ಅಪರಾಧ ಉಪಯುಕ್ತ ಸುದ್ದಿ

ಇಂಧನ ಸಂರಕ್ಷಣೆ ಜಾಗೃತಿ: ಬ್ರಿಕ್ಸ್ ಸುಸ್ಥಿರ ಜೀವನಶೈಲಿ ಸಪ್ತಾಹ–2026 ಆಚರಿಸಿದ ಕ್ರೆಡಲ್

Share It

ಉಳಿಸುವ ಪ್ರತಿಯೊಂದು ಯೂನಿಟ್ ವಿದ್ಯುತ್ ಸುಸ್ಥಿರ ಭವಿಷ್ಯಕ್ಕೆ ಕೊಡುಗೆ

ಬೆಂಗಳೂರು : ಬ್ರಿಕ್ಸ್ ಸುಸ್ಥಿರ ಜೀವನಶೈಲಿ ಸಪ್ತಾಹ 2026ರ ಅಂಗವಾಗಿ ಕ್ರೆಡಲ್‌ನಲ್ಲಿ ಆಯೋಜಿಸಿದ್ದ ‘ಇಂಧನ ಉಳಿಸಿ’ ಅಭಿಯಾನದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂಧನ ಸಂರಕ್ಷಣಾ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕೇಂದ್ರ ಇಂಧನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಇಂಧನ ದಕ್ಷತೆ ಬ್ಯೂರೋ (ಬಿಇಇ) ಸಹಯೋಗದಲ್ಲಿ ನವೆಂಬರ್‌ 1ರಿಂದ 7ರವರೆಗೆ ನಡೆದ ಸಪ್ತಾಹದಲ್ಲಿ ‘ಮಿಷನ್ ಲೈಫ್‌’ ‘ಇಂಧನ ಉಳಿಸಿ’ ಅಭಿಯಾನದ ಅಂಗವಾಗಿ ಇಂಧನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಇಂಧನ ಸಂರಕ್ಷಣೆ ಮತ್ತು ಸುಸ್ಥಿರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಕ್ರೆಡಲ್‌ ವತಿಯಿಂದ ಜಾಗೃತಿ ಮೂಡಿಸಲಾಗುತ್ತದೆ. ವಿದ್ಯುತ್‌ ಮತ್ತು ನೀರಿನ ಸಂರಕ್ಷಣೆ, ಆರೋಗ್ಯಕರ ಜೀವನಶೈಲಿ, ಸುಸ್ಥಿರ ಆಹಾರ ಪದ್ಧತಿ, ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಕಡಿತ, ಇ-ತ್ಯಾಜ್ಯ ನಿರ್ವಹಣೆ ಹಾಗೂ ತ್ಯಾಜ್ಯ ಕಡಿತ ಸೇರಿದಂತೆ ಸುಸ್ಥಿರ ಜೀವನಶೈಲಿಯ ವಿವಿಧ ಅಭ್ಯಾಸಗಳ ಕುರಿತು ಜಾಗೃತಿ ಮೂಡಿಸುವುದು ಈ ಅಭಿಯಾನದ ಮೂಲ ಉದ್ದೇಶ.

ನವೆಂಬರ್ 2ರಂದು ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಒಂದು ಗಂಟೆಗಳ ಕಾಲ ಕಚೇರಿಯ ವಿದ್ಯುತ್ ದೀಪಗಳನ್ನು ಸ್ಥಗಿತಗೊಳಿಸುವ ಮೂಲಕ ಬಿಇಇಯ ‘ಸ್ವಿಚ್ ಆಫ್ ಅಂಡ್‌ ಸೇವ್ ಎನರ್ಜಿ’ ಕಾರ್ಯಕ್ರಮವನ್ನು ಆಚರಿಸಲಾಗಿತ್ತು. ಮಿಷನ್ ಲೈಫ್ – ‘ಇಂಧನ ಉಳಿಸಿ’ ಅಭಿಯಾನದ ಸಂದೇಶ ಸಾರುವ ಬ್ಯಾನರ್‌ಗಳು ಮತ್ತು ಸ್ಟ್ಯಾಂಡಿಗಳನ್ನು ಪ್ರದರ್ಶಿಸುವುದರ ಜತೆಗೆ ಡಿಜಿಟಲ್ ಮಾಧ್ಯಮಗಳ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸಲಾಗಿತ್ತು. ಇಲಾಖೆಯ ಅಧಿಕಾರಿಗಳಿಗಾಗಿ ಇಂಧನ ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಾಗಾರವನ್ನೂ ಆಯೋಜಿಸಲಾಗಿತ್ತು.

ಸಪ್ತಾಹದ ಕುರಿತು ಮಾತನಾಡಿದ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ದಿವ್ಯಾ ಪ್ರಭು ಅವರು, “ಇಂಧನ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ಮಿಷನ್ ಲೈಫ್ ಕಾರ್ಯಕ್ರಮಗಳ ಮೂಲಕ ಇಂಧನ ಉಳಿತಾಯದ ಅಭ್ಯಾಸಗಳನ್ನು ಅಳವಡಿಸಿಕೊಂಡು ಸುಸ್ಥಿರ ಭವಿಷ್ಯ ನಿರ್ಮಾಣಕ್ಕೆ ಕೊಡುಗೆ ನೀಡಲು ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ. ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ನಾಗರಿಕರು ಇಂಧನ ಸಂರಕ್ಷಣೆಯನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವಂತೆ ಕರೆ ನೀಡುತ್ತೇವೆ” ಎಂದು ತಿಳಿಸಿದರು.

ಕೋಟ್‌:
“ಸುಸ್ಥಿರ ಮತ್ತು ಇಂಧನ ದಕ್ಷ ಭವಿಷ್ಯವನ್ನು ನಿರ್ಮಿಸುವಲ್ಲಿ ಇಂಧನ ಸಂರಕ್ಷಣೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಳಕ್ಕೆ ಆದ್ಯತೆ ನೀಡುವ ಜತೆಗೆ ಜವಾಬ್ದಾರಿಯುತ ಇಂಧನ ಬಳಕೆ ಮತ್ತು ವಿದ್ಯುತ್ತಿನ ಸಮರ್ಥ ಬಳಕೆಗೂ ನಮ್ಮ ಸರ್ಕಾರ ಒತ್ತು ನೀಡುತ್ತದೆ. ಮಿಷನ್ ಲೈಫ್ – ವಿದ್ಯುತ್‌ ಉಳಿಸಿ ಅಭಿಯಾನದಡಿ ಇಂಧನ ಸಂರಕ್ಷಣೆಯನ್ನು ಸಾಮೂಹಿಕ ಜವಾಬ್ದಾರಿಯನ್ನಾಗಿ ಪರಿಗಣಿಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಭವಿಷ್ಯವನ್ನು ಖಾತ್ರಿಪಡಿಸಲಾಗುವುದು.”
– ಕೆ.ಜೆ.ಜಾರ್ಜ್‌, ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು

“ರಾಜ್ಯಾದ್ಯಂತ ಇಂಧನ ಸಂರಕ್ಷಣೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಕ್ರೆಡಲ್ ಉತ್ತೇಜಿಸುತ್ತದೆ. ಜವಾಬ್ದಾರಿಯುತ ವಿದ್ಯುತ್ ಬಳಕೆ ಹಾಗೂ ಇಂಧನ ದಕ್ಷತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಸಪ್ತಾಹದ ಮೂಲ ಉದ್ದೇಶ.”
– ಗೌರವ್ ಗುಪ್ತ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ


Share It

You cannot copy content of this page