ಬೆಂಗಳೂರು; ಆರೋಗ್ಯ ಇಲಾಖೆಯಲ್ಲಿನ ಸಿವಿಲ್ ಸೇವೆಗಳ ಸಿಬ್ಬಂದಿಯ ಸಾರ್ವತ್ರಿಕ ವರ್ಗಾವಣೆಗೆ ಇಲಾಖೆ ತೀರ್ಮಾನಿಸಿದ್ದು, ಜೂನ್ 12 ರಿಂದ 26 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದೆ.
ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ಕಾಯಿದೆ ಅನ್ವಯ ಅರ್ಜಿ ಕರೆದು, ನಂತರ ಸಮಾಲೋಚನೆ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಪ್ರಕ್ರಿಯೆ ಏಪ್ರಿಲ್ ಮತ್ತು ಮೇ ನಲ್ಲಿ ಪೂರ್ಣವಾಗಬೇಕಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿ ಪ್ರಕ್ರಿಯೆ ಆರಂಭವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಕೋವಿಡ್ ಕಾರಣದಿಂದಾಗಿ 2010ರಿಂದ ಈವರೆಗೆ ವರ್ಗಾವಣೆ ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ, ಸರಕಾರ ಈ ವರ್ಷ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ವೈದ್ಯಾಧಿಕಾರಿಗಳ ಹುದ್ದೆ ಸೇರಿದಂತೆ ಗ್ರೂಪ್ ಎ, ಬಿ, ಸಿ ಮತ್ತು ಡಿ ಸಿಬ್ಬಂದಿಯ ವರ್ಗಾವಣೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
ಅರ್ಜಿಯನ್ನು ಜೂನ್ 12 ರಿಂದ 26 ರವರೆಗೆ ಸಲ್ಲಿಸಬಹುದು. ಜುಲೈ12 ಕ್ಕೆ ಆದ್ಯತಾ ಪಟ್ಟಿ ಪ್ರಕಟವಾಗಲಿದ್ದು, ಜುಲೈ18 ರಿಂದ ಸಮಾಲೋಚನೆ ನಡೆಸಿ, ಜುಲೈ31 ರಂದು ವರ್ಗಾವಣೆ ಅಂತಿಮ ಪಟ್ಟಿಯನ್ನು ಪ್ರಕಟ ಮಾಡಲು ತೀರ್ಮಾನಿಸಿದೆ. ಈ ವೇಳಾಪಟ್ಟಿಯಂತೆ ವರ್ಗಾವಣೆ ಪ್ರಕ್ರಿಯೆ ನಡೆಸಲು ಅನುಮತಿ ನೀಡುವಂತೆ ಸರಕಾರದ ಪ್ರಧಾನ ಕಾರ್ಯದರ್ಶಿಯವರಿಗೆ, ಆರೋಗ್ಯ ಇಲಾಖೆ ಆಯುಕ್ತರು ಪತ್ರ ಬರೆದಿದ್ದಾರೆ.
