ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿ ಇನ್ನಿತರೆ ಜಾಹೀರಾತುಗಳ ತೆರವು ಹಾಗೂ ಅವುಗಳನ್ನು ನಿಯಂತ್ರಿಸಲು “ಜಾಹೀರಾತು ಮುಕ್ತ ಅಭಿಯಾನ” ಆರಂಭಿಸಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018″ ರಲ್ಲಿ ಅಂಗಡಿ ಮುಂಗಟ್ಟು ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರೆ ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಮತ್ತು ಸೀಮಿತ ಅಳತೆಗೆ(ಪಿಪಿಪಿ ಯೋಜನೆಗಳು ಸೇರಿ) ಅನುಮತಿಸಲು ಮಾತ್ರ ಅವಕಾಶವಿರುತ್ತದೆ.
ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕ ಅಳವಡಿಸಿ ವಾಣಿಜ್ಯ ಜಾಹೀರಾತು ಪ್ರದರ್ಶಿಸುವುದನ್ನು, ಎಲ್.ಇ.ಡಿ ಜಾಹೀರಾತು ಪ್ರದರ್ಶಿಸುವುದನ್ನು ಹಾಗೂ ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ ಸಮಾರಂಭ ಕುರಿತ ಜಾಹೀರಾತು / ಪ್ರಕಟಣೆಗಳ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬಾವುಟಗಳು ಇತ್ಯಾದಿ ಅಳವಡಿಸುವುದನ್ನು ನಿಷೇದಿಸಲಾಗಿದ್ದರೂ ಸಹ ಮತ್ತೆ ಮತ್ತೆ ಅಳವಡಿಸುತ್ತಿರುವುದರಿಂದ ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಅಲ್ಲದೇ ನಗರದ ಸೌಂದರ್ಯ ಹಾಳಾಗುತ್ತಿದೆ ಮತ್ತು ಪರಿಸರಕ್ಕೆ ಮಾರಕವಾಗಿರುತ್ತದೆ.
ಆದ್ದರಿಂದ ನಗರದ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ, ಅನಧಿಕೃತ ವಾಣಿಜ್ಯ ಜಾಹೀರಾತುಗಳು, ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು, ಇನ್ನಿತರೆ ಮುದ್ರಣ ಪ್ರಕಟಣೆ/ಜಾಹೀರಾತು ಹಾಗೂ ಖಾಸಗಿ ಸ್ವತ್ತುಗಳಲ್ಲಿ ಅಳವಡಿಸಿರುವ ವಾಣಿಜ್ಯ ಜಾಹೀರಾತುಗಳು, ಬೃಹತ್ ಎಲ್.ಇ.ಡಿ ಜಾಹೀರಾತುಗಳು, ಸೈಕಲ್ ಜಾಹೀರಾತುಗಳು, ವಾಣಿಜ್ಯ ಜಾಹೀರಾತುಗಳು, ವಾಹನ ಜಾಹೀರಾತುಗಳು ಇತರೇ ಜಾಹೀರಾತುಗಳು ಕಂಡು ಬಂದಲ್ಲಿ ಕೇಂದ್ರ ಕಛೇರಿ ಹಾಗೂ ಆಯಾ ವಲಯಗಳ ಕಛೇರಿಗಳಿಗೆ ಮಾಹಿತಿ ನೀಡಲು ನಾಗರೀಕರಲ್ಲಿ ಮನವಿ ಮಾಡಿದೆ.
ಮಾಹಿತಿ ನೀಡಿದಂತಹ ಸ್ಥಳದಲ್ಲಿ ಯಾವುದೇ ಅನಧಿಕೃತ ಜಾಹೀರಾತು ಪ್ರದರ್ಶನ ಮತ್ತು ಜಾಹೀರಾತು ಫಲಕಗಳನ್ನು ಪಾಲಿಕೆ ಸಂಬಂಧಪಟ್ಟವರಿಗೆ ದಂಡ ವಿಧಿಸಿ ತಕ್ಷಣವೇ ತೆರವುಗೊಳಿಸುವುದು. ಅಲ್ಲದೇ ಇದಕ್ಕೆ ಸಂಬಂಧಿಸಿ ಅಪರಾಧ ಎಸಗಿರುವವರಿಗೆ ಕರ್ನಾಟಕ ಮುಕ್ತ ಸ್ಥಳಗಳ(ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಅಡಿಯಲ್ಲಿ ಎಫ್.ಐ.ಆರ್ ದಾಖಲು ಮಾಡಿ, ಕಾನೂನು ರೀತಿಯ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಬಿಬಿಎಂಪಿ ಅನಧಿಕೃತ ವಿವಿಧ ಜಾಹೀರಾತುಗಳನ್ನು ನಿಯಂತ್ರಿಸುವ ಮುಕ್ತ ಅಭಿಯಾನಕ್ಕೆ ನಾಗರೀಕರಲು ಕೈ ಜೋಡಿಸಿ ಬೆಂಬಲಿಸಲು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಕೋರಿರುತ್ತಾರೆ.
