ಅಪರಾಧ ರಾಜಕೀಯ ಸುದ್ದಿ

ದಲಿತರ ಹಣ ದುರ್ಬಳಕೆ:ಸಚಿವರ ರಾಜೀನಾಮೆಗೆ ಆಗ್ರಹ

Share It

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಯ ಬೆನ್ನಲ್ಲೇ ಬಿಜೆಪಿ ನಾಯಕರು ಸರಕಾರದ ವಿರುದ್ಧ ದಲಿತಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಸರಕಾರದ ವಿರುದ್ಧ ದಾಳಿ ನಡೆಸಿರುವ ಬಿಜೆಪಿ ಹಿರಿಯ ನಾಯಕರು, ದಲಿತರ ಪರವಾಗಿದ್ದೇವೆ ಎಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ದಲಿತರಿಗೆ ಮೀಸಲಿಟ್ಟಿದ್ದ ಅನುದಾನ ದುರ್ಬಳಕೆಯಾಗಿ, ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ತಲೆ ಕೆಡಿಸಿಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ.

ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮಾತನಾಡಿ, ದಲಿತಪರ ಸರಕಾರ ಎಂದು ಬೀಗುತ್ತಿರುವ ಸಿದ್ದರಾಮಯ್ಯ ಈ ಕಡೆಗೆ ಯೋಚನೆ ಮಾಡಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187.5 ಕೋಟಿ ದುರ್ಬಳಕೆಯಾಗಿದೆ ಎಂದು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜೆಡಿಎಸ್ ನಾಯಕ ಸಾ.ರಾ. ಮಹೇಶ್ ಮಾತನಾಡಿ, ಸರಕಾರದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಇದೇನಾ ಸಿದ್ದರಾಮಯ್ಯನವರೇ ನಿಮ್ಮ ಪಾರದರ್ಶಕ ಆಡಳಿತ ವ್ಯವಸ್ಥೆ, ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿದ್ದ ದುಡ್ಡು ದುರ್ಬಳಕೆಯಾಗಿದೆ. ಡೆತ್‌ನೋಟ್ ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಇಲಾಖೆ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.


Share It

You cannot copy content of this page