ಬೆಂಗಳೂರು: ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಆದಿಲ್ ಶವಪರೀಕ್ಷೆ ವರದಿ ಬಹಿರಂಗವಾಗಿದ್ದು,ಆತ ಲಾಕಪ್ ಡೆತ್‌ನಿಂದ ಸತ್ತಿಲ್ಲ, ‘ಲೋ ಬಿಪಿ’ ಕಾರಣದಿಂದ ಸಾವನ್ನಪ್ಪಿದ್ದಾನೆ ಎಂಬ ರಿಪೋರ್ಟ್ ಬಿಜೆಪಿ ಪಾಲಿಗೆ ಅಸ್ತ್ರ ಆಗಲಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಠಾಣೆಯ ಮೇಲೆ ಮುಗಿಬಿದ್ದ ಮುಸ್ಲಿಂ ಸಮುದಾಯದ ಕೆಲ ಕಿಡಿಗೇಡಿಗಳು ಪೊಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ನಡೆಸಿದ್ದನ್ನು ಈಗಾಗಲೇ ಹಿಂದೂಪರ ಸಂಘಟನೆಗಳು ಅಸ್ತ್ರವಾಗಿ ಬಳಸಿಕೊಂಡಿ ಪ್ರತಿಭಟನೆ ನಡೆಸುತ್ತಿವೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಕೆ.ಜೆ.ಹಳ್ಳಿ, ಡಿ.ಜೆ ಹಳ್ಳಿಯಂತಹ ಪ್ರಕರಣ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಆಗಾಗ ಆಗುತ್ತಲೇ ಇರುತ್ತದೆ ಎಂದು ಟೀಕಿಸುತ್ತಿದ್ದಾರೆ.
ಈ ನಡುವೆ ಆರೋಪಿಯ ಶವಪರೀಕ್ಷೆ ವರದಿ ಲಾಕಪ್ ಡೆತ್ ಅಲ್ಲ ಎನ್ನುತ್ತಿದ್ದಂತೆ, ಪ್ರರಕಣದಲ್ಲಿ ಲಾಕಪ್ ಡೆತ್ ಎಂದು ಆರೋಪ ಮಾಡಿ, ಪ್ರತಿಭಟನೆ ಮಾಡಿದ ಸಮುದಾಯವನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡು, ಕಾಂಗ್ರೆಸ್ ಮೇಲೆ ಮುಗಿಬೀಳಲಿದೆ. ಕಾನೂನಿನ ವಿಷಯ ಬಂದಾಗ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಮ್ಮ ಬ್ರದರ‍್ಸ್ ಗಳಿಗೆ ಹೆಚ್ಚಿನ ರಿಯಾಯಿತಿ ಕೊಡುತ್ತಾರೆ ಎಂಬುದು ಬಿಜೆಪಿಗರ ವಾದವಾಗಿರಲಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ತಪ್ಪು ಮಾಡಿಲ್ಲದಿದ್ದರೂ, ಒಂದು ಸಮುದಾಯದ ಒತ್ತಾಯಕ್ಕಾಗಿ ಕಾಂಗ್ರೆಸ್ ಸರಕಾರ ಡಿವೈಎಸ್‌ಪಿ, ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಗಳನ್ನು ಅಮಾನತು ಮಾಡಿದ್ದು, ಪೊಲೀಸರ ನೈತಿಕತೆ ಕಸಿಯುವ ಕೆಲಸ ಎಂದು ಬಿಜೆಪಿ ಈಗಾಗಲೇ ಕಾಂಗ್ರೆಸ್ ಮೇಲೆ ಮುಗಿಬೀಳುತ್ತಿದೆ. ಇನ್ನೀಗ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್‌ನ ಈ ನೀತಿಯನ್ನು ಬಿಜೆಪಿ ಟೀಕಿಸಲಿದೆ.
ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದವರು ಮತ್ತು ಪೊಲೀಸ್ ವಾಹನ ಜಖಂಗೊಳಿಸಿದವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಿರುವ ಬಿಜೆಪಿ, ಇಂತಹ ಪ್ರಕರಣಗಳಲ್ಲಿ ಕಾಂಗ್ರೆಸ್ ಸರಕಾರ ಯಾವಾಗಲೂ, ಅಲ್ಪಸಂಖ್ಯಾತರ ಪರ ನಿಲ್ಲುವ ಮೂಲಕ ಹಿಂದೂಗಳ ಭಾವನೆ ಜತೆಗೆ ಆಟವಾಡುತ್ತದೆ. ಕಾಂಗ್ರೆಸ್ ಎಂದೆಂದು ಹಿಂದೂ ವಿರೋಧಿ ಎಂದು ಬಿಂಬಿಸಲು ಬಿಜೆಪಿ ಈ ಘಟನೆಯನ್ನು ದಾಳವಾಗಿ ಬಳಸಿಕೊಳ್ಳಲಿದೆ.
