ಸುದ್ದಿ

ಕೆಎಸ್​ಪಿಸಿಬಿ ಅಧ್ಯಕ್ಷರಾಗಿ ಶಾಸಕ ಶಿವಣ್ಣ ನೇಮಕ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Share It

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರನ್ನಾಗಿ ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಶಿವಣ್ಣ ನಾಮನಿರ್ದೇಶನ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ವಕೀಲೆ ಸುಧಾ ಕಾಟ್ವ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ಕೆ.ಎಸ್​.ಭರತ್​ ಕುಮಾರ್​ ಅವರಿದ್ದ ದ್ವಿಸದಸ್ಯ ಪೀಠವು ರಾಜ್ಯ ಸರ್ಕಾರ ಮತ್ತು ಕೆಎಸ್​ಪಿಸಿಬಿಗೆ ನೋಟಿಸ್​ ಜಾರಿ ಮಾಡಿದ್ದಲ್ಲದೇ ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಿದೆ.

ಜಲ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ 1974ರ ಕಲಂ 4(2)(ಎ) ಪ್ರಕಾರ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರುವವರನ್ನು ಕೆಎಸ್​ಪಿಸಿಬಿ ಹುದ್ದೆಗೆ ನೇಮಕ ಮಾಡಬೇಕು ಎಂಬ ನಿಯಮವಿದೆ. ಇಲ್ಲವೇ ಅಂತಹ ವಿಷಯಗಳನ್ನು ನಿರ್ವಹಿಸುವ ಸಂಸ್ಥೆಗಳ ಆಡಳಿತದಲ್ಲಿ ಜ್ಞಾನ ಮತ್ತು ಅನುಭವ ಪಡೆದಿರಬೇಕು. ಈ ಪ್ರಕರಣದಲ್ಲಿ ನಾಮನಿರ್ದೇಶನಕ್ಕೂ ಮುನ್ನ ಶಿವಣ್ಣ ಅವರಿಗೆ ಈ ಅರ್ಹತೆಗಳು ಇವೆಯೇ ಹೇಗೆ ಎಂಬುದನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕೆಎಸ್‌ಪಿಸಿಬಿ ಅಧ್ಯಕ್ಷ, ಸದಸ್ಯರ ನಾಮನಿರ್ದೇಶನ ಹಾಗೂ ಸದಸ್ಯ ಕಾರ್ಯದರ್ಶಿಯ ನೇಮಕಾತಿಗೆ ಸಂಬಂಧಿಸಿದ 2024ರ ನಿಯಮಗಳ ಪ್ರಕಾರ, ಆಯ್ಕೆ ಸಮಿತಿ ಕನಿಷ್ಠ 3 ದಿನ ಪತ್ರಿಕೆಗಳಲ್ಲಿ ಮುಕ್ತ ಜಾಹೀರಾತು ನೀಡಬೇಕು. ಆದರೆ, ಈ ಕಡ್ಡಾಯ ಕ್ರಮ ಅನುಸರಿಸಲಾಗಿದೆಯೇ ಎಂಬುದನ್ನು ನಾಮ ನಿರ್ದೇಶನದಲ್ಲಿ ಸ್ಪಷ್ಟಪಡಿಸಿಲ್ಲ. ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ಉಂಟಾದ ಖಾಲಿ ಹುದ್ದೆ ಭರ್ತಿ ಮಾಡಲು ನಾಮನಿರ್ದೇಶನ ಮಾಡಿದ್ದರೆ, ಕಾಯ್ದೆ ಕಲಂ 5(6)ರ ಅನ್ವಯ ಹೊಸದಾಗಿ ನಾಮನಿರ್ದೇಶನಗೊಂಡ ವ್ಯಕ್ತಿ ಅಧಿಕಾರಾವಧಿ ಹಿಂದಿನ ಅಧ್ಯಕ್ಷರ ಉಳಿದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಹೊಸದಾಗಿ ಪೂರ್ಣ ಮೂರು ವರ್ಷಗಳ ಅವಧಿಗೆ ಮುಂದುವರೆಸಲಾಗುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.


Share It

You cannot copy content of this page