ಪ್ರೀತಂಗೌಡ ಆಪ್ತರ ಮನೆಗಳು ಸೇರಿ ಹಾಸನದ 7 ಕಡೆ ಎಸ್ಐಟಿ ದಾಳಿ!
ಹಾಸನ, ಮೇ.14: ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೋವುಳ್ಳ ಪೆನ್‌ಡ್ರೈವ್ ಹಂಚಿಕೆ ಆರೋಪ ಹಿನ್ನೆಲೆಯಲ್ಲಿ ತನಿಖೆ ಆಯಾಮ ವಿಸ್ತರಿಸಿರುವ ಎಸ್‌ಐಟಿ ತಂಡ, ಇಂದು ಮಂಗಳವಾರ (ಮೇ.14) ಸಂಜೆ ದಿಢೀರನೆ ಹಾಸನ ನಗರದಲ್ಲಿ ಹಲವರ ಮನೆ ಮೇಲೆ ಮಿಂಚಿನ ದಾಳಿ ನಡೆಸಿದೆ.
ಹಾಸನ ನಗರದ 7 ಕಡೆ ಎಸ್ಐಟಿ ದಾಳಿ!
ಹಾಸನ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಪ್ರೀತಂ ಜೆ.ಗೌಡ ಅವರ ಅತ್ಯಾಪ್ತರ ಮನೆಗಳು, ವ್ಯಾಪಾರ-ವಹಿವಾಟು ನಡೆಸುವ ಬಾರ್, ಹೋಟೆಲ್ ಹಾಗೂ ಕಚೇರಿ ಸೇರಿದಂತೆ ಒಟ್ಟು 7 ಕಡೆ ಏಕಕಾಲದಲ್ಲಿ 30 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಪೆನ್‌ಡ್ರೈವ್ ಕುರುಹು, ಪೂರಕ ಮಾಹಿತಿ, ಸಾಕ್ಷ್ಯಾಧಾರ ಕಲೆ ಹಾಕುವ ಯತ್ನ ನಡೆಸಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ್ದ ಹಲವು ತಂಡಗಳು, ಪ್ರೀತಂಗೌಡ ಅವರ ಪರಮಾಪ್ತರಾದ ಉದ್ಯಮಿ ಕ್ವಾಲಿಟಿ ಬಾರ್ ಶರತ್, ಕೆಸಿಪಿ ಗ್ರೂಪ್ ಸಿಇಒ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಪಿ.ಕಿರಣ್, ವಲ್ಲಾಭಾಯ್ ರೋಡ್ ಪುನೀತ್ ಮೊದಲಾದವರ ಬಾರ್, ಹೋಟೆಲ್, ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ, ತಮ್ಮ ತನಿಖೆಗೆ ಬೇಕಿರುವ ಮಾಹಿತಿ, ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ.
ಉದ್ಯಮಿ ಶರತ್
ಅವರಿಗೆ ಸೇರಿದ ಬಿ.ಎಂ ರಸ್ತೆಯಲ್ಲಿರುವ ಕ್ವಾಲಿಟಿ ಬಾರ್, ಲಾಡ್ಜ್, ಗೌರಿಕೊಪ್ಪಲಿನಲ್ಲಿರುವ ನಿವಾಸಗಳಿಗೂ ತಂಡ ಭೇಟಿ ನೀಡಿ ಶೋಧನೆ ನಡೆಸಿತು. ಪೆನ್‌ಡ್ರೈವ್ ಹಂಚಿಕೆ ಆರೋಪದಡಿ ಕ್ವಾಲಿಟಿ ಬಾರ್ ಶರತ್ ವಿರುದ್ಧ ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೂ ನಿರೀಕ್ಷಣಾ ಜಾಮೀನಿಗೆ ಶರತ್ ಅರ್ಜಿ ಸಲ್ಲಿಸಿರಲಿಲ್ಲ.
ಕಿರಣ್ ಮತ್ತು ಪುನೀತ್
ಹಾಗೆಯೇ ಹೆಚ್.ಪಿ.ಕಿರಣ್ ಒಡೆತನದ ಕೃಷ್ಣ ಹೋಟೆಲ್, ಕಚೇರಿ ಹಾಗೂ ನಿವಾಸದಲ್ಲೂ ಶೋಧಕಾರ್ಯ ನಡೆಯಿತು. ಹೋಟೆಲ್, ಕಚೇರಿ ನಂತರ ಶಂಕರೀಪುರಂನಲ್ಲಿರುವ ಕಿರಣ್ ನಿವಾಸಕ್ಕೂ ಭೇಟಿ ನೀಡಿ, ಕೆಲ ಹೊತ್ತು ಪರಿಶೀಲನೆ ನಡೆಸಿ ಪೂರಕ ಮಾಹಿತಿ ಕಲೆ ಹಾಕಿತು. ಅಲ್ಲದೆ ಮತ್ತೊಬ್ಬ ಬಿಜೆಪಿ ಮುಖಂಡ ವಲ್ಲಭಾಯ್ ರೋಡ್ ಪುನೀತ್ ಅವರ ವಿವೇಕ ನಗರದ ಮನೆ ಮೇಲೂ ರೇಡ್ ಮಾಡಲಾಯಿತು.
ಮತ್ತೊಂದೆಡೆ ಈಗಾಗಲೇ ಬಂಧಿತರಾಗಿರುವ ವಕೀಲ ದೇವರಾಜೇಗೌಡ ಅವರ ರವೀಂದ್ರನಗರದ ಮನೆ ಹಾಗೂ ಹೊಳೆನರಸೀಪುರ ಪಟ್ಟಣದ ಕಾರಂಜಿ ಕಟ್ಟೆಯಲ್ಲಿರುವ ಕಚೇರಿ ಮೇಲೂ ಅಧಿಕಾರಿಗಳ ತಂಡ ದಾಳಿ ನಡೆಸಿ ತಲಾಶ್ ಮಾಡಿತು. ಪ್ರಜ್ವಲ್‌ಗೆ ಹಿಂದೆ ಕಾರು ಚಾಲಕನಾಗಿದ್ದ ಕಾರ್ತಿಕ್‌ಗೌಡ, ನಾನು ಆರಂಭದಲ್ಲಿ ದೇವರಾಜೇಗೌಡರಿಗೆ ಮಾತ್ರ ಅಶ್ಲೀಲ ದೃಶ್ಯಾವಳಿವುಳ್ಳ ಪೆನ್‌ಡ್ರೈವ್‌ನ ಒಂದು ಕಾಪಿ ಕೊಟ್ಟಿದ್ದೆ ಎಂದು ಹೇಳಿಕೆ ನೀಡಿದ್ದ.
ಇನ್ನು ಶರತ್, ಕಿರಣ್, ಪುನೀತ್, ದೇವರಾಜೇಗೌಡ ಮೊದಲಾದವರ ಮನೆ, ಕಚೇರಿ, ಬಾರ್, ಹೋಟೆಲ್ ಪ್ರವೇಶ, ಪರಿಶೀಲನೆಗೂ ಮುನ್ನ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಿ ನಂತರ ಒಳ ಪ್ರವೇಶಿಸಿ ಶೋಧಕಾರ್ಯ ನಡೆಸಿತು. ಈ ಮೂಲಕ ಅಶ್ಲೀಲ ವಿಡಿಯೋ ಇದ್ದ ಪೆನ್‌ಡ್ರೈವ್ ವೈರಲ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ತಂಡ, ಇಂಚಿಂಚೂ ಮಾಹಿತಿ ಜಾಲಾಡುತ್ತಿದ್ದು, ಎಸ್‌ಐಟಿ ಬಲೆ, ಯಾರಿಗೆಲ್ಲಾ ಉರುಳಾಗಲಿದೆ? ಎಂಬ ಕುತೂಹಲ ಮೂಡಿಸಿದೆ.