ಭುವನೇಶ್ವರ(ಒಡಿಶಾ): ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ತೀವ್ರ ಸ್ವರೂಪದ ಚಂಡಮಾರುತ ‘ಅಕ್ವಾನ್’ ಉತ್ತರ-ವಾಯವ್ಯ ದಿಕ್ಕಿನತ್ತ ನಿರಂತರವಾಗಿ ಚಲಿಸುತ್ತಿದೆ. ಚಂಡಮಾರುತ ಆಂಧ್ರಪ್ರದೇಶದ ನರಸಾಪುರ ಮತ್ತು ಒಡಿಶಾದ ಪುರಿ ನಡುವಿನ ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ ಉಂಟುಮಾಡುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ 50,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ರಾಜ್ಯ ಸರ್ಕಾರ ಒಟ್ಟು 3,000 ಚಂಡಮಾರುತ ಆಶ್ರಯ ಕೇಂದ್ರಗಳನ್ನು ಸಿದ್ಧಪಡಿಸಿದ್ದು, ಅವುಗಳಲ್ಲಿ ಈಗಾಗಲೇ 448 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಸರ್ಕಾರ 15 ಜಿಲ್ಲೆಗಳಿಗೆ 20 ಕೋಟಿ ರೂಪಾಯಿ ಹಂಚಿಕೆ ಮಾಡಿದೆ.
ಗುರುವಾರ ಮತ್ತು ಶುಕ್ರವಾರ 11 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಈಗಾಗಲೇ ರೆಡ್ ಅಲರ್ಟ್ ನೀಡಿದೆ. ಮಲ್ಕಾನಗಿರಿ, ಕೊರಾಪುಟ್, ರಾಯಗಡ, ಕಲಹಾಂಡಿ, ಗಜಪತಿ, ಗಂಜಾಂ, ಕಂಧಮಾಲ್, ಬೌಧ್, ಪುರಿ, ನಯಾಗಢ ಮತ್ತು ಖುರ್ದಾ ಜಿಲ್ಲೆಗಳಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಒಡಿಶಾ ಕರಾವಳಿಯಲ್ಲಿ ಸರಾಸರಿ ಗಾಳಿಯ ವೇಗ ಗಂಟೆಗೆ ಸುಮಾರು 100 ಕಿ.ಮೀ. ಇರಲಿದೆ ಎಂದು ಇಲಾಖೆ ತಿಳಿಸಿದೆ.
