ಬೆಂಗಳೂರು : ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳು ಅದೇಗೆ ಕೆಲಸ ಮಾಡುತ್ತಿವೆಯೆಂದರೆ, ರಾಹುಲ್ ಗಾಂಧಿ ಹೇಳಿದ ಕಟಾಖಟ್ ಮಾತಿಗೆ ಸಾವಿರಾರು ಮಹಿಳೆಯರು ಪೋಸ್ಟ್ ಆಫೀಸ್‌ನಲ್ಲಿ ಖಾತೆ ತೆರೆಯಲು ಮುಂದಾಗಿದ್ದಾರೆ.
ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಮಹಿಳೆಯರ ಖಾತೆಗೆ ಪ್ರತಿ ತಿಂಗಳು ೮೫೦೦ ಹಾಕುತ್ತೇವೆ. ನಾವು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ, ಜುಲೈ ತಿಂಗಳಿಂದಲೇ ನಿಮ್ಮ ಖಾತೆಗೆ ಹಣ ಕಟಾಖಟ್ ಎಂದು ಬರುತ್ತಿರುತ್ತದೆ ಎಂದು ಹೇಳಿದ್ದರು. ಈ ಭಾಷಣದ ತುಣುಕು ಭಾರಿ ವೈರಲ್ ಆಗಿತ್ತು.
ಈ ಭಾಷಣದ ವೈರಲ್ ತುಣುಕನ್ನು ನೋಡಿ ಜನ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಬೆಂಗಳೂರಿನ ಮುಖ್ಯ ಅಂಚೆ ಕಚೇರಿಯಲ್ಲಿ ಎರಡು ದಿನದಿಂದ ಸಾವಿರಾರು ಮಹಿಳೆಯರು ಪೋಸ್ಟ್ ಆಫೀಸ್ ಡಿಜಿಟಲ್ ಖಾತೆ ತೆರೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ನಿತ್ಯ ಸಾವಿರಾರು ಖಾತೆಗಳು ಓಪನ್ ಆಗುತ್ತಿವೆ ಎಂದು ಅಂಚೆ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.
ಎರಡು ದಿನದಿಂದ ಅಂಚೆ ಕಚೇರಿ ಮುಂದೆ ಕಾಣಿಸಿಕೊಳ್ಳುತ್ತಿರುವ ಮಹಿಳೆಯರ ಸಾಲಿನಿಂದ ಕೇಂದ್ರ ಅಂಚೆ ಕಚೇರಿಯ ಸಿಬ್ಬಂದಿ ಹೈರಾಣಾಗಿದ್ದಾರೆ. ಸಧ್ಯಕ್ಕೆ ಯಾವುದೇ ಹಣ ನಿಮ್ಮ ಖಾತೆಗೆ ಬರುವುದಿಲ್ಲ ಎಂದು ಹೇಳಿದರೂ ಕೇಳುತ್ತಿಲ್ಲ. ಹೀಗಾಗಿ, ಅನಿವಾರ್ಯವಾಗಿ ಅಕೌಂಟ್ ಓಪನ್ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ ಅಂಚೆ ಕಚೇರಿ ಮುಖ್ಯಸ್ಥರು.
ಗ್ರಾಮೀಣ ಪ್ರದೇಶಗಳಲ್ಲಿ ಸಧ್ಯಕ್ಕೆ ಅಂತಹ ಯಾವುದೇ ಒತ್ತಡವಿಲ್ಲ, ಗ್ರಾಮೀಣ ಭಾಗದ ಮಹಿಳೆಯರು ಬಹುತೇಕ ಪೋಸ್ಟ್ ಆಫೀಸ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಈ ಕಾರಣದಿಂದ ಬಂದಿರಬಹುದು. ದುಡ್ಡು ಸರಕಾರ ಹಾಕುತ್ತೋ ಇಲ್ಲವೋ, ಮಹಿಳೆಯರು ಕಚೇರಿಗಳಿಗೆ ಬಂದು ಖಾತೆ ಮಾಡಿಕೊಡಲು ಕೇಳಿದರೆ ನಾವು ಹೊಸ ಡಿಜಿಟಲ್ ಖಾತೆಗಳನು ತೆರೆಯುತ್ತೇವೆ ಎನ್ನುತ್ತಾರೆ ಗ್ರಾಮೀಣ ಭಾಗದ ಪೋಸ್ಟ್ ಮಾಸ್ಟರ್‌ಗಳು
