ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು, ಸಂದರ್ಶನದಲ್ಲಿ ನನ್ನನ್ನು ದೇವರು ಕಳುಹುಸಿದ್ದಾನೆ ಎಂಬ ಹೇಳಿಕೆಗೆ ವ್ಯಂಗ್ಯ ಉತ್ತರ ನೀಡಿರುವ ಸಚಿವ ಡಾ. ಎಚ್.ಸಿ. ಮಹದೇವಪ್ಪ, ದೇವದೂತನ ಆಳ್ವಿಕೆಯಲ್ಲಿ ಎಲ್ಲವೂ ದುಬಾರಿಯಾಗಿದೆ ಎಂದು ಕುಟುಕಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ದೇವದೂತ ಬಂದ ನಂತರ 72 ಇದ್ದ ಪೆಟ್ರೋಲ್ 100 ರು ಆಯ್ತು, 60 ಇದ್ದ ಡೀಸೆಲ್ 85 ಕ್ಕೇರಿತು, ಡಾಲರ್ ರುಪಾಯಿಯ ಮುಂದೆ ಕುಸಿತ ಕಂಡಿತು, ಸಿಲಿಂಡರ್ ಬೆಲೆ 400 ರು ನಿಂದ 1000 ಕ್ಕೇರಿತು, ಪುಲ್ವಾಮಾ ದಾಳಿಯಲ್ಲಿ 40 ಜನ ಸೈನಿಕರು ಹುತಾತ್ಮರಾಗುವಂತಾಯಿತು ಎಂದು ಟೀಕಿಸಿದ್ದಾರೆ.
ಭಾರತ ಹಸಿವಿನ ಸೂಚ್ಯಂಕದಲ್ಲಿ 55 ನೇ ಸ್ಥಾನದಿಂದ 102 ನೇ ಸ್ಥಾನಕ್ಕೇರಿತು, ಜನಸಾಮಾನ್ಯರ ಕೊಳ್ಳುವ ಶಕ್ತಿಯೇ ಕ್ಷೀಣಿಸಿತು. ಕರೋನಾ ಸಂದರ್ಭದಲ್ಲಿ ಆಕ್ಸಿಜನ್ ಸಿಗದೆ ಲೆಕ್ಕವಿಲ್ಲದಷ್ಟು ಸಾವಾಯಿತು. ಚೀನಾವು ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿತು. ದೇಶದ 55 ಲಕ್ಷ ಕೋಟಿಗಳಷ್ಟಿದ್ದ ಸಾಲ 185 ಲಕ್ಷ ಕೋಟಿಗೇರಿತು ಎಂದು ಕುಟುಕಿದ್ದಾರೆ.
ಮುಂದುವರಿದು, ಬಾಬಾಸಾಹೇಬರು ರಚಿಸಿದ ಸಂವಿಧಾನಕ್ಕೆ ಅಪಾಯ ಬಂದೊದಗಿತು, ಜನರಿಗೆ ನ್ಯಾಯಯುತವಾಗಿ ಬರಬೇಕಿದ್ದ ಬರಪರಿಹಾರಕ್ಕೆ ಕೋರ್ಟ್ ಮೆಟ್ಟಿಲೇರಬೇಕಾಯಿತು. ಮಣಿಪುರದಂತಹ ರಾಜಕೀಯ ಅರಾಜಕತೆ ಮತ್ತು ಹಿಂಸೆಯು ಕಣ್ಣ ಮುಂದೆಯೇ ಜರುಗಿತು ಎಂದು ಟೀಕಿಸಿದ್ದಾರೆ.