ಅಪರಾಧ ರಾಜಕೀಯ ಸುದ್ದಿ

ಅಷ್ಟಕ್ಕೂ ಪ್ರಜ್ವಲ್ ರೇವಣ್ಣ ಈಗ ಯಾವ ದೇಶದಲ್ಲಿ ಇದ್ದಾರೆ?

Share It

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣದ ಎ 1 ಆರೋಪಿಯಾಗಿರುವ ಮೋಸ್ಟ್ ವಾಂಟೆಡ್‌ ಆದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಿನ್ನೆ ದಿಢೀರನೆ ಭಾರತಕ್ಕೆ ವಾಪಸ್ಸಾಗುವ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು.

ಈ ವಿಡಿಯೋ ಮಾಡಿ ಪ್ರಜ್ವಲ್ ರೇವಣ್ಣ ನಾನಾಗೇ ಬಂದು ಎಸ್ಐಟಿ ತನಿಖಾ ತಂಡದ ಮುಂದೆ ಶರಣಾಗಿ ವಿಚಾರಣೆಗೆ ಸಹಕರಿಸುವೆ ಎಂದು ಹೇಳಿದ್ದರು.
ಈ ರೀತಿ ದಿಢೀರನೆ ಪ್ರಜ್ವಲ್ ರೇವಣ್ಣ ಶರಣಾಗತಿಯ ನಾಟಕವಾಡಿದರು ಏಕೆ? ಎಂಬ ಸತ್ಯ ಇದೀಗ ಬಯಲಾಗಿದೆ.ಏ 21 ರಂದು ಯಾವಾಗ ಕರ್ನಾಟಕ ಸರ್ಕಾರ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ನೀಡಿರುವ ಪಾಸ್ ಪೋರ್ಟ್ ರದ್ದುಗೊಳಿಸಿ ಎಂದು ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆಗೆ ಮನವಿ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ತಾನು ಪಾಸ್ ಪೋರ್ಟ್ ರದ್ದುಗೊಳ್ಳುವ ಕಾರಣ ಬೆಂಗಳೂರಿಗೆ ಬರಲೇಬೇಕೆಂಬ ವಾಸ್ತವ ಸಂಗತಿ ಅರಿತ ಪ್ರಜ್ವಲ್ ನೇರವಾಗಿ ಇನ್ನೇನೂ ದಾರಿ ಕಾಣದೆ ವಿಡಿಯೋ ಮಾಡಿ ಮೇ 31ರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ವಿಮಾನದ ಮೂಲಕ ಬರುತ್ತೇನೆ, ಇಷ್ಟು ದಿನ ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಕೇಳಿ ಕೇಳಿ ಡಿಪ್ರೆಶನ್ ಗೆ ಹೋಗಿದ್ದೆ, ಅದಕ್ಕಾಗಿ ಇದೀಗ ಚಿಕಿತ್ಸೆ ಪಡೆದು ಗುಣಮುಖನಾಗಿ ಬರುವುದು ತಡವಾಗಿದೆ, ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಅಜ್ಜ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ತಂದೆತಾಯಿಗಳು ಕ್ಷಮಿಸಿ ಎಂದು ವಿನಂತಿ ಮಾಡಿಕೊಂಡಿದ್ದರು.

ಇಷ್ಟಾದರೂ ಪ್ರಜ್ವಲ್ ರೇವಣ್ಣ ಯಾವ ದೇಶ, ಯಾವ ನಗರ ಅಥವಾ ಯಾವ ಸ್ಥಳದಿಂದ ಈ ಗೌಪ್ಯ ವಿಡಿಯೋ ಮಾಡಿದ್ದರು ಎಂದು ಎಸ್ಐಟಿ ತನಿಖಾ ತಂಡಕ್ಕೂ ಕಂಡುಹಿಡಿಯಲಾಗಲಿಲ್ಲ. ಆದರೆ ಇದೀಗ ಪ್ರಜ್ವಲ್ ರೇವಣ್ಣ ನಿನ್ನೆ ಗೌಪ್ಯವಾಗಿ ಆ ವಿಡಿಯೋ ಮಾಡಿ ಕಳುಹಿಸಿದ್ದು ಎಲ್ಲಿಂದ? ಎಂಬ ರಹಸ್ಯ ಕೊನೆಗೂ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತನಿಖಾ ತಂಡಕ್ಕೆ ಲಭ್ಯವಾಗಿದೆ. ಬೆಂಗಳೂರಿಗೆ ಬರುವುದಾಗಿ ಸೋಮವಾರವಷ್ಟೇ ಪ್ರಜ್ವಲ್​ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಪ್ರಜ್ವಲ್​ ವಿಡಿಯೋ ಮಾಡಿರುವ ಸ್ಥಳವನ್ನು ಇದೀಗ ಎಸ್​ಐಟಿ ಪತ್ತೆ ಮಾಡಿದೆ.

ಯೂರೋಪ್​​ನ ಹಂಗೇರಿಯ ಬುಡಾಪೆಸ್ಟ್​​ನಿಂದ ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಡಿಯೋ ರಿಲೀಸ್ ಆದ ಮೊಬೈಲ್ ಐಪಿ ಅಡ್ರೆಸ್ ಟ್ರೇಸ್ ಮಾಡುವ ಮೂಲಕ ಎಸ್​​ಐಟಿ ಈ ಮಾಹಿತಿ ಕಲೆ ಹಾಕಿದೆ. ವಿಡಿಯೋ ಹೇಳಿಕೆ ಬಿಡುಗಡೆಗೂ ಎರಡು ದಿನ ಮೊದಲೇ ರೆಕಾರ್ಡ್​ ಆಗಿತ್ತು ಎಂಬುದನ್ನೂ ಎಸ್​ಐಟಿಯ ಟೆಕ್ನಿಕಲ್ ಟೀಮ್ ಪತ್ತೆ ಮಾಡಿದೆ.

ಪ್ರಜ್ವಲ್ ದೇಶಕ್ಕೆ ಬರುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲು ಎಸ್​ಐಟಿ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ನಂತರ ವಿದೇಶದಲ್ಲಿದ್ದ ಪ್ರಜ್ವಲ್ ಬರೋಬ್ಬರಿ ಒಂದು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಮೊದಲಿಗೆ ಅವರು ಜರ್ಮನಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಮೇ 31ರಂದು ಬೆಳಗ್ಗೆ 10.30ಕ್ಕೆ ಎಸ್​​ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ವಿಡಿಯೋ ಹೇಳಿಕೆಯಲ್ಲಿ ಪ್ರಜ್ವಲ್ ಹೇಳಿದ್ದರು. ಅಲ್ಲದೆ, ತಂದೆ- ತಾಯಿ, ತಾತನ ಕ್ಷಮೆಯಾಚಿಸಿದ್ದರು. ಅಲ್ಲದೇ ಜನರು, ಪಕ್ಷದ ಕಾರ್ಯಕರ್ತರ ಬಳಿಯೂ ಕ್ಷಮೆ ಕೋರಿದ್ದರು. ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು ಎಂದೂ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದರು.


Share It

You cannot copy content of this page