಮಟ್ಟದ ಕ್ರೂಸ್ ಟರ್ಮಿನಲ್ ನಿರ್ಮಾಣದ ಸಾಧ್ಯತೆಗಳನ್ನೂ ಇಲಾಖೆ ಪರಿಶೀಲಿಸುತ್ತಿದೆ.”
- ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಕಾರ್ಯದರ್ಶಿಗಳು, ಪ್ರವಾಸೋದ್ಯಮ ಇಲಾಖೆ

