ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದೇಶಕ್ಕೆ ಹಾರಿರುವ ಅವರ ಮೇಲೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಪ್ರಜ್ವಲ್ ತಪ್ಪನ್ನು ದೇವೇಗೌಡರಾದಿಯಾಗಿ, ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈ ನಡುವೆ ಪ್ರಕರಣ ದಿನಕ್ಕೊಂದು ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ.
ಪೆನ್ ಡ್ರೈವ್ ಹಂಚಿಕೆಯ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂಬ ಆರೋಪವನ್ನು ಬಿಜೆಪಿ ಮುಖಂಡ, ಎಸ್‌ಐಟಿ ವಶದಲ್ಲಿರುವ ದೇವರಾಜೇಗೌಡ ಹೇಳಿದ್ದಾರೆ.
ದೇವರಾಜೇಗೌಡ ಹೇಳಿಕೆ ಬೆನ್ನಲ್ಲೇ ಆಡೀಯೋವೊಂದು ವೈರಲ್ ಆಗಿದೆ. ಆ ಆಡಿಯೋದಲ್ಲಿ ಎಲ್.ಆರ್. ಶಿವರಾಮೇಗೌಡ, ಡಿ.,ಕೆ ಶಿವಕುಮಾರ್ ಮಾತನ್ನಾಡಿದ್ದಾರೆ ಎಂಬುದು ಬಿಜೆಪಿ ಮತ್ತು ಜೆಡಿಎಸ್ ನಾಯಕರ ಆರೋಪ. ಈ ಆಡಿಯೋ ಸತ್ಯವೋ, ಸುಳ್ಳೋ ಕಾನೂನು ಮತ್ತು ಮಾತನಾಡಿರುವವರ ಆತ್ಮಸಾಕ್ಷಿಗಳಿಗಷ್ಟೇ ಗೊತ್ತು. ಆದರೆ, ಕೇಳುಗರಿಗೆ ಬೇಜಾರೆನಿಸುವ ಒಂದೇ ಒಂದು ಅಂಶವೆAದರೆ ಅದು, ಅದರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಬಗ್ಗೆ ಉಲ್ಲೇಖವಾಗಿರುವ ಮಾತುಗಳು.
ಎಚ್.ಡಿ. ದೇವೇಗೌಡ ಕರ್ನಾಟಕದ ಅಸ್ಮಿತೆ. ಅವರು ಯಾವುದೇ ಪಕ್ಷದಲ್ಲಿರಲಿ, ಇಡೀ ನಾಡಿನ ಜನ ಅವರನ್ನು ದೇಶಕ್ಕೆ ಪ್ರಧಾನಿಯಾದ ಏಕೈಕ ಕನ್ನಡಿಗ ಎಂಬ ದೃಷ್ಟಿಯಲ್ಲೇ ನೋಡುತ್ತಾರೆ. ಪುತ್ರ ವ್ಯಾಮೋಹ, ಕುಟುಂಬ ವ್ಯಾಮೋಹ ಎಂಬ ವಿಚಾರ ಬಂದಾಗ ಅವರನ್ನು ರಾಜಕೀಯವಾಗಿ ಸೋಲಿಸಿ, ಮನೆಗೆ ಕಳುಹಿಸಿರಬಹುದು. ಆದರೆ, ವ್ಯಕ್ತಿ ದೃಷ್ಟಿ ಮತ್ತು ಅಸ್ಮಿತೆಯ ದೃಷ್ಟಿ ಬಂದಾಗ ಅವರು ಕರುನಾಡಿನ ಆಸ್ತಿ ಎಂದರೆ ತಪ್ಪಲ್ಲ.
ಈಗಿರುವ ದೇವೇಗೌಡರನ್ನು ಪ್ರಜ್ವಲ್ ಪ್ರಕರಣದಿಂದ ಬೇಸತ್ತು ನೇಣು ಹಾಕಿಕೊಳ್ಳಬೇಕಿತ್ತು ಎಂದು ಶಿವರಾಮೇಗೌಡ ಹೇಳುವುದು ತಪ್ಪು. ಪ್ರಜ್ವಲ್ ಪ್ರಕರಣದಿಂದ ದೇವೇಗೌಡರಿಗೆ ಮಾನಸಿಕವಾಗಿ ಬೇಸರವಾಗಿರುವುದು ನಿಜ. ಸಾಮಾನ್ಯ ರೈತನ ಮಗನಾಗಿದ್ದುಕೊಂಡು, ಹರದನಹಳ್ಳಿಯಿಂದ ದೆಹಲಿವರೆಗೆ ದೇವೇಗೌಡರು ಸವೆಸಿದ ಹಾದಿಯನ್ನು ಪ್ರಜ್ವಲ್ ಒಂದು ಪೆನ್ ಡ್ರೈವ್ ನಿಂದ ಹಾಳು ಮಾಡಿದ ಎಂಬುದು ಎಷ್ಟು ನಿಜವೋ, ಅಂತಹ ಪೆನ್ ಡ್ರೈವ್ ಪ್ರಕರಣವೊಂದು ದೇವೇಗೌಡರ ಮೇರು ವ್ಯಕ್ತಿತ್ವ ಮತ್ತು ಹೋರಾಟದ ಹೆಜ್ಜೆಗುರುತನ್ನು ಮಾಸುವಂತೆ ಮಾಡುತ್ತದೆ ಎಂಬುದನ್ನು ನಾವು ಒಪ್ಪಲು ಸಾಧ್ಯವಿಲ್ಲ.
ಮಕ್ಕಳು ಅಪ್ಪ&ಅಮ್ಮನ ಮಾತು ಕೇಳುವುದು ಬಿಟ್ಟೇ ಎಷ್ಟೋ ದಿನಗಳಾಗಿವೆ. ಇನ್ನು ತಾತನ ಮಾತು ಕೇಳುವುದು ದೂರದ ಮಾತು. ರಾಜಕೀಯ ಕುಟುಂಬ ಎಂಬ ಕಾರಣಕ್ಕೆ, ತಮ್ಮ ತಾತ ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಅವರಿಗೆ ಗೌರವ ಕೊಡಬಹುದು ಹೊರತುಪಡಿಸಿದರೆ, ದೇವೇಗೌಡರು ಹೇಳಿದಂತೆಯೇ ಪ್ರಜ್ವಲ್ ಕೇಳುತ್ತಿದ್ದರು ಎಂಬುದು ಸುಳ್ಳು., ಹೀಗಾಗಿ, ಪ್ರಜ್ವಲ್ ಮಾಡಿದ ತಪ್ಪಿಗೆ ದೇವೇಗೌಡರ ಸಾವು ಬಯಸುವುದು ಯಾವ ನ್ಯಾಯ?
ವೇಶ್ಯೆಯ ಮಕ್ಕಳು ವೇಶ್ಯೆಯರಾಗುವುದು ಬೇಡ ಎಂಬ ಕಾರಣಕ್ಕೆ ದೇವದಾಸಿಯರ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಸುಧಾರಿಸುವ ಸಮಾಜಮುಖಿ ಕೆಲಸ ಮಾಡುವ ನಾವೆಲ್ಲ, ಮೊಮ್ಮಗ ಮಾಡಿದ ತಪ್ಪಿಗೆ ತಾತನ ತಪ್ಪು ಎನ್ನಲಾದೀತೆ. ಅಷ್ಟಕ್ಕು ದೇವೇಗೌಡರು, ಪ್ರಜ್ವಲ್ ಗೆ ಕಾನೂನು ಪ್ರಕಾರ ಆಗಬೇಕಿರುವ ಕ್ರಮದ ಬಗ್ಗೆ ತಮ್ಮ ತಕರಾರೇನು ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಪ್ರಜ್ವಲ್ ಪ್ರಕರಣದಲ್ಲಿ ದೇವೇಗೌಡರನ್ನು ಎಳೆದು ತರುವುದು ಶೋಭೆಯಲ್ಲ.
ಈ ಅಂಶವನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು, ಜತೆಗೆ, ಈ ಹೇಳಿಕೆಯನ್ನೇ ಬಳಸಿಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುವ ಜೆಡಿಎಸ್ ನಾಯಕರು ಕೂಡ ದೇವೇಗೌಡರ ಹೆಸರು ಬಳಸಿ, ಅವರನ್ನು ಕುಬ್ಜರನ್ನಾಗಿಸುವುದು ಬೇಡ ಎಂಬ ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ಸಾವು ಸಹಜ ಪ್ರಕ್ರಿಯೆ, ಆದರೆ, ಅದಾಗಿಯೇ ಬಂದು ಸೆರೆಹಿಡಿಯುವವರೆಗೆ ದೇವೇಗೌಡರಂತಹ ಮೇರು ವ್ಯಕ್ತಿತ್ವಕ್ಕೆ ಅವಮಾನ ಮಾಡುವುದು ಬೇಡ ಎಂಬುದು ನಮ್ಮ ಅಭಿಮತ.