ಬೆಂಗಳೂರು: ನ್ಯಾಯಾಲಯದ ಕಲಾಪಕ್ಕೆ ಪದೇ ಪದೆ ಅಡ್ಡಿಪಡಿಸಿ, ಮದ್ಯದ ಅಮಲಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ವಿರುದ್ಧ ಕೂಗಾಡಿದ 55 ವರ್ಷದ ವಕೀಲನಿಗೆ ಹೈಕೋರ್ಟ್ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಒಂದು ದಿನದ ಸರಳ ಜೈಲು ಶಿಕ್ಷೆ ಹಾಗೂ 2 ಸಾವಿರ ದಂಡ ವಿಧಿಸಿದೆ.
ವಿಚಾರಣಾ ನ್ಯಾಯಾಲಯದ ವರದಿಯನ್ನು ಆಧರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವೆಂಕಟೇಶ್ ನಾಯಕ್ ಟಿ. ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ವಕೀಲರ ವರ್ತನೆ ಉದ್ದೇಶಪೂರ್ವಕ ಮತ್ತು ಹಠಮಾರಿತನದಿಂದ ಕೂಡಿದೆ. ಸಾಮಾಜಿಕ, ನೈತಿಕ ಹಾಗೂ ನ್ಯಾಯಾಂಗ ನಡವಳಿಕೆ ನಿಯಮಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿಸುತ್ತದೆ. ಇಂತಹ ವರ್ತನೆಗೆ ಶಿಕ್ಷೆ ವಿಧಿಸದಿದ್ದರೆ, ಇಂತಹ ಕೃತ್ಯಗಳು ಪುನರಾವರ್ತನೆಯಾಗುವ ಸಾಧ್ಯತೆಯಿದ್ದು, ಇದು ಕಾನೂನಿನ ಆಳ್ವಿಕೆ ಹಾಗೂ ಇಡೀ ನ್ಯಾಯಾಂಗ ವ್ಯವಸ್ಥೆಗೆ ಅಪಾಯ ಉಂಟುಮಾಡಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಾಂಗ ನಿಂದನೆ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೂ ಕೌಶಿಕ್ ಅವರು ತಮ್ಮ ವರ್ತನೆಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ಬದಲಾಗಿ ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಲ್ಲದೆ, ಇಡೀ ನ್ಯಾಯಾಂಗ ಸಂಸ್ಥೆಯ ವಿರುದ್ಧ ಆಧಾರರಹಿತ ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಕೌಶಿಕ್ ಅವರನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ, ಒಂದು ದಿನದ ಸರಳ ಶಿಕ್ಷೆ ಮತ್ತು 2 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದ ಹಿನ್ನಲೆ : ವಕೀಲ ಪಂಕಜ್ ಕೌಶಿಕ್ ವರ್ತನೆಗೆ ಸಂಬಂಧಿಸಿದಂತೆ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಸಲ್ಲಿಸಿದ್ದ ಎರಡು ಪತ್ರಗಳು ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಧೀಶರಿಂದ ವರದಿ ಬಂದಿತ್ತು. ವರದಿಯಲ್ಲಿ ಕೌಶಿಕ್ ಅವರು ಎರಡು ಸಂದರ್ಭಗಳಲ್ಲಿ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿ ಅನುಚಿತವಾಗಿ ವರ್ತಿಸಿದ್ದರು ಎಂದು ತಿಳಿಸಲಾಗಿತ್ತು. ಈ ವರದಿ ಆಧರಿಸಿ ಹೈಕೋರ್ಟ್ 2022ರಲ್ಲಿ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು.

