ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪೆನ್ ಡ್ರೈವ್ ಹಂಚಿದ್ದ ಆರೋಪದಲ್ಲಿ ಇಬ್ಬರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.
ಪೆನ್ ಡ್ರೈವ್ ಪ್ರಕರಣದಲ್ಲಿ ಈ ಇಬ್ಬರನ್ನು ಆರೋಪಿಗಳು ಎಂದು ನೊಟೀಸ್ ನೀಡಿದ್ದ ಎಸ್ಐಟಿ, ಈವರೆಗೆ ಅವರನ್ನು ಬಂಧಿಸಿರಲಿಲ್ಲ. ಇದೀಗ ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಒತ್ತಡ ಕೇಳಿಬಂದ ಕಾರಣಕ್ಕೆ ಎಸ್ಐಟಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ.
ನವೀನ್ ಗೌಡ, ಚೇತನ್ ಗೌಡ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿಕೊಂಡಿದ್ದು, ಹೈಕೋರ್ಟ್ಗೆ ಬಂದಿದ್ದ ವೇಳೆ ಅವರನ್ನು ಎಸ್ಐಟಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ನವೀನ್ ಗೌಡ ಮತ್ತು ಚೇತನ್ ಗೌಡ ಅರೆಸ್ಟ್ ಮಾಡದಿರುವ ಎಸ್ಐಟಿ ಕ್ರಮವನ್ನು ವಿಪಕ್ಷಗಳು ಟೀಕೆ ಮಾಡಿದ್ದವು. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಅವರ ಬಂಧನ ಮಾಡದಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ ಎಂದಿದ್ದರು.
ಈ ಎಲ್ಲ ಹಿನ್ನೆಲೆಯಲ್ಲಿ ಇಬ್ಬರನ್ನು ಎಸ್ ಐಟಿ ಬಂಧನ ಮಾಡಿದ್ದು, ಮತ್ತೊಬ್ಬ ಆರೋಪಿ ಪುಟ್ಟಸ್ವಾಮಿ, ಪೆನ್ ಡ್ರೈವ್ ಅನ್ನು ದೇವರಾಜೇಗೌಡನಿಗೆ ನೀಡಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡ ಬಂಧನಕ್ಕೆ ಎಸ್ಐಟಿ ಬಲೆ ಬೀಸಿದೆ.
