ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯವೇ ಸುಳ್ಳು, ಹೀಗಾಗಿ, ನನ್ನ ಮೇಲೆ ಎಸ್‌ಐಟಿ ಹಾಕಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಸಂತ್ರಸ್ತೆಯ ಅಪಹರಣ ಪ್ರಕರಣಗಳಲ್ಲಿ ರೇವಣ್ಣ ಅವರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಿ, ಎಸ್‌ಐಟಿ ಜೈಲಿಗೆ ಕಳುಹಿಸಿತ್ತು. ನಂತರ ರೇವಣ್ಣ ಜಾಮೀನು ಪಡೆದು ಹೊರಬಂದಿದ್ದಾರೆ. ಇದೀಗ ಈ ಪ್ರಕರಣವೇ ರಾಜಕೀಯ ಷಡ್ಯಂತ್ರ ಎಂದು ವಾದ ಶುರು ಮಾಡಿಕೊಂಡಿದ್ದಾರೆ.
ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಪ್ರಮುಖ ಆರೋಪಿಗಳಾಗಿದ್ದು, ಭವಾನಿ ರೇವಣ್ಣ ಅವರಿಗೂ ಕಂಟಕ ಎದುರಾಗಿದೆ. ಜತೆಗೆ, ಮಹಿಳೆಯ ಅಪಹರಣ ಮಾಡಿದ್ದ ರೇವಣ್ಣ ಆಪ್ತನನ್ನು ಬಂಧಿಸಲಾಗಿದೆ. ಆಕೆಯನ್ನು ಕಾರಿನಲ್ಲಿ ಕರೆತಂದಿದ್ದ ಕಾರು ಚಾಲಕನ ಬಂಧನಕ್ಕೆ ಸಿದ್ಧತೆ ನಡೆದಿದೆ.
ಎಸ್‌ಐಟಿಯಿಂದ ಹೈಕೋರ್ಟ್ಗೆ ಅರ್ಜಿ: ಎಚ್.ಡಿ.ರೇವಣ್ಣ ಅವರ ಜಾಮೀನು ವಜಾಗೊಳಿಸಬೇಕು ಎಂದು ಎಸ್‌ಐಟಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಆ ಮೂಲಕ ರೇವಣ್ಣ ಅವರನ್ನು ಮತ್ತೇ ಜೈಲುಪಾಲು ಮಾಡಲು ಎಸ್‌ಐಟಿ ಸಿದ್ಧತೆ ನಡೆಸಿದೆ. ಮೇ ೩೧ಕ್ಕೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಯಿದ್ದು, ಹೈಕೋರ್ಟ್ ಜಾಮೀನು ರದ್ದು ಮಾಡಿದರೆ, ರೇವಣ್ಣ ಮತ್ತೇ ಜೈಲಿಗೆ ಹೋಗಬೇಕಾಗುತ್ತದೆ. ರೇವಣ್ಣ ಅವರಿಗೆ ಸೆಷನ್ಸ್ ಕೋರ್ಟ್ ಜಾಮೀನು ನೀಡಿತ್ತು.
