ರಾಜಕೀಯ ಸುದ್ದಿ

ಅಧಿಕಾರ ಕಿತ್ತುಕೊಂಡು ಅವಮಾನಿಸಿದರೂ ಪಕ್ಷ ನಿಷ್ಠೆ ಮೆರೆದ ಮಹದೇವಪ್ಪ !

Share It

ಬೆಂಗಳೂರು: ಹಿರಿಯ ನಾಯಕ, ದಲಿತ ಬಲಗೈ ಸಮುದಾಯದ ಪ್ರಬಲ ನಾಯಕನಾದರೂ ಅಧಿಕಾರ ನೀಡದೆ, ಹೊರಗಿಟ್ಟರೂ ಪಕ್ಷ ನಿಷ್ಢೆಯ ಮಾತುಗಳನ್ನಾಡುವ ಮೂಲಕ ಮಾಜಿ ಸಚಿವ ಎಚ್.ಸಿ‌ ಮಹದೇವಪ್ಪ ಕಾಂಗ್ರೆಸ್ ಕಾರ್ಯಕರ್ತರ ಮನಗೆದ್ದಿದ್ದಾರೆ.

ಸಚಿವ ಸ್ಥಾನ ಕೈತಪ್ಪಿದ ಕಾರಣಕ್ಕೆ ಹತ್ತಕ್ಕೂ ಹೆಚ್ಚು ನಾಯಕರು ಸಿಎಂ ಮತ್ತು ಹೈಕಮಾಂಡ್ ಮೇಲೆ ಮುಗಿಬೀಳುತ್ತಿದ್ದರೂ, ಸಿದ್ಧರಾಮಯ್ಯ ನೆರಳಾಗಿದ್ದ ಕಾರಣಕ್ಕೆ ಸ್ಥಾನ ಕಳೆದುಕೊಂಡ ಮಹದೇವಪ್ಪ ಮಾತ್ರ ಸೈಲೆಂಟ್ ಆಗಿದ್ದಾರೆ. ತನ್ನ ಹಿಂದೆ ಇಡೀ ದಲಿತ ಬಲಗೈ ಸಮುದಾಯವಿದ್ದರೂ ಸಹ ಒಂದೇ ಒಂದು ಪ್ರತಿಭಟನೆ ನೆಡೆಸದಂತೆ, ಪಕ್ಷ ವಿರೋಧಿ ಹೇಳಿಕೆ ನೀಡದಂತೆ ಮನವೊಲಿಸಿ ಸುಮ್ಮನಾಗಿಸಿದ್ದಾರೆ.

ಮಹದೇವಪ್ಪಗೆ ದಲಿತ ಸಂಘಟನೆಗಳ ಬಲವಿದೆ. ಚಾಮರಾಜನಗರದಿಂದ ಬೀದರ್ ವರೆಗೆ ಬಲವಾಗಿರುವ ಬಲಗೈ ಸಮುದಾಯದ ಬೆಂಬಲವಿದೆ. ಆದರೂ, ಒಂದೂ ಮಾತಾಡದಂತೆ ಸಂಘಟನೆಯ ಮುಖಂಡರಿಗೆ ಮನವಿ ಮಾಡಿಕೊಂಡಿರುವ ಮಹದೇವಪ್ಪ, ತಮಗೆ ಅಧಿಕಾರ ಶಾಶ್ವತವಲ್ಲ, ಅಂಬೇಡ್ಕರ್ ಆಶಯ, ಸಂವಿಧಾನದ ಉಳಿವು ಬಹುಮುಖ್ಯ ಎಂಬುದನ್ನು ಸಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು,ಅಧಿಕಾರ ಕೊಟ್ಟರೆ ಮಾತ್ರ ಪಕ್ಷ ಬೇಕು ಇಲ್ಲಾಂದ್ರೆ ರಾಜೀನಾಮೆ ಕೊಡುತ್ತೇವೆ ಅನ್ನೋದು ಸರಿಯಲ್ಲ! ಅಧಿಕಾರ ಇರಲಿ ಬಿಡಲಿ, ಜನಪರತೆ ಸಂವಿಧಾನದ ಆಶಯ ಮತ್ತು ಸಿದ್ಧಾಂತವನ್ನು ಬಿಡಬಾರದು.ಹಾಗೆ ಮಾಡುತ್ತಾ ಹೋದರೆ ಯಾವ ರಾಜಕೀಯ ಪಕ್ಷಕ್ಕೂ ಉಳಿಗಾಲ ಇರುವುದಿಲ್ಲ. ಪಕ್ಷವನ್ನು ಬಲಡಿಸುವುದು, ಜನಪರತೆಗಾಗಿ ಧ್ವನಿ‌ ಮಾಡುವುದು ಎಲ್ಲ ಕಾಲದ ಅಗತ್ಯ. ಆಗ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವಕ್ಕಾಗಿ ದನಿ ಮಾಡಲು ಅಧಿಕಾರ ಇರಲೇಬೇಕೆಂಬ ನಿಯಮವಿಲ್ಲ. ಅಧಿಕಾರಕ್ಕಿಂತ ದೊಡ್ಡದು ಎಂದರೆ ಅದು ಬಾಬಾ ಸಾಹೇಬರ ಸಂವಿಧಾನ ಮತ್ತು ಅದರ ನ್ಯಾಯದ ಪ್ರಜ್ಞೆ ಆಗಿದ್ದು ಅದಕ್ಕಾಗಿಯೇ ನನ್ನ ಹೋರಾಟ ಸದಾ ಇರಲಿದೆ ಸಾರ್ವಜನಿಕ ಜೀವನದಲ್ಲಿ ಎಲ್ಲರಿಗಿಂತಲೂ ಹೆಚ್ಚಿನ ಕೆಲಸ ಮಾಡಿರುವ ಹೆಮ್ಮೆ ನನಗಿದೆ. ಕೆಲಸವನ್ನು ಮಾಡಲು ಕೆಲವೊಮ್ಮೆ ಅವಕಾಶ ಸಿಗುತ್ತದೆ, ಕೆಲವೊಮ್ಮೆ ಸಿಗುವುದಿಲ್ಲ. ಈ ನಾಡಿನ ಎಲ್ಲ ರಾಜಕೀಯ ಪಕ್ಷಗಳ ಸಂದರ್ಭದಲ್ಲೂ ಇದೇ ಜರುಗುತ್ತದೆ ಎಂಬುದು ಸರ್ವೇ ಸಾಮಾನ್ಯವಾದ ಸಂಗತಿ ಎಂದಿದ್ದಾರೆ.

ಆದರೆ ಸಂವಿಧಾನಾತ್ಮಕ ಸಿದ್ಧಾಂತ ಮತ್ತು ಪ್ರಜಾಪ್ರಭುತ್ವದ ಆಶಯ ಕಾಪಾಡುವುದು ನಮ್ಮ ಆದ್ಯತೆ ಆಗದೇ ಹೋದರೆ, ಬಂಡವಾಳಶಾಹಿಗಳು, ಸರ್ವಾಧಿಕಾರಿಗಳು ದೇಶದ ಸಂವಿಧಾನವನ್ನು ಹಾಳು ಮಾಡುವ ಅಪಾಯ ಹೆಚ್ಚು. ಪ್ರಜಾಪ್ರಭುತ್ವವೇ ಇಲ್ಲದೇ ಅಧಿಕಾರವೂ ಇಲ್ಲ, ಸರ್ಕಾರವೂ ಇಲ್ಲ ಯಾವುದೂ ಇಲ್ಲ. ಹೀಗಾಗಿ ಸಾರ್ವಜನಿಕ ಬದುಕಿನ ಉದ್ದೇಶ ಏನಾಗಿರಬೇಕು ಎಂಬುದು ಬಹುಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.


Share It

You cannot copy content of this page